ಕರ್ನಾಟಕ

ಅತ್ಯಾಚಾರ: ರಾಘವೇಶ್ವರಶ್ರೀ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

Pinterest LinkedIn Tumblr

raghaveshwara-shree01ಬೆಂಗಳೂರು, ಸೆ.26: ಗಾಯಕಿ ಪ್ರೇಮಲತಾ ಶಾಸ್ತ್ರಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಸಿಐಡಿ ಅಧಿಕಾರಿಗಳು, ಶನಿವಾರ ಒಂದನೆ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಅತ್ಯಾಚಾರ ಆರೋಪವನ್ನು ದೃಢಪಡಿಸಿದ್ದಾರೆ.
ಶನಿವಾರ ಸಿಐಡಿ ಐಜಿಪಿ ಕೆ.ವಿ.ಶರತ್‌ಚಂದ್ರ ನೇತೃತ್ವದ ತಂಡ ನ್ಯಾಯಾಲಯಕ್ಕೆ 1,341 ಪುಟಗಳ ಸುದೀರ್ಘ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಗಾಯಕಿ ಪ್ರೇಮಲತಾ ಶಾಸ್ತ್ರಿ ಮೇಲೆ ಶ್ರೀಗಳು ಅತ್ಯಾಚಾರ ನಡೆಸಿದ ಪ್ರಕರಣದ ಸಂಬಂಧ ಒಂದು ವರ್ಷದಿಂದ ತನಿಖೆ ನಡೆಸಿದ ಸಿಐಡಿ ಪೊಲೀಸರು, 151ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣದ ಸಂಬಂಧ ಕಳೆದ ಸಾಲಿನ ಆಗಸ್ಟ್ 26ರಂದು ಇಲ್ಲಿನ ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.
ಪ್ರೇಮಲತಾ ಶಾಸ್ತ್ರಿ ಹಾಗೂ ಆರೋಪಿ ರಾಘವೇಶ್ವರ ಭಾರತಿ ಶ್ರೀಗಳ ಬಟ್ಟೆಯ ಮೇಲೆ ದೊರೆತ ವೀರ್ಯ-ಬೆವರುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ವು ಪರೀಕ್ಷೆಯಲ್ಲಿ ದೃಢಪಡಿಸಿದೆ. ಅಲ್ಲದೆ, ಪ್ರೇಮಲತಾ ಶಾಸ್ತ್ರಿ ಹಾಗೂ ಶ್ರೀಗಳ ನಡುವಿನ ಸಂಭಾಷಣೆಯ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ರಾಘವೇಶ್ವರ ಭಾರತಿ ಶ್ರೀಗಳು, ರಾಮಕಥಾ ಗಾಯಕಿ ಪ್ರೇಮಲತಾ ಅವರನ್ನು ಬೆಂಗಳೂರು, ಹೊಸದಿಲ್ಲಿ, ಮುಂಬೈ ಸೇರಿ ನೂರಕ್ಕೂ ಹೆಚ್ಚು ಕಡೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಹೇಳಿಕೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ಸಿದ್ಧಪಡಿಸಿರುವ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.
ಅತ್ಯಾಚಾರ ಪ್ರಕರಣದ ಸಂಬಂಧ ಪುರುಷತ್ವ ಪರೀಕ್ಷೆಗೆ ರಾಘವೇಶ್ವರ ಭಾರತಿ ಶ್ರೀಗಳು ಸಮ್ಮತಿಸಿರಲಿಲ್ಲ. ವೈದ್ಯಕೀಯ ಪರೀಕ್ಷೆಗೆ ಸಿಐಡಿ ಮುಂದಾದ ಹಿನ್ನೆಲೆಯಲ್ಲಿ ಶ್ರೀಗಳ ಪರ ವಕೀಲರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಈ ಮಧ್ಯೆ ಸಿಐಡಿ ಅಧಿಕಾರಿಗಳು ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಸೆ.30ಕ್ಕೆ ಹಾಜರಾಗುವಂತೆ ಶ್ರೀಗಳಿಗೆ ನೋಟಿಸ್ ನೀಡಿದ್ದಾರೆ.
ಇದನ್ನು ಆಕ್ಷೇಪಿಸಿ ರಾಘವೇಶ್ವರ ಭಾರತಿ ಶ್ರೀ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದು, ಆ ಪ್ರಕರಣವೂ ವಿಚಾರಣೆಗೆ ಬರಲಿದೆ. ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅಂತಿಮ ಘಟ್ಟಕ್ಕೆ ಬಂದಿದೆ.
ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಸಿಐಡಿ ಐಪಿಸಿ ಸೆಕ್ಷನ್ 376(2) ‘ಎಫ್’ (ನಂಬಿಸಿ ಅತ್ಯಾಚಾರ ಆರೋಪ), ಸೆಕ್ಷನ್ 506(ಪ್ರಾಣ ಬೆದರಿಕೆ) ಹಾಗೂ 354(ಮಹಿಳೆಯ ಮೇಲೆ ದೌರ್ಜನ್ಯ)ರಡಿಯಲ್ಲಿ ಆರೋಪ ಪಟ್ಟಿ ಸಿದ್ಧಪಡಿಸಿ ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಈ ಮಧ್ಯೆ ಸಿಐಡಿ ತನಿಖೆ ವಿಳಂಬದ ಬಗ್ಗೆ ಫಿರ್ಯಾದಿ ಪ್ರೇಮಲತಾ ಶಾಸ್ತ್ರಿ, ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬ ವಿರೋಧಿಸಿ ಕೇಂದ್ರ ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರ ಮಂಗಳಂ ಸೇರಿ ಮಹಿಳಾ ಸಂಘಟನೆಗಳು ಆಕ್ಷೇಪಿಸಿದ್ದು, ವ್ಯಾಪಕ ಪ್ರತಿಭಟನೆಗಳೂ ವ್ಯಕ್ತವಾಗಿದ್ದವು.
ಸೆ.30ಕ್ಕೆ ಬಂಧನ ತೀರ್ಮಾನ: ಪ್ರೇಮಲತಾ ಶಾಸ್ತ್ರಿ ಮೇಲಿನ ಅತ್ಯಾಚಾರ ಪ್ರಕರಣದ ಸಂಬಂಧ ರಾಘವೇಶ್ವರ ಭಾರತಿ ಶ್ರೀಗಳು ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆ ಪ್ರಕರಣವೂ ಸೆ.30ರಂದು ವಿಚಾರಣೆಗೆ ಬರಲಿದ್ದು, ಶ್ರೀಗಳ ಬಂಧನದ ಬಗ್ಗೆಯೂ ಅದೇ ದಿನ ತೀರ್ಮಾನ ಆಗುವ ಸಾಧ್ಯತೆಯಿದೆ.

Write A Comment