ಕರ್ನಾಟಕ

ಕಲ್ಬುರ್ಗಿಯವರ ಹತ್ಯೆ ಪ್ರಕರಣ: ಪತ್ತೆ ಹಚ್ಚುವಲ್ಲಿ ವಿಫಲವಾದ ಪೋಲಿಸರ ವಿರುದ್ಧ ಸಾಹಿತಿಗಳ ಆಕ್ರೋಶ

Pinterest LinkedIn Tumblr

kal2222

ಧಾರವಾಡ . ಸೆ.14: ಖ್ಯಾತ ಸಂಶೋಧಕ ಹಾಗೂ ಸಾಹಿತಿಗಳಾಗಿದ್ದ ಡಾ. ಎಂ. ಎಂ ಕಲ್ಬುರ್ಗಿ ಅವರ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೋಲಿಸರು ವಿಫಲರಾಗಿದ್ದಾರೆಂದು ಖಂಡಿಸಿ ಡಾ. ಎಂ. ಎಂ ಕಲ್ಬುರ್ಗಿ ಹತ್ಯಾ ವಿರೋಧಿ ಸಂಘಟನೆ ನೇತೃತ್ವದಲ್ಲಿ ಹಿರಿಯ ಸಾಹಿತಿಗಳು, ಪ್ರಮುಖ ಸಂಘಟನೆಗಳ ನೇತಾರರು, ಚಿಂತಕರು, ಕವಿಗಳು, ಬಂಡಾಯ ಹೋರಾಟಗಾರರು ಸೋಮವಾರ ಇಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಡಾ. ಮಲ್ಲಿಕಾರ್ಜುನ್ ಮನಸೂರ ಕಲಾಭವನದ ಮುಂದೆ ಹಿರಿಯ ಕವಿ ಡಾ. ಚನ್ನವೀರ ಕಣವಿ, ಡಾ. ರೆಹಮತ್ ತರೀಕೆರೆ, ಡಾ. ಗಿರಡ್ಡಿ ಗೋವಿಂದರಾಜು, ಡಾ. ಕೆ.ಎಸ್. ನೀಲಾ, ಡಾ. ಸಿದ್ದನಗೌಡ ಪಾಟೀಲ, ಶಂಕರ ಹಲಗತ್ತಿ ಹಾಗೂ ಬಸವರಾಜ ಸೂಳಿಬಾವಿ ಮುಂತಾದವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಾ. ಎಂ.ಎಂ ಕಲ್ಬುರ್ಗಿ ಅವರ ಹತ್ಯೆಯು ಬರ್ಬರ ಹತ್ಯೆಯಲ್ಲ ಅದು ಸೈದ್ಧಾಂತಿಕ ಹತ್ಯೆಯಾಗಿದೆ, ಇದರ ಹಿಂದೆ ಯಾವುದೇ ವ್ಯಕ್ತಿ ಇರಲಿ ಅಥವಾ ಸಂಘಟನೆ ಇರಲಿ ಶಿಕ್ಷೆ ಆಗಲೇಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಅಪರಾಧಿಗಳ ಸುಳಿವು ನೀಡಿದವರಿಗೆ ಸೂಕ್ತ ಬಹುಮಾನದ ಘೋಷಣೆಯಾಗಬೇಕು, ಪ್ರಕರಣದಲ್ಲಿ ಹೆಸರಿಸಲಾದ ಶ್ರೀರಾಮ ಸೇನೆ ಮತ್ತಿತರ ಮತೀಯ ಹಿಂದೂ ಸಂಘಟನೆಗಳ ಧುರೀಣರ ಹಾಗೂ ಶಸ್ತ್ರಾಸ್ತ್ರ ತರಬೇತುದಾರರ ವಿಚಾರಣೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.

ನಂತರ ಅಲ್ಲಿಂದ ಬೃಹತ್ ಪ್ರತಭಟನಾ ಮೆರವಣಿಗೆಯು ಸುಭಾಸ್ ರಸ್ತೆ, ವಿವೇಕಾನಂದ ಸರ್ಕಲ್, ಟೀಕಾರ್ ರಸ್ತೆ, ಸಂಗಮ ಸರ್ಕಲ್, ಲಕ್ಷ್ಮೀ ಸರ್ಕಲ್ ನಂತರ ಕೋರ್ಟ ವೃತ್ತದ ಮೂಲಕ ಕಲಾಭವನ ತೆರಳಿತು.

ರವಿ, ಚಂದ್ರಕಾಂತ ಬೆಲ್ಲದ, ಮಹಾಂತೇಶ ಪಟ್ಟಣಶೆಟ್ಟಿ, ಬಸಲಿಂಗಯ್ಯಾ ಇಟಗಿ, ವೀರಣ್ಣ ಜಯಪ್ರಕಾಶ ಬಂಜೆಗೆರೆ, ರಾಜೇಂದ್ರ ಚೆನ್ನಿ, ಕೆ.ವಿಟುವಾ, ರಹಮತ್ ತುರಿಕೇರಿ, ಶಾಸಕ ಅರವಿಂದ ಬೆಲ್ಲದ ಹಾಗೂ ವಿವಿಧ ಸಂಘಟನೆಗಳು ಬಂಡಾಯ ಸಾಹಿತ್ಯ ಸಂಘ, ರಂಗಪರಿಸರ ಧಾರವಾಡ, ಕನ್ನಡ ಹಂಪಿ ವಿಶ್ವವಿದ್ಯಾಲಯ, ಕನ್ನಡ ಅಧ್ಯಾಪಕರ ಸಂಘ, ಗ್ರೀನ್ ಇಂಡಿಯಾ ಟ್ರಸ್ಟ್, ಜಮಾತೆ-ಇಸ್ಲಾಂ-ಎ ಹಿಂದ್ ರಂಗಭೂಮಿ ಪರೋಭಿವೃದ್ಧಿ ಸಂಸ್ಥೆ, ಅಕ್ಕನಬಳಗ, ಎ.ಐ.ಡಿ.ಎಸ್.ಓ ಹಾಗೂ ಹಿರೆಮಲ್ಲೂರು ಈಶ್ವರನ್ ಕಾಲೇಜ್, ಕಿಟೆಲ್ ಅಂಜುಮನ್ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರಗತಿಪರರಾದ ಗದಗಿನ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Write A Comment