ಹೊಸದಿಲ್ಲಿ, ಅ.1: ಬುಧವಾರ ಅಂತ್ಯಗೊಂಡಿರುವ ‘ಮೂರು ತಿಂಗಳ ವಿಶೇಷ ಗಡುವು’ನಲ್ಲಿ ಭಾರತೀಯರು ವಿದೇಶಗಳಲ್ಲಿ ಅಕ್ರಮವಾಗಿ ಹೊಂದಿರುವ ಸುಮಾರು ರೂ. 3,770 ಕೋಟಿ ರೂ.ಗಳಷ್ಟು ಕಪ್ಪು ಹಣ ಮತ್ತು ಆಸ್ತಿ ಬಹಿರಂಗವಾಗಿದೆಯೆಂದು ಸರಕಾರವಿಂದು ತಿಳಿಸಿದೆ.
ಆದಾಗ್ಯೂ, ಘೋಷಿಸಲ್ಪಟ್ಟಿರುವ ಹಣವು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ನಲ್ಲಿ ತನ್ನ ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಕಟಿಸಿದ್ದುದಕ್ಕಿಂತ ಬಹಳ ಕಡಿಮೆಯಾಗಿದೆ.
ಘೋಷಿಸದ ಆದಾಯವನ್ನು ಬಹಿರಂಗಪಡಿಸಲು ನಾವು ಸ್ವಲ್ಪ ಕೃಪಾವಧಿಯನ್ನು ನೀಡಿದ್ದೇವೆ. ಇಂದು ಜನರು ಮುಂದೆ ಬಂದು ರೂ. 6,500 ಕೋಟಿಗಳಷ್ಟು ಆದಾಯವನ್ನು ಘೋಷಿಸ ಬಹುದೆಂದು ನಾನು ಹೇಳಬಲ್ಲೆನೆಂದು ಪ್ರಧಾನಿ ತಿಳಿಸಿದ್ದರು. ವಿದೇಶಿ ಖಾತೆಗಳಲ್ಲಿರಿಸಿರುವ ಹಣದ ಬಗ್ಗೆ ತನಗೆ 638 ಘೋಷಣೆಗಳು ಬಂದಿವೆಯೆಂದು ಸರಕಾರ ಹೇಳಿಕೆ ನೀಡಿದೆ.
ಘೋಷಣೆಗಳನ್ನು ಸ್ವೀಕರಿಸಲು ನಿಗದಿಪಡಿಸಲಾಗಿದ್ದ ಅಧಿಕಾರಿಗಳು ನಿನ್ನೆ ಮಧ್ಯರಾತ್ರಿಯ ತನಕ ಕೆಲಸ ಮಾಡಿದೆಯೆಂದು ಅದು ಹೇಳಿದೆ.
ಆದಾಯ ಘೋಷಿಸಿ ಪರಿಶುದ್ಧರಾದವರು ಸುಮಾರು ಶೇ.60ರಷ್ಟು ತೆರಿಗೆ ಹಾಗೂ ದಂಡ ಪಾವತಿಸುವ ಮೂಲಕ ಕಾನೂನು ಕ್ರಮ ಅಥವಾ ಕಾರಾಗೃಹ ಶಿಕ್ಷೆಯಿಂದ ಪಾರಾಗಬಹುದು.
ಅಂತಿಮ ಗಡುವಿನ ಬಳಿಕ ತೆರಿಗೆ ಹಾಗೂ ದಂಡ ಇಮ್ಮಡಿಯಾಗಿ ಶೇ.120ರಷ್ಟಾಗುತ್ತದೆ. ತೆರಿಗೆಗಳ್ಳರು 10 ವರ್ಷಗಳ ಸೆರೆವಾಸ ಅನುಭವಿಸಬೇಕಾಗುತ್ತದೆ.
ತೆರಿಗೆಗಳ್ಳರು ತಮ್ಮ ಕಾನೂನುಬಾಹಿರ ಸಂಪತ್ತನ್ನು ಘೋಷಿಸಲು ಅವಕಾಶ ನೀಡಿದ್ದಲ್ಲಿ ಹಾಗೂ ಹಗುರ ದಂಡ ವಿಧಿಸಿದಲ್ಲಿ ಕೋಟ್ಯಂತರ ರೂ. ಕಪ್ಪು ಹಣ ಹೊರ ಬೀಳಲು ಸಹಾಯವಾಗಬಹುದೆಂದು ಸರಕಾರ ಆಶಿಸಿತ್ತು. ಇದು ಕಳೆದ ವರ್ಷದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ತ್ವದ ಭರವಸೆಯಾಗಿತ್ತು.
ವಿದೇಶಿ ಖಾತೆಗಳಿಂದ ಅನಧಿಕೃತ ಸಂಪತ್ತನ್ನು ಮರಳಿ ತಂದಲ್ಲಿ ಪ್ರತಿ ನಾಗರಿಕನಿಗೆ ರೂ. 15 ಲಕ್ಷ ನೀಡಲು ಸಾಧ್ಯವಾಗಬಹುದೆಂದು ಮೋದಿ ಹೇಳಿದ್ದರು. ಇದು ಕಳೆದ ವರ್ಷ ಅಧಿಕಾರದಿಂದ ಉಚ್ಚಾಟಿಸಲ್ಪಟ್ಟಿರುವ ಕಾಂಗ್ರೆಸ್ ಆಗಾಗ ಕುಟುಕುವ ವಿಷಯವಾಗಿದೆ.
ವಿದೇಶಗಳಲ್ಲಿ ಠೇವಣಿಯಿರಿಸಿರುವ ಕಪ್ಪು ಹಣದ ಅಧಿಕೃತ ಅಂದಾಜು ಇಲ್ಲವಾದರೂ, 2002 ಹಾಗೂ 2011ರ ನಡುವೆ ಹಣದ ಹೊರ ಹರಿವು 334 ಶತಕೋಟಿ ಡಾಲರ್ ಅಥವಾ ರೂ. 22.5 ಲಕ್ಷ ಕೋಟಿಗಳಾಗಬಹುದೆಂದು ವಾಶಿಂಗ್ಟನ್ ಮೂಲದ ಚಿಂತನ ಚಿಲುಮೆ ಗ್ಲೋಬಲ್ ಫೈನಾಶ್ಶಿಯಲ್ ಇಂಟಗ್ರಿಟಿ ಅಂದಾಜಿಸಿದೆ.
ಕಪ್ಪು ಹಣದ ಕುರಿತು ಮಾಹಿತಿ ಪಡೆಯಲು ಭಾರತವು ಸ್ವಿಝರ್‌ಲೆಂಡ್ ಸಹಿತ ಹಲವು ದೇಶಗಳೊಂದಿಗೆ ಕೆಲಸ ಮಾಡಿತ್ತು.
ಜಿನಿವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆನ್ನಲಾದ 628 ಜನರ ಪಟ್ಟಿಯೊಂದನ್ನು 2010ರಲ್ಲಿ ಫ್ರಾನ್ಸ್, ಭಾರತಕ್ಕೆ ನೀಡಿತ್ತು. ಸರಕಾರ ಇದುವರೆಗೆ 121 ಪ್ರಕರಣಗಳಲ್ಲಿ ಕ್ರಮ ಕೈಗೊಂಡಿದೆ.
90 ದಿನಗಳ ಅನುಸರಣೆ ಕಿಂಡಿಯು ಹೊಸ ಕಪ್ಪು ಹಣ ಕಾಯ್ದೆಯ ಭಾಗವಾಗಿದ್ದು, ವಿದೇಶಗಳಲ್ಲಿ ಖಾತೆ ಹೊಂದಿದವರನ್ನು ಗುರುತಿಸುವುದು ಹಾಗೂ ನಿಯಂತ್ರಕರ ತಂಡವೊಂದನ್ನು ಹಾಗೂ ಮಾಜಿ ನ್ಯಾಯಾಧೀಶರನ್ನು ನೇಮಿಸಿದೆ.
ವಿದೇಶಿ ಕಪ್ಪುಹಣ ಸಂಗ್ರಹದ ವಿರುದ್ಧ ಕ್ರಮ: ಸರಕಾರ
ಹೊಸದಿಲ್ಲಿ, ಅ.1: ಕೇಂದ್ರ ಸರಕಾರದ ಆದಾಯ ತೆರಿಗೆ ಯೋಜನೆಯಡಿಯಲ್ಲಿ ವಿದೇಶಗಳಲ್ಲಿನ ಕಪ್ಪುಹಣ ಮತ್ತು ಸಂಪತ್ತನ್ನು ಬಹಿರಂಗಗೊಳಿಸದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗುವುದು ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ಮುಕ್ತಾಯಗೊಂಡಿರುವ ಈ ಯೋಜನೆಯನ್ನು 638 ಜನರು ಇಲ್ಲವೇ ಕಂಪೆನಿಗಳು ಬಳಸಿಕೊಂಡಿದ್ದು, ಈವರೆಗೆ 3,770 ಕೋಟಿ ರೂಪಾಯಿ ಕಪ್ಪು ಹಣ ಸಂಗ್ರಹವಾಗಿದೆ ಎಂದು ವರದಿಯಾಗಿದೆ.
ತಮ್ಮ ಸಂಪತ್ತಿನ ವಿಚಾರದಲ್ಲಿ ಶುದ್ಧಹಸ್ತರಾಗಿ ಹೊರಬರಲು ಜನರಿಗೆ ಒದಗಿಸಲಾಗಿರುವ ಏಕೈಕ ಅವಕಾಶ ಇದಾಗಿದೆ. ಯೋಜನೆಯ ಅವಧಿಯಲ್ಲಿ ನಿರ್ದಿಷ್ಟ ಮೊತ್ತದ ಹಣ ಸಂಗ್ರಹಣೆಯ ಉದ್ದೇಶ ಸರಕಾರಕ್ಕೆ ಇರಲಿಲ್ಲ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್‌ಮುಖ್ ಅಧಿಯಾ ಹೇಳಿದ್ದಾರೆ.
ಸೆ.30ರಂದು ಮುಕ್ತಾಯವಾದ 90 ದಿನಗಳ ಅವಧಿಯಲ್ಲಿ 638 ಜನರು ತಮ್ಮ ಅಕ್ರಮ ಸಂಪತ್ತಿನ ಘೋಷಣೆ ಮಾಡಿಕೊಂಡಿದ್ದಾರೆ. ಇದರ ಮೂಲಕ 3,770 ಕೋಟಿ ರೂಪಾಯಿಗೂ ಮಿಕ್ಕಿ ಕಪ್ಪು ಹಣದ ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ