ಕರ್ನಾಟಕ

‘ಮಹದಾಯಿ’: ಸರ್ವಪಕ್ಷ ಸಭೆ ಕರೆಯುವುದು ಯಾವ ಪುರುಷಾರ್ಥಕ್ಕೆ..? ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಜಗದೀಶ್ ಶೆಟ್ಟರ್

Pinterest LinkedIn Tumblr

Sidd-and-Shetter

ಬೆಂಗಳೂರು, ಸೆ.29: ಮಹದಾಯಿ ನದಿ ತಿರುವಿನ ಯೋಜನೆ ಸಂಬಂಧ ಸರಿಯಾದ ವೇದಿಕೆ ನಿರ್ಮಾಣ ಮಾಡದೆ ರಾಜ್ಯಸರ್ಕಾರ ಸರ್ವಪಕ್ಷ ಸಭೆಯನ್ನು ಯಾವ ಪುರುಷಾರ್ಥಕ್ಕೆ ಕರೆಯಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ತೀವ್ರ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಹದಾಯಿ ನ್ಯಾಯಾಧಿಕರಣದ ಮುಂದೆ ಸರ್ಕಾರ ಮಧ್ಯಂತರ ಅರ್ಜಿ ಏಕೆ ಸಲ್ಲಿಸಲಿಲ್ಲ. ಇದಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು. ಮಹದಾಯಿ ನದಿ ತಿರುವಿನ ಯೋಜನೆ ಸಂಬಂಧ ಸರಿಯಾದ ವೇದಿಕೆ ಮಾಡಿಕೊಳ್ಳದೆ ಸುಖಾಸುಮ್ಮನೆ ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯುವುದು, ಸರ್ವ ಪಕ್ಷದ ಸಭೆ ಕರೆಯುವುದು ಏತಕ್ಕಾಗಿ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಮಾಡಿಕೊಳ್ಳುತ್ತಿದ್ದಾರೆ. ನೀತಿ ಆಯೋಗದ ಸಭೆ ಕರೆದರೆ ಹೋಗುವುದಿಲ್ಲ. ಸ್ವಚ್ಛ ಭಾರತ ಅಭಿಯಾನದ ನೇತೃತ್ವ ವಹಿಸಿಕೊಳ್ಳಿ ಎಂದಾಗಲೂ ಹಿಂದೇಟು ಹಾಕಿದರು. ಚೀನಾಗೆ ಕರೆದಾಗಲೂ ಹೋಗಲಿಲ್ಲ. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳಿಗೆ ಕೈಗಾರಿಕಾ ಅಭಿವೃದ್ಧಿ ಬಗ್ಗೆ ನಿರಾಸಕ್ತಿ ಇದೆ. ಅದಕ್ಕಾಗಿಯೇ ಜಾಗತಿಕ ಹೂಡಿಕೆದಾರರ ಸಮಾವೇಶ ಮುಂದೂಡಿದ್ದಾರೆ. ಇದುವರೆಗೆ ಯಾವುದೇ ಸಿದ್ಧತೆ ಕೂಡ ಮಾಡಿಕೊಂಡಿಲ್ಲ. ನಮ್ಮ ರಾಜ್ಯ ಕೈಗಾರಿಕಾ ಅಭಿವೃದ್ಧಿಯಲ್ಲಿ 9ನೆ ಸ್ಥಾನಕ್ಕೆ ಕುಸಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ ಭೂಮಿ ಒತ್ತುವರಿ ಮಾಡಿಕೊಂಡಿರುವವರ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಆರೋಪ ಮಾಡಿರುವುದಕ್ಕೆ ನಮ್ಮದೇನೂ ತಕರಾ ರಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಆಗಬೇಕು ಎಂದು ಹೇಳಿದರು. ಎರಡನೆ ಹಂತದ ರೈತ ಚೈತನ್ಯ ಯಾತ್ರೆ: ಮೊದಲನೆ ಹಂತದ ರೈತ ಚೈತನ್ಯ ಯಾತ್ರೆ ಯಶಸ್ವಿಯಾಗಿದೆ. ಅ.1ರಿಂದ 11ರ ವರೆಗೆ ಬಳ್ಳಾರಿಯಿಂದ ನವಲಗುಂದದವರೆಗೆ ಎರಡನೆ ಹಂತದ ರೈತ ಚೈತನ್ಯ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಇದೇ ವೇಳೆ ಶೆಟ್ಟರ್ ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಒಂದು ತಂಡ, ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಒಂದು ತಂಡ ಹಾಗೂ ನನ್ನ ನೇತೃತ್ವದಲ್ಲಿ ಒಂದು ತಂಡ ಒಟ್ಟು ಮೂರು ತಂಡಗಳು ರೈತ ಚೈತನ್ಯ ಯಾತ್ರೆ ನಡೆಸಿ ರೈತರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬುತ್ತೇವೆ ಹಾಗೂ ರಾಜ್ಯಸರ್ಕಾರದ ದುರಾಡಳಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತೇವೆ ಎಂದು ಹೇಳಿದರು.

ಒತ್ತಾಯ: ಮಹದಾಯಿ ನದಿ ತಿರುವಿನ ಯೋಜನೆ, ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ, ರಾಜ್ಯದಲ್ಲಿ ಕಾಡುತ್ತಿರುವ ಬರ ಪರಿಸ್ಥಿತಿ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ತುರ್ತು ಅಧಿವೇಶನ ಕರೆಯಬೇಕು ಹಾಗೂ ತಕ್ಷಣವೇ ರೈತರ ಸಾಲಮನ್ನಾ ಮಾಡಬೇಕು ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು.

Write A Comment