ಮುಂಬೈ

ಗಿನ್ನಿಸ್ ದಾಖಲೆ ಪುಸ್ತಕ ಸೇರಿರುವ ವಿಶ್ವದ ಅತಿ ಉದ್ದದ ಉಗುರು ! ಮ್ಯೂಸಿಯಂಗೆ ನೀಡಲು ಮುಂದಾದ ಪುಣೆ ಮೂಲದ ವ್ಯಕ್ತಿ

Pinterest LinkedIn Tumblr

nail

ಪುಣೆ: ಕೈ ಬೆರಳುಗಳಲ್ಲಿ ಅತಿ ಹೆಚ್ಚು ಉದ್ದ ಉಗುರುಗಳನ್ನು ಬೆಳೆಸಿ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಹೆಸರು ನೋಂದಾಯಿಸಿದ ಪುಣೆ ಮೂಲದ ವ್ಯಕ್ತಿಯೊಬ್ಬರು ಈಗ ತಮ್ಮ ಉಗುರುಗಳನ್ನು ಈಗ ವಸ್ತು ಸಂಗ್ರಹಾಲಯಕ್ಕೆ ನೀಡಲು ಮುಂದಾಗಿದ್ದಾರೆ.

78 ವರ್ಷದ ಪುಣೆಯ ಶ್ರೀಧರ್ ಚಿಲಾಲ್ ಅವರು 1952ರಿಂದ ಎಡಗೈಯಲ್ಲಿ ಉಗುರನ್ನು ಬೆಳೆಸುತ್ತಿದ್ದು, ಇದೀಗ ಇವರ ಈ ಸಾಧನೆ ಈ ವರ್ಷದ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಮುದ್ರಣವಾಗಿದೆ. ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಹೆಸರು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈಗ ತಮ್ಮ ಕೈ ಬೆರಳಿನ ಉಗುರನ್ನು ವಸ್ತು ಸಂಗ್ರಹಾಲಯಕ್ಕೆ ನೀಡುವುದಾಗಿ ಹೇಳಿದ್ದಾರೆ.

1937 ವರ್ಷದಲ್ಲಿ ಹುಟ್ಟಿದ ಶ್ರೀಧರ್ ಚಿಲಾಲ್ ಅವರಿಗೆ ಈಗ 78 ವರ್ಷ. ತಮ್ಮ 15 ವರ್ಷದಲ್ಲಿ ಎಡಗೈ ಉಗುರನ್ನು ಬೆಳೆಸಲು ಆರಂಭಿಸಿದ ಇವರಿಗೆ ಆರಂಭದಲ್ಲಿ ಎಲ್ಲರೂ ಹೀಯಾಳಿಸುತ್ತಿದ್ದರಂತೆ. ಆದರೂ ಉದ್ದವಾದ ಉಗುರನ್ನು ಬೆಳೆಸಲೇಬೆಕೆಂದು ಹಟ ತೊಟ್ಟಿದ್ದ ಕಾರಣ ಈಗ ಇವರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಪ್ರೇರಣೆ ಏನು? ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರೊಬ್ಬರು ಉದ್ದವಾದ ಉಗುರನ್ನು ಬೆಳೆಸಿದ್ದರು. ಆದರೆ ಇವರ ಸ್ನೇಹಿತ ಉಗುರನ್ನು ಕತ್ತರಿಸಿದ್ದಕ್ಕೆ ಇವರಿಗೆ ಮತ್ತು ಸ್ನೇಹಿತನಿಗೆ ಆ ಶಿಕ್ಷಕರು ಸಿಕ್ಕಾಪಟ್ಟೆ ಹೊಡೆದರಂತೆ. ಪೆಟ್ಟು ತಿಂದ ಬಳಿಕ ಯಾಕೆ ಇಷ್ಟು ಹೊಡೆದಿದ್ದೀರಿ ಎಂದು ಕೇಳಿದ್ದಕ್ಕೆ ನಿಮಗೆ ಗೊತ್ತಿಲ್ಲ. ಉಗುರು ಬೆಳೆಸಿದವರಿಗೆ ಆದರ ನೋವು ಏನು ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದ್ದರಂತೆ. ಈ ಮಾತು ಪ್ರೇರಣೆಯಾಗಿ ಉಗುರು ಬೆಳೆಸಲು ಆರಂಭಿಸಿದೆ ಎಂದು ಶ್ರೀಧರ್ ಚಿಲಾಲ್ ಹೇಳುತ್ತಾರೆ.

ಎಷ್ಟು ಉದ್ದವಿದೆ: ಹೆಬ್ಬೆರಳಿನ ಉಗುರು 2 ಮೀಟರ್ ಉದ್ದವಿದ್ದರೆ, ಮಧ್ಯದ ಬೆರಳು 186.6 ಸೆಂಮೀ, ಉಂಗುರದ ಬೆರಳು 181.6 ಸೆಂ.ಮೀ, ಕಿರು ಬೆರಳು 179.1 ಸೆಂ.ಮೀ, ತೋರು ಬೆರಳು 164.5 ಸೆ.ಮೀ ಉದ್ದವಿದೆ.

ಹುಡುಗಿ ಸಿಕ್ಕಿರಲಿಲ್ಲ: ಫೋಟೋಗ್ರಫಿ ಉದ್ಯೋಗ ಮಾಡುತ್ತಿದ್ದ ಇವರ ಉಗುರನ್ನು ನೋಡಿ ಆರಂಭದಲ್ಲಿ ಹುಡುಗಿಯರು ಮದುವೆಯಾಗಲು ಒಪ್ಪುತ್ತಿರಲಿಲ್ಲ. 10- 12 ಹುಡುಗಿಯರು ತಿರಸ್ಕರಿಸಿದ ಮೇಲೆ 29ನೇ ವಯಸ್ಸಿನಲ್ಲಿ ನಾನು ಮದುವೆಯಾದೆ. 78ನೇ ವಯಸ್ಸಿನಲ್ಲಿ ಇಷ್ಟೊಂದು ಉದ್ದದ ಉಗುರನ್ನು ಹಿಡಿದುಕೊಂಡು ಹೋಗುವುದು ಅಪಾಯಕಾರಿ. ಹೀಗಾಗಿ ಉಗುರನ್ನು ಸಂರಕ್ಷಣೆ ಮಾಡಲು ವಸ್ತು ಸಂಗ್ರಹಾಲಯಕ್ಕೆ ನೀಡಲು ಮುಂದಾಗಿದ್ದೇನೆ ಎಂದು ಶ್ರೀಧರ್ ಚಿಲಾಲ್ ತಿಳಿಸಿದ್ದಾರೆ.

Write A Comment