ಕರ್ನಾಟಕ

ಜನ ಸಾಮಾನ್ಯರು ಮೆಚ್ಚುವಂತೆ ಕಾರ್ಯನಿರ್ವಹಿಸಿ: ವೌಲಾನ ಮುಫ್ತಿ ಅಶ್ರಫ್ ಅಲಿ

Pinterest LinkedIn Tumblr

Milli_Council-fiಬೆಂಗಳೂರು, ಅ. 1: ಜನ ಸಾಮಾನ್ಯರು ಮೆಚ್ಚುವ ರೀತಿಯಲ್ಲಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದು ಅಮೀರ್-ಎ-ಶರಿಯತ್ ವೌಲಾನ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ತಿಳಿಸಿದ್ದಾರೆ.

ನಗರದ ಸಬೀಲುರ್ರಶಾದ್(ಅರೆಬಿಕ್ ಕಾಲೇಜು) ಆವರಣದಲ್ಲಿ ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ವತಿಯಿಂದ ನೂತನ ಬಿಬಿಎಂಪಿ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಬಿಎಂಪಿಗೆ ಮುಸ್ಲಿಮ್ ಜನಪ್ರತಿನಿಧಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತರಾಗಿ ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು ಎಂದು ಅವರು ಹೇಳಿದರು.

ಜನಪ್ರತಿನಿಧಿಗಳು ಯಾವುದೋ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾಗಿರಬಾರದು. ನಮ್ಮದು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ದೇಶ. ಆದುದರಿಂದ, ಜನಪ್ರತಿನಿಧಿಗಳು ಎಲ್ಲರನ್ನ್ನೂ ಜೊತೆಯಲ್ಲಿ ಕರೆದೊಯ್ಯಬೇಕು ಎಂದು ಅಶ್ರಫ್ ಅಲಿ ಕರೆ ನೀಡಿದರು.

ಬೆಂಗಳೂರಿಗೆ ಉದ್ಯಾನನಗರಿ ಎಂಬ ಖ್ಯಾತಿಯಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ತನ್ನ ಸುಂದರತೆಯ ಬದಲು, ಕಸದ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಉದ್ಯಾನನಗರಿ, ಕಸದ ನಗರವಾಗಿ ಪರಿವರ್ತನೆಯಾಗಿದೆ. ವೈಜ್ಞಾನಿಕವಾಗಿ ಕಸವನ್ನು ವಿಲೇವಾರಿ ಮಾಡುವುದಕ್ಕೆ ಪಾಲಿಕೆ ಸದಸ್ಯರು ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.
ಸರಕಾರ ಹಾಗೂ ಪಾಲಿಕೆಯ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ನಿಮ್ಮ ಕಾರ್ಯವೈಖರಿ ಜನ ಸಾಮಾನ್ಯರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು ಎಂದು ಅಶ್ರಫ್ ಅಲಿ ಹೇಳಿದರು.
ನೂತನ ಪಾಲಿಕೆ ಸದಸ್ಯರಾದ ಶಕೀಲ್ ಅಹ್ಮದ್, ಎ.ಆರ್.ಝಾಕಿರ್, ಅಬ್ದುಲ್ ವಾಜಿದ್, ಮುಹಮ್ಮದ್ ಝಮೀರ್ ಶಾ, ನೌಶಾದ್ ಅಹ್ಮದ್, ಮುಜಾಹಿದ್ ಪಾಷ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ರಾಜ್ಯಾಧ್ಯಕ್ಷ ವೌಲಾನ ಎಜಾಝ್ ಅಹ್ಮದ್, ಉಪಾಧ್ಯಕ್ಷರಾದ ಮುಹಮ್ಮದ್ ಅಲಿ ಖಾಝಿ, ಸುಲೇಮಾನ್ ಖಾನ್, ವೌಲಾನ ಮುಸ್ತಫಾ ರಿಫಾಯಿ, ಪ್ರಧಾನ ಕಾರ್ಯದರ್ಶಿ ಸೈಯದ್ ಶಾಹೀದ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಂಗಳೂರಿಗೆ ಉದ್ಯಾನನಗರಿ ಎಂಬ ಖ್ಯಾತಿಯಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ತನ್ನ ಸೌಂದರ್ಯದ ಬದಲು, ಕಸದ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಉದ್ಯಾನನಗರಿ, ಕಸದ ನಗರವಾಗಿ ಪರಿವರ್ತನೆಯಾಗಿದೆ. ವೈಜ್ಞಾನಿಕವಾಗಿ ಕಸವನ್ನು ವಿಲೇವಾರಿ ಮಾಡುವುದಕ್ಕೆ ಪಾಲಿಕೆ ಸದಸ್ಯರು ಹೆಚ್ಚಿನ ಗಮನ ಹರಿಸಬೇಕು.
-ಅಶ್ರಫ್ ಅಲಿ

Write A Comment