ಪ್ರಮುಖ ವರದಿಗಳು

ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್: ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಚುನಾವಣೆ, ಜೂ.4ಕ್ಕೆ ಫಲಿತಾಂಶ; ಕರ್ನಾಟಕ ರಾಜ್ಯದಲ್ಲಿ ಏ.26, ಮೇ 7 ರಂದು ಮತದಾನ

Pinterest LinkedIn Tumblr

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಶನಿವಾರ ಮುಹೂರ್ತ ನಿಗಧಿಯಾಗಿದ್ದು, ಏಪ್ರಿಲ್ 19 ರಿಂದ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಮತ್ತು ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಇಂದು ದೆಹಲಿಯ ವಿಜ್ಞಾನಭವನದಲ್ಲಿ ಹೊಸದಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ನಾವು ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಹೇಳಿದರು.

ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಮೇಲೂ ತೀವ್ರ ನಿಗಾ ಇಡಲಾಗುವುದು. ಎಂದು ಹೇಳಿದರು.

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಏಪ್ರಿಲ್ 26 ರಂದು ರಾಜ್ಯದ ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರದಲ್ಲಿ ಮತದಾನ ನಡೆಯಲಿದೆ.

ಮೇ 7 ರಂದು ಎರಡನೇ ಹಂತದಲ್ಲಿ ಒಟ್ಟು 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಬೆಳಗಾವಿ, ಬಳ್ಳಾರಿ, ಚಿಕ್ಕೋಡಿ, ಹಾವೇರಿ-ಗದಗ, ಕಲಬುರಗಿ, ಬೀದರ್​, ಹುಬ್ಬಳಿ – ಧಾರವಾಡ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರದಲ್ಲಿ ಮೇ 7 ರಂದು ಚುನಾವಣೆ ನಡೆಯಲಿದೆ.

2024 ರ ಲೋಕಸಭೆ ಚುನಾವಣೆ ಜೊತೆಗೆ ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭಾ ಚುನಾವಣೊ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಲ್ಲದೆ ರಾಜ್ಯದ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ಘೋಷಿಸಲಾಗಿದೆ.

ಮೇ 13 ರಂದು ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಏಪ್ರಿಲ್ 19 ರಂದು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು 1.5 ಕೋಟಿ ಸಿಬ್ಬಂದಿ, 55 ಲಕ್ಷ ಇವಿಎಂಗಳಿಂದ ಚುನಾವಣೆ ನಿರ್ವಹಿಸಲ್ಪಡುತ್ತದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಮ್ಮ ಉದ್ದೇಶ. ದೇಶಾದ್ಯಂತ 97 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ 49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 1.8 ಕೋಟಿ ಮತದಾರರಿಂದ ಮೊದಲ ಬಾರಿಗೆ ಮತ ಚಲಾವಣೆ ಮಾಡಲಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ.ದೇಶದಾದ್ಯಂತ 10.5 ಲಕ್ಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.ಮತದಾನಕ್ಕೆ ಒಟ್ಟು 55 ಲಕ್ಷ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾಗಲಿದೆ. ಚುನಾವಣಾ ಕರ್ತವ್ಯಕ್ಕಾಗಿ ಒಂದೂವರೆ ಕೋಟಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದರು.

Comments are closed.