ಕರ್ನಾಟಕ

ನಾಪತ್ತೆಯಾಗಿರುವ ಮಗನಿಗಾಗಿ ಪೊಲೀಸ್ ಕುಟುಂಬದ ಕಣ್ಣೀರು

Pinterest LinkedIn Tumblr

polishಬೆಂಗಳೂರು, ಸೆ.27-ಹೊಸ ಅಂಗಡಿ ಮಾಡಿ ವ್ಯಾಪಾರ ಆರಂಭಿಸಬೇಕಿದ್ದ ಮಗ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿರುವುದರಿಂದ ಪೊಲೀಸ್ ಕುಟುಂಬವೊಂದು  ಚಿಂತಾಕ್ರಾಂತವಾಗಿದೆ. ಮುತ್ತತ್ತಿ ಪ್ರವಾಸಕ್ಕೆ ಹೋಗಿದ್ದ ಯುವಕರ ತಂಡದ ನಾಲ್ಕು ಮಂದಿ ಸದಸ್ಯರು ಹೊಳೆಯಲ್ಲಿ ಈಜುವಾಗ ಮೂವರು ನೀರಿನಲ್ಲಿ ಮುಳುಗಿದ್ದು ಮತ್ತೊಬ್ಬ ಪಾರಾಗಿದ್ದಾನೆ ಎಂಬ ಶಂಕೆ ಇದ್ದು, ಆತ ಎಲ್ಲಿದ್ದಾನೆ ಎಂದು ತಿಳಿಯದೆ ಕುಟುಂಬ ಗೊಂದಲದಲ್ಲಿದೆ. ಬೆಂಗಳೂರಿನ ಸುಂಕದಕಟ್ಟೆಯ ಸೊಲ್ಲಾಪುರದಮ್ಮ ಬಡಾವಣೆ ನಿವಾಸಿಯಾಗಿರುವ ಪೊಲೀಸ್ ಕಾನ್ಸ್‌ಟೇಬಲ್ ಕುಂಟ ಹನುಮಯ್ಯ ಅವರ ಪುತ್ರ 27 ವರ್ಷದ ಸಂತೋಷ್‌ಕುಮಾರ್ ಸೆ.12 ರಂದು ತನ್ನ ಒಂಭತ್ತು ಮಂದಿ ಸ್ನೇಹಿತರ ಜೊತೆ ಮುತ್ತತ್ತಿ ಪ್ರವಾಸಕ್ಕೆ ತೆರಳಿದ್ದಾನೆ.

ಮಾರನೇ ದಿನ ಬೆಳಗ್ಗೆ 7 ಗಂಟೆಗೆ ನಾಲ್ಕು ಮಂದಿ ಸ್ನೇಹಿತರು ಹೊಳೆಯಲ್ಲಿ ಈಜಲು ಹೋಗಿದ್ದಾರೆ. ಇದ್ದಕ್ಕಿದ್ದ ಹಾಗೆ ಎಲ್ಲರೂ ಕಾಲುಜಾರಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದು, ಅವರ ಪೈಕಿ ತೇಜಸ್ ಬಚಾವಾಗಿದ್ದು, ಜೊತೆಯಲ್ಲಿದ್ದ ಸಂತೋಷ್‌ಕುಮಾರ್‌ನನ್ನು ದಡದತ್ತ ನೂಕಿದ್ದಾನೆ ಎನ್ನಲಾಗಿದೆ. ಉಳಿದಂತೆ ವಿಜಯಕುಮಾರ್, ಪ್ರಸನ್ನಕುಮಾರ್ ಕೊಚ್ಚಿಹೋಗಿದ್ದು, ಮಾರನೇ ದಿನವೇ ಈ ಇಬ್ಬರ ಶವಗಳು ಪತ್ತೆಯಾಗಿವೆ. ಸಂತೋಷ್‌ಕುಮಾರ್‌ನ ಶವಕ್ಕಾಗಿ ಮಂಗಳೂರು ಹಾಗೂ ದೆಹಲಿಯಿಂದ ಆಗಮಿಸಿದ್ದ ಮುಳುಗುತಜ್ಞರೂ ಸೇರಿದಂತೆ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಐದಾರು ದಿನಗಳ ಕಾಲ ತೀವ್ರ ಶೋಧ ನಡೆಸಿದ್ದಾರೆ.

ಆದರೆ ಸಂತೋಷ್‌ಕುಮಾರ್‌ನ ಶವ ಪತ್ತೆಯಾಗಿಲ್ಲ. ಘಟನೆಯ ವರದಿಯಾದ ದಿನದಿಂದಲೇ ಆತನ ತಾಯಿ ಹಾಸಿಗೆ ಹಿಡಿದು ಅರೆಪ್ರಜ್ಞಾವಸ್ಥೆಗೆ ತಲುಪಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ತಂದೆ ಹನುಮಯ್ಯ ತಮ್ಮ ಇಲಾಖೆಯ ಸ್ನೇಹಿತರ ಜೊತೆ ಮಗನ ಹುಡುಕಾಟದಲ್ಲಿ ತೊಡಗಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ವಿಚಾರಿಸಿದಾಗ ಸಂತೋಷ್‌ಕುಮಾರ್ ಫೋಟೋ ನೋಡಿ ಈ ಯುವಕನನ್ನು ಕಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದು ಕುಟುಂಬದಲ್ಲಿ ಭರವಸೆಯ ಕುಡಿ ಚಿಗುರುವಂತೆ ಮಾಡಿದೆ. ಮಗ ಬದುಕಿದ್ದಾನೋ ಇಲ್ಲವೋ ಎಂಬ ಗೊಂದಲವಂತೂ ಕಾಡುತ್ತಲೇ ಇದೆ. ಒಬ್ಬನೇ ಒಬ್ಬ ಮಗನನ್ನು ಹೊಂದಿದ್ದ ಕುಟುಂಬ ಮಾನಸಿಕ ಯಾತನೆಯಿಂದ ಕುಗ್ಗಿ ಹೋಗಿದೆ. ತಮ್ಮ ಮಗನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ 98451223749, 9980809103ಗೆ ಮಾಹಿತಿ ನೀಡುವಂತೆ ಅಥವಾ ಹಲಗೂರು ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

Write A Comment