ಬೆಂಗಳೂರು, ಅ. 1: ಟೋಲ್ ಪಾವತಿಯ ಹಾಲಿ ವ್ಯವಸ್ಥೆಯನ್ನು ಬದಲಾಯಿಸಿ ಹಾಗೂ ಏಕ ಕಂತಿನಲ್ಲಿ ತೆರಿಗೆ ಪಾವತಿ ಮಾಡುವ ಕೇಂದ್ರ ಸರಕಾರದ ಹೊಸ ವ್ಯವಸ್ಥೆಯನ್ನು ರದ್ದುಪಡಿಸಬೇಕು ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಷ್ಟ್ರಾದ್ಯಂತ ಸರಕು ಸಾಗಣೆ ಲಾರಿ ಮಾಲಕರು ಅನಿರ್ದಿಷ್ಟಾವಧಿ ಮುಷ್ಕರವನ್ನು ಗುರುವಾರ ಆರಂಭಿಸಿದ್ದು, ರಾಜ್ಯದ ಲಾರಿ ಮಾಲಕರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್(ಎಐಎಂಟಿಸಿ) ಪ್ರತಿನಿಧಿಗಳು ಬುಧವಾರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಲಾರಿ, ಟ್ರಕ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರಕ್ಕೆ ರಾಷ್ಟ್ರಾದ್ಯಂತ ಒಟ್ಟು 93 ಲಕ್ಷ ಲಾರಿ, ಟ್ರಕ್‌ಗಳು ಹಾಗೂ ರಾಜ್ಯದ 9 ಲಕ್ಷ ಲಾರಿ, ಟ್ರಕ್‌ಗಳೂ ಸಂಚಾರ ಸ್ಥಗಿತಗೊಳಿಸಿವೆ ಎಂದು ಲಾರಿ ಮಾಲಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ. ಸ್ಪೀಡ್ ಗವರ್ನರ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿ ಈ ಮುಷ್ಕರ ನಡೆಸಲಾಗುತ್ತಿದ್ದು, ಮಾರುಕಟ್ಟೆಗೆ ಬರುವ ಲಾರಿಗಳು ಸಂಪೂರ್ಣ ಸ್ಥಗಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಸಾಮಗ್ರಿ, ತರಕಾರಿಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮಾತ್ರವಲ್ಲ, ಇವುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ಆಹಾರ ಪದಾರ್ಥಗಳ ಕೊರತೆ ಉಂಟಾಗಲಿದೆ. ಮರಳು ಲಾರಿಗಳೂ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಪೂರೈಕೆಯನ್ನು ಮುಷ್ಕರದ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ಇದರಿಂದ ಹಾಲು, ಔಷಧ ಸಾಮಗ್ರಿ, ಪತ್ರಿಕೆ, ನೀರು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಂದರೆಯಾಗಿಲ್ಲ.
10 ಸಾವಿರ ಕೋಟಿ ನಷ್ಟ: ಗುರುವಾರದಿಂದ ನಡೆಯುವ ಮುಷ್ಕರದಿಂದಾಗಿ ಪ್ರತೀದಿನ 10 ಸಾವಿರ ಕೋಟಿ, ಟ್ರಕ್ ಮಾಲಕರಿಗೆ ಪ್ರತಿ ದಿನ 1,500 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಎಐಎಂಟಿಸಿಯ ಅಧ್ಯಕ್ಷ ಭೀಮ್ ವಾದ್ವಾ ಅಂದಾಜಿಸಿದ್ದಾರೆ.
