ಕರ್ನಾಟಕ

ಜನತಾ ದರ್ಶನ : ಮುಖ್ಯಮಂತ್ರಿ ಎದುರು ನೂರಾರು ಜನರ ಕಣ್ಣೀರ ಸುರಿಮಳೆ

Pinterest LinkedIn Tumblr

sidduಬೆಂಗಳೂರು, ಸೆ.15- ಹನ್ನೊಂದು ತಿಂಗಳ ನಂತರ ಮತ್ತೆ ಆರಂಭಗೊಂಡ ಜನತಾ ದರ್ಶನದಲ್ಲಿ ಇಂದು ನೂರಾರು ಮಂದಿ ಮುಖ್ಯಮಂತ್ರಿ ಬಳಿ ತಮ್ಮ ಅಹವಾಲು ಹೊತ್ತು ಬಂದು,  ಸಮಸ್ಯೆ ಬಗೆಹರಿಸುವಂತೆ ಕಣ್ಣೀರಿಟ್ಟರು… ಮತ್ತೆ ಕೆಲವರು  ಕಾಲಿಗೆ ಬಿದ್ದರು. ಒಟ್ಟಾರೆ ದೂರುಗಳ ಸುರಿಮಳೆಯೇ ಹರಿದು ಬಂದವು. ಪ್ರಮುಖವಾಗಿ ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ ನಂತರ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಿಂಗೇಗೌಡರ ಪುತ್ರ ಯೋಗೇಶ್ ಇಂದು ಸಿಎಂ  ಅವರ ಬಳಿ ತಮ್ಮ ದುಃಖ ತೋಡಿಕೊಂಡು, ಸ್ವಾಮೀ…. ನೀವು ಮನೆಗೂ ಬಂದಿದ್ದೀರಿ. ಸಚಿವರು, ಜಿಲ್ಲಾಧಿಕಾರಿಗಳು, ಇತರೆ ಅಧಿಕಾರಿಗಳು ಬಂದು ಹೋದರು. ಆದರೆ ಇದುವರೆಗೂ ನಮಗೆ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.

ನನ್ನ ತಂದೆ ಎಸ್‌ಬಿಎಂನಲ್ಲಿ ಎರಡೂವರೆ ಲಕ್ಷ ಸಾಲ ಮಾಡಿದ್ದರು. ಜತೆಗೆ  ಕೈ ಸಾಲವೂ ಸೇರಿ ಮೂರೂವರೆ ಲಕ್ಷಕ್ಕೂ ಹೆಚ್ಚು ಸಾಲವಿದೆ ಎಂದು ಹೇಳಿದರು. ನಾನು  ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಗುತ್ತಿಗೆ ಆಧಾರದ ಮೇಲೆ  ಕೆಲಸ ಮಾಡುತ್ತಿದ್ದೇನೆ. ವಿಕಲಚೇತನನಾಗಿರುವ ನಾನೇ ಮನೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಿದೆ. ದಯಮಾಡಿ ನನ್ನ ಹುದ್ದೆ ಖಾಯಂ ಮಾಡಿ. ನನ್ನ ತಂದೆ ಮಾಡಿರುವ ಮೂರೂವರೆ ಲಕ್ಷ ಸಾಲ ತೀರಿಸಲು ನೆರವಾಗಿ ಎಂದು ಯೋಗೇಶ್ ಬೇಡಿಕೊಂಡರು. ತಕ್ಷಣ ಸಿದ್ದರಾಮಯ್ಯ ಅವರು  ಅಧಿಕಾರಿಗಳ ಕಡೆ ತಿರುಗಿ ಏನಿದು, ತಕ್ಷಣ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಎಂದು ಆದೇಶಿಸಿದರು.

ಇನ್ನು ಮಾಗಡಿಯ ಕಡಬಗೆರೆ ನಿವಾಸಿ ಸುನೀತಾ ಎಂಬಾಕೆ 1999 ರಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಬದುಕುಳಿದಿದ್ದರೂ ಮುಖ, ಮೈ ವಿರೂಪವಾಗಿಬಿಟ್ಟಿದೆ. ಈಕೆ ಮುಖ್ಯಮಂತ್ರಿಗಳಲ್ಲಿ ನಾನು ಕುರೂಪಿಯಾಗಿದ್ದೇನೆ ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ ನನ್ನನ್ನು ಪದೇ ಪದೇ ಮನೆ ಖಾಲಿ ಮಾಡಿಸುತ್ತಾರೆ. ಇತ್ತೀಚೆಗೆ ಮನೆ ಮಾಲೀಕರು ಬೇಕೆಂದೇ ಪೊಲೀಸರಿಗೆ ನನ್ನ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ತುಂಬಾ ತೊಂದರೆಯಾಗುತ್ತಿದೆ. ಈ ಕಿರುಕುಳ ತಪ್ಪಿಸಿ ಎಂದು ದುಃಖ ತೋಡಿಕೊಂಡರು.

ಇದನ್ನು ಕೇಳುತ್ತಿದ್ದಂತೆ  ಕೆಂಡಾಮಂಡಲರಾದ ಸಿದ್ದರಾಮಯ್ಯ, ಮಾದನಾಯಕನಹಳ್ಳಿ ಠಾಣೆ ಸಂಪರ್ಕಿಸಿ ಅಲ್ಲಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಗ್ರಾಮಾಂತರ ಠಾಣೆ ಎಸ್ಪಿಗೆ ಕರೆ ಮಾಡಿ ತಕ್ಷಣ ಇಲ್ಲಿ ಬನ್ರೀ… ಎಂದು ಖಾರವಾಗಿ ಕರೆದರಲ್ಲದೆ, ಈ ಮಹಿಳೆಯ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಎಂದು ತಾಕೀತು ಮಾಡಿದರು. ಬೆಳಗಾಂನ ಅಥಣಿ ತಾಲೂಕಿನ ಸೌದಿದುರ್ಗ ಗ್ರಾಮದ ಮದೀನಾ ಮಬೀನ್‌ಸಾಬ್ ಎಂಬಾಕೆ ನಾನು ಪಿಯುಸಿ ಓದಿದ್ದೇನೆ. ಎಲ್ಲೂ ಕೆಲಸ ಸಿಕ್ಕಿಲ್ಲ. ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ನನಗೆ ಜೀವನ ನಿರ್ವಹಿಸಲು ಯಾವುದಾದರೂ ಕೆಲಸ ಕೊಡಿಸಿಕೊಡಿ. ಬದುಕಿಕೊಳ್ಳುತ್ತೇವೆ ಎಂದು ಸಿಎಂರಲ್ಲಿ ಮನವಿ ಸಲ್ಲಿಸಿದರು.

ಕಿರುಕುಳ ತಪ್ಪಿಸುವಂತೆ ನಟಿ ಲೀಲಾವತಿ ಮನವಿ:
ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್  ಜನತಾ ದರ್ಶನಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ಸೋಲದೇವನಹಳ್ಳಿ ಚೌಲಸಂದ್ರ ಸುತ್ತಮುತ್ತಲ ಭಾಗದಲ್ಲಿ 173 ಕುಟುಂಬಗಳು ಕೃಷಿ ಮಾಡಿತ್ತಿರುವ ಭೂಮಿಯನ್ನು ಒಕ್ಕಲೆಬ್ಬಿಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಇದು ಸರಿಯಲ್ಲ, ನಾವು ಕೂಡ ಭಾರತೀಯರೆ ನಮ್ಮನ್ನು ಆ ಭೂಮಿಯಿಂದ ಒಕ್ಕಲೆಬ್ಬಿಸಿ ಸರ್ಕಾರ ಪುನರ್ ವಸತಿ ಕಲ್ಪಸಲಿದೆಯೇ ಎಂದು ಪ್ರಶ್ನಿಸಿದರು. ಕೃಷಿ ಮಾಡಿ ಒಪ್ಪತ್ತಿನ ಊಟ ಮಾಡುತ್ತಿದ್ದೇವೆ. ಅದಕ್ಕೆ ಅಡ್ಡಿ ಪಡಿಸಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಅರಣ್ಯ ಭೂಮಿ ಎಂಬ ನೆಪದಲ್ಲಿ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಬೇರೆ ಬೇರೆ ಜಿಲ್ಲೆಗಳಿಂದ ಅರಣ್ಯಾಧಿಕಾರಿಗಳನ್ನು ಕರೆಸಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಕಲಚೇತನ ಮಹಿಳೆಯೊಬ್ಬರು ಸಿಎಂ ಕಾಲಿಗೆ ಬಿದ್ದು ನಾನು ಪರಿಶಿಷ್ಟ ಜಾತಿಗೆ ಸೇರಿದ್ದು, ಬಿಎ, ಬಿ.ಎಡ್ ಮಾಡಿರುವೆ.  ಸರ್ಕಾರಿ ಉದ್ಯೋಗ ಕೊಡಿಸಿ ಎಂದು ಕೇಳಿದರು. ಸರ್ಕಾರಿ ಕೆಲಸಕ್ಕೆ ನಿಯಮಗಳು ಅಡ್ಡಿ ಬರುತ್ತವೆ ಎಂದಾಗ ಖಾಸಗಿ ಕಾಲೇಜಿನಲ್ಲಿ ಕೆಲಸ ಕೊಡಿಸುವಂತೆ ಕೋರಿದರು. ಮಂಡ್ಯದ ಮಮತಾ ಎಂಬ ಮಹಿಳೆ ಕ್ಷಯರೋಗದಿಂದ ಬಳಲುತ್ತಿದ್ದು ವೈದ್ಯಕೀಯ ನೆರವಿಗೆ ಮನವಿ ಮಾಡಿದರು. ಕ್ಷಯರೋಗದಿಂದ ಸ್ಪೈನಲ್‌ಕಾರ್ಡ್ ಹಾನಿಯಾಗಿ ಓಡಾಡಲು ಆಗುತ್ತಿಲ್ಲ ಎಂದು ಸಮಸ್ಯೆ ತೋಡಿಕೊಂಡಾಗ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದರು. ಬೆಂಗಳೂರಿನ ನಿವಾಸಿ ಶಿವಾನಂದ ಎಂಬುವರು ತನ್ನ ಮೇಲೆ ಹಲ್ಲೆ ನಡೆಸಿದ ವೈದ್ಯರ ವಿರುದ್ಧ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ ಎಂದು ದೂರು ನೀಡಿದರು.

ಅನನ್ಯ ಆಸ್ಪತ್ರೆ ವೈದ್ಯ ರಾಜಶೇಖರ್ ಹಲ್ಲೆ ಮಾಡಿದ್ದರ ಬಗ್ಗೆ ದೂರು ನೀಡಿದ್ದೆ. ಎಫ್‌ಐಆರ್ ಆಗಿ ಹದಿನೈದು ದಿನ  ಆಗಿದೆ. ಆದರೂ ಅವರನ್ನು ಬಂಧಿಸಿಲ್ಲ, ವಿಚಾರಣೆ ನಡೆಸಿಲ್ಲ ಎಂದು ದೂರಿದರು. ಆಗ ಸಂಬಂಧಪಟ್ಟ ಅಧಿಕಾರಿ ಯಾರೆಂದು ವಿಚಾರಿಸಿ ಕರೆಸಿಕೊಂಡ ಮುಖ್ಯಮಂತ್ರಿಗಳು ಕ್ರಮ ಏಕೆ ಜರುಗಿಸಿಲ್ಲ ಎಂದು ಪ್ರಶ್ನಿಸಿದಾಗ ಕೂಡಲೇ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಅದಕ್ಕೆ ಕಾನೂನು ರೀತಿ ಕ್ರಮ ಜರುಗಿಸುವಂತೆ ಸೂಚಿಸಿದರು.

ಕಲಾವಿದ ನಾಗಪ್ಪ ಶಿರೋಡ್ ಎಂಬುವರು ತಮಗೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿದೆ ಎಂದು ಸಿಎಂಗೆ ಹಾರ ಹಾಕಿ ಸನ್ಮಾನಿಸಲು ಮುಂದಾದಾಗ ಅವರ ಶಾಲನ್ನು ಅವರಿಗೇ ಹೊದಿಸಿ ಹಾರ ಹಾಕಿ ಅಭಿನಂದಿಸಿದರು. ಕುಮಾರಸ್ವಾಮಿ ಬಡಾವಣೆಯ 72 ವರ್ಷದ ಕೃಷ್ಣರಾವ್ ಎಂಬುವರು ವಿಕಲಚೇತನ ಮಗಳ ಕರುಣಾಜನಕ ಸ್ಥಿತಿ ಹೇಳಿಕೊಂಡಿದ್ದು ಅಲ್ಲಿದ್ದವರ ಮನ ಕಲಕುವಂತಿತ್ತು.  ನನಗೆ ವಿಕಲಚೇತನ ಮಗಳಿದ್ದಾಳೆ, ಪತ್ನಿಯಿಲ್ಲ. ಮಗಳ ಸಾಕಲು 72 ವರ್ಷದ ನಾನು ಈಗಲೂ ಆಟೋ ಓಡಿಸುತ್ತಿರುವೆ. ನನ್ನ ಇನ್ನೊಬ್ಬ ಮಗಳಿಗೆ ಈಕೆಯನ್ನು ನೋಡಿಕೊಳ್ಳಲು ತಿಳಿಸಿದರೆ ನನಗೆ ಮನೆ ಕೊಡಿಸು ಬಂದು ನೋಡಿಕೊಳ್ಳುವೆ ಎನ್ನುತ್ತಾಳೆ.

ನನ್ನ ಹತ್ತಿರ 5 ಲಕ್ಷ ರೂ. ಉಳಿತಾಯದ ಹಣ ಇದೆ. ನನಗೆ ಮನೆ ಕೊಟ್ಟು ಮಾನವೀಯತೆ ತೋರುವಂತೆ ಮನವಿ ಮಾಡಿದಾಗ ಕೆಂಗೇರಿ ಬಳಿಯ ಫ್ಲ್ಯಾಟ್ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಇದೇ ವೇಳೆ ದೂರುದಾರರ ಬಗ್ಗೆ ಸ್ಥಳೀಯ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳೊಂದಿಗೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಅವರಿಂದ ಮಾಹಿತಿ ಪಡೆದರು. ಮತ್ತೆ ಕೆಲವರನ್ನು ತರಾಟೆಗೂ ತೆಗೆದುಕೊಂಡರು. ಅಧಿಕೃತ ಜನತಾ ದರ್ಶನಗಳು ಸ್ಥಗಿತಗೊಂಡಿದ್ದರಿಂದ ಜನರಿಗೆ ಬಹಳಷ್ಟು  ದರೆಯಾಗಿತ್ತು. ಪ್ರತಿ ನಿತ್ಯ ಜನರು ಸಿಎಂ ಮನೆ ಮುಂದೆ ಭೇಟಿ ನೀಡಿ ತಮ್ಮ ಅಹವಾಲುಗಳನ್ನು ಸಲ್ಲಿಸುತ್ತಿದ್ದರಾದರೂ ಜನತಾದರ್ಶನದಲ್ಲಿ ಸಿಕ್ಕಂತಹ ಪರಿಹಾರಗಳು ಈ ಖಾಸಗಿ ಭೇಟಿಯಲ್ಲಿ ಸಿಗುತ್ತಿರಲಿಲ್ಲ.  ಈ ಅಧಿಕೃತ ಜನತಾ ದರ್ಶನ ಜನಸಾಮಾನ್ಯರಿಗೆ ವರದಾನವಾಗಿದೆ ಎಂಬುದು ಅಭಿಪ್ರಾಯವಾಗಿದೆ.

ನ್ಯಾಯ ಕೊಡಿಸಿ ಇಲ್ಲವೇ ದಯಮರಣಕ್ಕೆ ಅವಕಾಶ ನೀಡಿ

ಬೆಂಗಳೂರು, ಸೆ.15- ಜನತಾ ದರ್ಶನದಲ್ಲಿ ದೂರುಗಳ ಹೊತ್ತು ತಂದ ಶಿರಾದ ಯರದ ಕಟ್ಟೆ ಗ್ರಾಮದ ಭೂತೇಶ್ ನಮಗೆ ನ್ಯಾಯ ಒದಗಿಸಿ ಇಲ್ಲದಿದ್ದಲ್ಲಿ ದಯಾ ಮರಣಕ್ಕೆ ಅನುಮತಿ ನೀಡಿ ಎಂದು ಮುಖ್ಯಮಂತ್ರಿಗಳನ್ನು ಕೋರಿದ ಪ್ರಸಂಗ ನಡೆದಿದೆ.  ತಮ್ಮ ಪುತ್ರನೊಂದಿಗೆ ಜನತಾ ದರ್ಶನಕ್ಕೆ ಭೂತೇಶ್ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ತಮ್ಮ ಅಣ್ಣ ರಮೇಶ್ ಅವರ ಹತ್ಯೆ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಇಲ್ಲವೆ ತಮಗೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಅಲವತ್ತುಕೊಂಡರು.

ಒಂದು ವರ್ಷದ ಹಿಂದೆ ಹಂದಿ ಬೇಟೆಗಾಗಿ ಕರೆದು ಶಾಕ್ ಕೊಟ್ಟು ತಮ್ಮ ಅಣ್ಣ ರಮೇಶ್‌ನನ್ನು ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಯರದ ಕಟ್ಟೆ ಗ್ರಾಮದ ಸುರೇಶ್, ಕರಿಯಪ್ಪ ಮತ್ತು ಗಿರಿಯಪ್ಪ ಈ ಪ್ರಕರಣದ ಹಿಂದಿದ್ದಾರೆ. ಆದರೆ ಶೇಷನಾಯಕ್ ಎಂಬ ವ್ಯಕ್ತಿಯ ಬೆಂಬಲದಿಂದ ಅವರೆಲ್ಲಾ ಪ್ರಕರಣದ ಆರೋಪದಿಂದ ನುಳುಚಿಕೊಂಡಿದ್ದಾರೆ ಎಂದರು. ಜಮೀನಿನ ವಿವಾದ ಹಾಗೂ ಕೆರೆ ಒತ್ತುವರಿ ಹಿನ್ನೆಲೆಯಲ್ಲಿ ತಮ್ಮ ಅಣ್ಣ ರಮೇಶ್‌ನೊಂದಿಗೆ ಜಗಳವಾಗಿತ್ತು. ಇದನ್ನೇ ದ್ವೇಷವಾಗಿಟ್ಟುಕೊಂಡು ಈ ಹತ್ಯೆ ನಡೆಸಿದ್ದಾರೆ.  ಶೇಷ ನಾಯಕ್ ಸಚಿವ ಟಿ.ಬಿ.ಜಯಚಂದ್ರ ಅವರ ಹಿಂಬಾಲಕ ಹಾಗೂ ಡಿವೈಎಸ್ಪಿ ರಾಮಾನಾಯಕ್ ಅವರ ಸಂಬಂಧಿಯಾಗಿದ್ದು , ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

ತಮ್ಮ ಅಣ್ಣನಿಗೆ 5 ಜನ ಹೆಣ್ಣು ಮಕ್ಕಳಿದ್ದು, ಅವರಲ್ಲಿ ಒಬ್ಬಳಿಗೆ ಕ್ಯಾನ್ಸರ್ ಇದೆ. ಮತ್ತೊಬ್ಬಳಿಗೆ ಲಕ್ವ ಹೊಡೆದಿದೆ. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ನ್ಯಾಯ ನೀಡುವಂತೆ ಒತ್ತಾಯಿಸಿ ಡಿಸಿ ಕಚೇರಿಯ ಮುಂದೆ ಅಹೋ ರಾತ್ರಿ ಧರಣಿ ನಡೆಸಿದೆವು. ಡಿಸಿಯಿಂದ ಹಿಡಿದು ಎಲ್ಲರಿಗೂ ದೂರು ಕೊಟ್ಟಿದ್ದೆವು. ಆದರೆ ಯಾವುದೇ ಪರಿಹಾರ ದೊರೆತಿಲ್ಲ. ನ್ಯಾಯ ಕೊಡಿಸಿ ಇಲ್ಲವೆ ದಯಾ ಮರಣಕ್ಕೆ ಅನುಮತಿ ನೀಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರು.

ಜಮೀನು ಒತ್ತುವರಿ ಸಂಬಂಧ ರಂಜಾನ್ ಉಪವಾಸದಲ್ಲಿದ್ದ ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಒಡ್ಡಲಾಗಿದೆ ಎಂದು ತುಮಕೂರಿನ ಹುತ್ತರೀದುರ್ಗದ ನಿವಾಸಿ ಸೈಯದ್ ರಹೀಂ ತಿಳಿಸಿದರು. ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಅವರ ಬೆಂಬಲಿಗರು ನಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇನೆ. ನಮಗೆ ಕರೆ ಮಾಡಿದ ಬಗ್ಗೆ ದಾಖಲೆ ಇದೆ. ನ್ಯಾಯ ಒದಗಿಸಿ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸ್ವಾಮಿ, ತಮ್ಮ ಮಗಳ ಸಾವಿನ ಪ್ರಕರಣದ ವಿಚಾರಣೆ ಎಲ್ಲಿಯವರೆಗೆ ಬಂದಿದೆ ಎಂಬುದೇ ತಿಳಿಯುತ್ತಿಲ್ಲ. ನಮಗೆ ನ್ಯಾಯ ಒದಗಿಸಿ ಕೊಡಿ ಎಂದು ವೈಟ್‌ಫೀಲ್ಡ್ ಬಳಿಯ ಪಟ್ಟಣ ದೊರೆ ಅಗ್ರಹಾರದ ಸ್ವಾಮಿ ಎಂಬುವರು ಮುಖ್ಯಮಂತ್ರಿಗಳನ್ನು ಕೋರಿದರು. ತಮ್ಮ ಮಗಳು ಗುಡ್‌ಫ್ರೈಡೇ ದಿನ ರಜೆ ಇದ್ದುದ್ದರಿಂದ ಶಾಲೆಗೆ ಹೋಗಿರಲಿಲ್ಲ. ಆದರೆ ಸೋಮವಾರ ಶಾಲೆಗೆ ಹೋದಾಗ ಆಕೆಯನ್ನು ಬಲಿ ಕೊಡಲಾಗಿದೆ. ಸೋಮವಾರ ಆಕೆಯ ಶವ ಪತ್ತೆಯಾಗಲಿಲ್ಲ. ಆದರೆ ಮಂಗಳವಾರ ಬೆಳಗ್ಗೆ ಶಾಲೆಯ ನೀರಿನ ತೊಟ್ಟಿಯಲ್ಲಿ ಮಗಳು ಸೂಸಾನ್ (9) ಶವ ಪತ್ತೆಯಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಯಾವ ಹಂತದಲ್ಲಿದೆ ಎಂದು ತಿಳಿಯುತ್ತಿಲ್ಲ. ದಯವಿಟ್ಟು  ಪರಿಹಾರ ಒದಗಿಸಿ ಎಂದು ಮನವಿ ಮಾಡಿದರು.

Write A Comment