ರಾಷ್ಟ್ರೀಯ

ಸ್ವಾಮೀಜಿಯೊಂದಿಗೆ ವೇದಿಕೆ ಹಂಚಿಕೊಳ್ಳಲು ಲೇಖಕಿಗೆ ನಿಷೇಧ: ಪ್ರತಿಭಟನೆಯಿಂದಾಗಿ ಕಲಾಂ ಪುಸ್ತಕ ಬಿಡುಗಡೆ ರದ್ದು

Pinterest LinkedIn Tumblr

kalam-book-protestತ್ರಿಶೂರು, ಸೆ.26: ಸ್ವಾಮೀಜಿ ಯೊಬ್ಬರು ಉಪಸ್ಥಿತರಿರುವ ಸಮಾರಂಭದಿಂದ ದೂರವಿರುವಂತೆ ಲೇಖಕಿಯೊಬ್ಬಳನ್ನು ಕೇಳಿಕೊಳ್ಳ ಲಾಯಿತೆಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಫೋಟ ಗೊಂಡ ಬಳಿಕ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರ ಪುಸ್ತಕ ವೊಂದರ ಮಲಯಾಳ ಆವೃತ್ತಿಯ ಬಿಡುಗಡೆಯನ್ನು ಶನಿವಾರ ರದ್ದುಗೊಳಿಸಲಾಗಿದೆ.
ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥಾನದ ಬ್ರಹ್ಮ ವಿಹಾರಿ ದಾಸರು ವೇದಿಕೆಯಲ್ಲಿ ತನ್ನೊಂದಿಗೆ ಮಹಿಳೆಯರ ಉಪಸ್ಥಿತಿಯನ್ನು ಇಷ್ಟಪಡುವುದಿಲ್ಲ. ಆದಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತನಗೆ ಸೂಚಿಸಲಾಯಿತೆಂದು ಕಲಾಂರ ‘ಟ್ರಾನ್ಸೆಂಡೆನ್ಸ್ ಮೈ ಸ್ಪಿರಿಚುವಲ್ ಎಕ್‌ಪೀರಿಯೆನ್ಸ್ ವಿದ್ ಪ್ರಮುಖ್ ಸ್ವಾಮೀಜಿ’ ಪುಸ್ತಕದ ಅನುವಾದಕಿ, ಲೇಖಕಿ ಶ್ರೀದೇವಿ ಎಸ್. ಕರ್ತ ಆರೋಪಿಸಿದ್ದಾರೆ.
ಒಂದು ಸಾಮಾಜಿಕ- ಆಧ್ಯಾತ್ಮಿಕ ಹಿಂದೂ ಸಂಘಟನೆಯಾಗಿರುವ ಬಿಎಪಿಎಸ್‌ನ ನಿಯಮಗಳು ಸ್ವಾಮೀಜಿಯೊಂದಿಗೆ ಮಹಿಳೆಯರು ವೇದಿಕೆ ಹಂಚಿಕೊಳ್ಳುವುದನ್ನು ವಿರೋಧಿಸುತ್ತವೆಯೆಂದು ತನಗೆ ಹೇಳಾಯಿತೆಂದು ಅವರು ಪ್ರಕಟನೆ ಯೊಂದರಲ್ಲಿ ತಿಳಿಸಿದ್ದಾರೆ.
ಮಹಿಳೆಯರ ಅಪವಿತ್ರ ನೆರಳು ಸಹ ಸ್ವಾಮೀಜಿಯ ಮೇಲೆ ಬೀಳದಂತೆ ಖಚಿತಪಡಿಸುವುದಕ್ಕಾಗಿ ಮೊದಲಿನ ಸಾಲುಗಳನ್ನು ಅವರ ಅನುಯಾಯಿಗಳಿಗೆ ಮೀಸಲಿಡಬೇಕು ಎಂದು ಶ್ರೀದೇವಿ ಫೇಸ್‌ಬುಕ್ ಬರಹವೊಂದರಲ್ಲಿ ಕಟುವಾಗಿ ಹೇಳಿದ್ದಾರೆ.
ವಿವಾದ ಸ್ಫೋಟಗೊಂಡೊಡನೆಯೇ, ‘ಕಲಾತೀತಂ’ ಪುಸ್ತಕದ ಬಿಡುಗಡೆ ನಡೆಯಲಿದ್ದ ಕೇರಳ ಸಾಹಿತ್ಯ ಅಕಾಡಮಿಯ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸ್ವಾಮಿ ಬ್ರಹ್ಮವಿಹಾರಿ ದಾಸರು ಸಮಾರಂಭಕ್ಕೆ ಬಂದಿರಲಿಲ್ಲವೆಂದು ಪುಸ್ತಕದ ಪ್ರಕಾಶನ ಸಂಸ್ಥೆ, ತ್ರಿಶೂರು ಮೂಲದ ‘ಕರೆಂಟ್ ಬುಕ್ಸ್’ನ ಪ್ರಕಟನಾ ಪ್ರಬಂಧಕ ಕೆ.ಜೆ.ಜಾನಿ ತಿಳಿಸಿದ್ದಾರೆ.
ಪುಸ್ತಕವನ್ನು ಬಿಡುಗಡೆ ಸಮಾರಂಭಗಳಿಗೆ ಸಾಮಾನ್ಯವಾಗಿ ಭಾಷಾಂತರ ಮಾಡಿದವರನ್ನು ಆಹ್ವಾನಿಸುವುದಿಲ್ಲವೆಂದು ಅವರು ಹೇಳಿದ್ದಾರೆ.
ಪುಸ್ತಕವನ್ನು ಕಲಾಂರ ಸಹಲೇಖಕ ಅರುಣ್ ತಿವಾರಿ ಹಾಗೂ ಖ್ಯಾತ ಮಲೆಯಾಳ ಲೇಖಕ ಎಂ.ಟಿ. ವಾಸುದೇವನ್ ನಾಯರ್ ಬಿಡುಗಡೆ ಮಾಡಲಿದ್ದರು.
ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಕವಯತ್ರಿ ಸುಗತಕುಮಾರಿ, ತಮ್ಮ ತಾಯಂದಿರ ಬಗ್ಗೆ ಭಯ ಪಡುವವರು ಕತ್ತಲ ಯುಗದ ಗುಹೆಗಳಿಗೆ ಹಿಂದಿರುಗಲಿ ಎಂದಿದ್ದಾರೆ.
ಕೇವಲ ಹಿಂದೂ ಧರ್ಮ ಮಾತ್ರ ಹೆಣ್ಣಿನ ರೂಪದಲ್ಲೂ ದೇವರನ್ನು ಕಾಣುತ್ತದೆ. ನಮ್ಮ ಪುರಾತನ ಸಂತರು ಹಾಗೂ ಸಮಾಜ ಸುಧಾರಕರಾಗಿದ್ದ ಸ್ವಾಮಿ ವಿವೇಕಾನಂದ, ಶ್ರೀನಾರಾಯಣ ಗುರು ಹಾಗೂ ರಮಣಮಹರ್ಷಿಗಳಂತಹವರು ಎಂದೂ ಮಹಿಳೆಯರ ಬಗ್ಗೆ ಭೇದಭಾವ ತೋರಿಸಿಲ್ಲ ಎಂದವರು ಹೇಳಿದ್ದಾರೆ. ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ ಶ್ರೀದೇವಿ, ಪ್ರಕಾಶಕರು ಸಮಾನ ಸ್ನೇಹಿತರೊಬ್ಬರ ಮೂಲಕ, ಸಮಾರಂಭದಿಂದ ದೂರವಿರುವಂತೆ ತನಗೆ ಸೂಚಿಸಿದರು. ಆದರೆ, ಕನಿಷ್ಠ ಕ್ಷಮೆ ಕೋರುವ ಸೌಜನ್ಯವನ್ನು ತೋರಿಸಲಿಲ್ಲ. ಇದು ಪ್ರಕಾಶಕರ ಪಾಲಿಗೆ ನಾಚಿಕೆಗೇಡಿನ ಕೃತ್ಯವೆಂದು ವಾಗ್ದಾಳಿ ನಡೆಸಿದ್ದಾರೆ.
ಈ ವಿವಾದವು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.

Write A Comment