ಬೆಂಗಳೂರು: ‘ಹಬ್ಬಗಳ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಗರದಾದ್ಯಂತ ನಿಗಾ ವಹಿಸಲಿದ್ದು, ಇದಕ್ಕೆ ನಾಗರಿಕರು ನಮ್ಮೊಂದಿಗೆ ಸಹಕರಿಸಬೇಕು’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್ ಹೇಳಿದರು.
ಗೌರಿ ಗಣೇಶ ಮತ್ತು ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಶಿಕ್ಷಕರ ಸದನದಲ್ಲಿ ಮಂಗಳವಾರ ಸಾರ್ವಜನಿಕರ ಜತೆ ಏರ್ಪಡಿಸಿದ್ದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹಗಳನ್ನು ಕೂರಿಸುವುದಕ್ಕೂ ಮುಂಚೆ ಆಯೋಜಕರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅಲ್ಲದೆ, ಇದೇ ಸ್ಥಳಗಳಲ್ಲಿ ಮೂರ್ತಿ ಕೂರಿಸುವ ಸಮಿತಿಯ ಪದಾಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಎದ್ದು ಕಾಣುವ ಬ್ಯಾನರ್ ಹಾಕಬೇಕು’ ಎಂದರು.
‘ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ತೊಂದರೆಯಾಗುವಂತಹ ಸ್ಥಳಗಳಲ್ಲಿ ವಿಗ್ರಹಗಳನ್ನು ಕೂರಿಸಬಾರದು. ಅಲ್ಲದೆ, ಮೂರ್ತಿ ಇರುವ ಪೆಂಡಾಲ್‌ಗಳಲ್ಲಿ ಆಯೋಜಕರೇ ದಿನದ ಇಪ್ಪತ್ತನಾಲ್ಕು ಗಂಟೆಯೂ ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಮಾತನಾಡಿ, ‘ಸೆಪ್ಟೆಂಬರ್ 17ರಿಂದ 28ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸಲು ಅನುಮತಿ ನೀಡಲಾಗು
ವುದು. ಇದಕ್ಕಾಗಿ ಆಯೋಜಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಂಚಾರ ಪೊಲೀಸ್ ಠಾಣೆ ಹಾಗೂ ಬೆಸ್ಕಾಂನಿಂದ ನಿರಪೇಕ್ಷಣ ಪತ್ರ ಪಡೆಯಬೇಕು’ ಎಂದರು.
‘ಗಣಪತಿ ಪೆಂಡಾಲ್‌ಗಳಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕು. ಅದಕ್ಕೂ ಮುಂಚೆ ಬಳಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಆಯೋಜಕರು ಮೂರ್ತಿ ವಿಸರ್ಜನೆ ಮಾಡುವ ಸ್ಥಳ ಮತ್ತು ಸಾಗುವ ಮಾರ್ಗದ ಬಗ್ಗೆಯೂ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.
‘ಸೆಪ್ಟೆಂಬರ್ 24ರಂದು ನಡೆಯುವ ಬಕ್ರೀದ್ ಹಬ್ಬದಂದು ನಡೆಯಲಿದ್ದು, ಈ ಸಂಬಂಧ ಪೊಲೀಸರು ಧರ್ಮಗುರುಗಳು ಮತ್ತು ನಾಗರಿಕ ವೇದಿಕೆಗಳ ಜತೆ ಸಭೆ ನಡೆಸಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮಕೈಗೊಳ್ಳಲಾಗುವುದು’ ಎಂದರು.
‘ಶಾಂತಿ ಕದಡುವುದಕ್ಕಾಗಿ ಕಿಡಿಗೇಡಿಗಳು ಹಬ್ಬಿಸುವ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಹಬ್ಬದ ಸಂಭ್ರಮಾಚರಣೆ ವೇಳೆ ಯುವಕರು ರಸ್ತೆಗಳು ಮತ್ತು ಮೇಲ್ಸೇತುವೆಗಳಲ್ಲಿ ಬೈಕ್ ವೀಲಿಂಗ್ ಮಾಡಬಾರದು’ ಎಂದು ತಿಳಿಸಿದರು.
ಗುಂಡಿಗಳ ಚಿತ್ರ ಕಳುಹಿಸಿ: ಬಿಬಿಎಂಪಿ ಆಯುಕ್ತ ಜಿ. ಕುಮಾರ್ ನಾಯಕ್, ‘ಮಾತನಾಡಿ ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಕೆಲ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಬಿಬಿಎಂಪಿ ಮಾಡಿಕೊಂಡು ಬರುತ್ತಿದೆ. ಸಾರ್ವಜನಿಕರು ಕೂಡ ಗುಂಡಿ ಬಿದ್ದಿರುವ ರಸ್ತೆಗಳ ಬಗ್ಗೆ ಚಿತ್ರ ಸಮೇತ ಮಾಹಿತಿ ನೀಡಿದ್ದಲ್ಲಿ, ಅಂತಹ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಸಭೆಯಲ್ಲಿ ವಿವಿಧ ಸಂಘ– ಸಂಸ್ಥೆಗಳು, ನಾಗರಿಕ ವೇದಿಕೆಗಳು ಹಾಗೂ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಾಹಿತಿ ನೀಡಿ
‘ಗಣೇಶ ಮೂರ್ತಿಗಳನ್ನು ಕೂರಿಸುವ ಸಂಬಂಧ ಯಾರಾದರೂ ಬಲವಂತವಾಗಿ ಚಂದಾ ವಸೂಲಿ ಮಾಡುತ್ತಿದ್ದರೆ, ತಕ್ಷಣ ಸಮೀಪದ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೆ, ಮೂರ್ತಿ ಕೂರಿಸಲು ಅನುಮತಿ ನೀಡುವುದಕ್ಕಾಗಿ ಒಂದು ವೇಳೆ ಪೊಲೀಸರೇನಾದರೂ ಲಂಚ ಕೇಳಿದರೆ, ಅವರ ಬಗ್ಗೆಯೂ ಮೇಲಾಧಿಕಾರಿಗಳಿಗೆ ದೂರು ಕೊಡಿ’ ಎಂದು ಮೇಘರಿಕ್ ಹೇಳಿದರು.