ಕರ್ನಾಟಕ

ಮೆಟ್ರೊ ನಿಲ್ದಾಣದಲ್ಲಿ ಉದ್ಯಾನ: ಪೀಣ್ಯ ನಿಲ್ದಾಣಕ್ಕೆ ಮೊದಲ ಅವಕಾಶ

Pinterest LinkedIn Tumblr

metroಬೆಂಗಳೂರು: ‘ನಮ್ಮ ಮೆಟ್ರೊ’ದ ನಿಲ್ದಾಣಗಳಲ್ಲಿ  ಖಾಸಗಿ ವ್ಯಕ್ತಿ ಮತ್ತು ಕಂಪೆನಿಗಳಿಂದ  ಉದ್ಯಾನ ನಿರ್ಮಾಣ ಮತ್ತು ನಿರ್ವಹಣೆ ಮಾಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು ನಿರ್ಧರಿಸಿದೆ.

ಈ ಸಂಬಂಧ ನಿಗಮವು ಟೆಂಡರ್‌ ಕರೆದಿದೆ. ಆಸಕ್ತ ಖಾಸಗಿ ವ್ಯಕ್ತಿ ಮತ್ತು ಕಂಪೆನಿಗಳು ಅಕ್ಟೋಬರ್‌ 9ರ ಒಳಗೆ ಬಿಡ್‌ ಸಲ್ಲಿಸಬಹುದು. ಯಶಸ್ವಿ ಬಿಡ್‌ದಾರರು ತಜ್ಞರ ನೆರವಿನೊಂದಿಗೆ ನಿಗದಿತ ನಿಲ್ದಾಣದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸುವುದರ ಜತೆಗೆ ನಿರ್ವಹಣೆಯನ್ನೂ ನೋಡಿಕೊಳ್ಳಬೇಕು. ಈ ಅವಕಾಶ ಮಾಡಿಕೊಟ್ಟದ್ದಕ್ಕಾಗಿ ವಾರ್ಷಿಕ ಶುಲ್ಕವನ್ನೂ ನಿಗಮಕ್ಕೆ ಪಾವತಿಸಬೇಕು.

ಇದಕ್ಕೆ ಪ್ರತಿಯಾಗಿ ಉದ್ಯಾನ ಅಭಿವೃದ್ಧಿ ಮತ್ತು ನಿರ್ವಹಣೆ ಗುತ್ತಿಗೆ ಪಡೆಯುವ ವ್ಯಕ್ತಿ ಅಥವಾ ಕಂಪೆನಿಯ ಹೆಸರನ್ನು ಆಯಾ ಉದ್ಯಾನದಲ್ಲಿ ಹಾಕಲು ಅವಕಾಶ ಕೊಡಲಾಗುವುದು. ಅದರ ಹೊರತಾಗಿ ಯಾವುದೇ ರೂಪದ ಜಾಹೀರಾತಿಗೆ ಅವಕಾಶ ಕೊಡುವುದಿಲ್ಲ ಎಂದು ನಿಗಮದ ಹಣಕಾಸು ವಿಭಾಗದ ಮುಖ್ಯ ವ್ಯವಸ್ಥಾಪಕ ಯು.ಎ.ವಸಂತರಾವ್‌ ತಿಳಿಸಿದರು.

‘ಸದ್ಯಕ್ಕೆ ಪೀಣ್ಯ ನಿಲ್ದಾಣದಲ್ಲಿ ಉದ್ಯಾನ ನಿರ್ಮಾಣ ಮತ್ತು ನಿರ್ವಹಣೆಗಾಗಿ ಮಾತ್ರ ಟೆಂಡರ್‌ ಕರೆದಿದ್ದೇವೆ. ಅಲ್ಲಿನ ಯಶಸ್ಸು ನೋಡಿಕೊಂಡು ಉಳಿದ ನಿಲ್ದಾಣಗಳಲ್ಲಿ ಅವಕಾಶ ಮಾಡಿಕೊಡಲಾಗುವುದು’ ಎಂದು ಅವರು ಹೇಳಿದರು.

ಪರಿಶೀಲನೆ ಪ್ರಗತಿಯಲ್ಲಿ: ‘ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗಿನ 6.4 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಸಂಚಾರದ ಸುರಕ್ಷತೆ ಬಗ್ಗೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರಿಂದ ಅನುಮತಿ ಸಿಗುವ ನಿರೀಕ್ಷೆ ಇದೆ. ನಂತರದಲ್ಲಿ ಉದ್ಘಾಟನಾ ದಿನಾಂಕದ ಬಗ್ಗೆ ನಿಗಮದ ಆಡಳಿತ ಮಂಡಳಿ ತೀರ್ಮಾನಿಸಲಿದೆ’ ಎಂದು ಅವರು ತಿಳಿಸಿದರು.

Write A Comment