ಕರ್ನಾಟಕ

ಹಕ್ಕಿಗಳ ಹಾಡಿನ ಜುಗಲ್‌ಬಂದಿ: ಐಐಎಸ್‌ಸಿ ಅಂಗಳದಲ್ಲಿ ಹೊಸದೊಂದು ಸಂಗೀತ ಲೋಕ

Pinterest LinkedIn Tumblr

pvec09sepBirds01ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅಂಗಳ ಮಂಗಳವಾರ ಬಲು ವಿಶಿಷ್ಟವಾದ ಜುಗಲ್‌ಬಂದಿ ಸಂಗೀತಕ್ಕೆ ಸಾಕ್ಷಿಯಾಯಿತು. ಹಕ್ಕಿಗಳ ಇಂಚರ ಅಲೆ–ಅಲೆಯಾಗಿ ಕೇಳಿಬಂದ ಮರುಕ್ಷಣವೇ ಎದ್ದ ಬೀಟ್‌ ಬಾಕ್ಸಿಂಗ್‌ (ಯಾವುದೇ ಸಾಧನಗಳಿಲ್ಲದೆ ಬಾಯಿಯಿಂದ ಹೊರಡಿಸುವ ಸದ್ದು) ವಾದನ ಅಲ್ಲಿ ಹೊಸದೊಂದು ಸಂಗೀತ ಲೋಕವನ್ನೇ ಸೃಷ್ಟಿಸಿತ್ತು!

ಐಐಎಸ್‌ಸಿ ಆವರಣದಲ್ಲಿ ಏರ್ಪಡಿಸಿದ್ದ ವಿಜ್ಞಾನ ಸಂರಕ್ಷಣೆಗಾಗಿ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ನೆರೆದಿದ್ದವರು ಬೀಟ್‌ ಬಾಕ್ಸರ್‌ ಬೆನ್‌ ಮಿರಿನ್‌ ನಡೆಸಿಕೊಟ್ಟ ಹಕ್ಕಿಗಳ ಹಾಡು ಮತ್ತು ಬೀಟ್‌ ಬಾಕ್ಸ್‌ ಫ್ಯೂಷನ್‌ನಲ್ಲಿ ತೇಲಿಹೋದರು.

‘ಯಾವುದೇ ತಾಣದಲ್ಲಿ ಕೇಳಿಬರುವ ಹಕ್ಕಿಗಳ ಇಂಚರ ಆ ತಾಣದ ಸ್ಥಾನಿಕ ನಾಡಗೀತೆಯೇ ಸರಿ. ಏಕೆಂದರೆ, ಆ ಹಾಡಿಲ್ಲದ ಒಂದೇ ಒಂದು ದಿನವೂ ಅಲ್ಲಿರುವುದಿಲ್ಲ’ ಎಂದು ಮಿರಿನ್‌ ಹೇಳಿದರು. ‘ಹೇಳಿ, ಇದು ಯಾವ ಹಕ್ಕಿ ಹಾಡು’ ಎಂದೆನ್ನುತ್ತಾ ಅವರು ಹಲವು ಪಕ್ಷಿಗಳ ಕೂಗನ್ನು ಅನುಕರಿಸಿ ತೋರಿದರು.

‘ಬೀಟ್‌ ಬಾಕ್ಸಿಂಗ್‌ಗೆ ಬೇಕಾದ ಈ ವಾದನ (ಬಾಯಿ ತೋರಿಸುತ್ತಾ) ಸದಾ ನಿಮ್ಮ ಜತೆಯಲ್ಲಿಯೇ ಇರುತ್ತದೆ. ಆಯ್ಯೋ, ವಾದ್ಯವನ್ನು ಮನೆಯಲ್ಲಿ ಮರೆತುಬಂದೆನಲ್ಲ ಎಂಬ ಉದ್ಗಾರ ತೆಗೆಯಲು ಆಸ್ಪದವೇ ಇಲ್ಲ’ ಎಂದು ಅವರು ಚಟಾಕಿ ಹಾರಿಸಿದಾಗ ಸಭಾಂಗಣದಲ್ಲಿ ನಗೆಯ ಅಲೆ.

‘ಪಶ್ಚಿಮ ಘಟ್ಟದಲ್ಲಿ ಕೆಲವು ದಿನ ಕಳೆದು ಇನ್ನಷ್ಟು ಹಕ್ಕಿಗಳ ಧ್ವನಿ ಕೇಳಲಿದ್ದೇನೆ’ ಎಂದು ಹೇಳಿದರು. ಪಕ್ಷಿಗಳ ಧ್ವನಿಯನ್ನು ಹೇಗೆ ಗ್ರಹಿಸಬೇಕು ಎಂಬುದನ್ನು ಅವರು ಹೇಳಿಕೊಟ್ಟರು. ಕೀಟ ಪ್ರಪಂಚದ ಬಗೆಗೂ ವಿದ್ಯಾರ್ಥಿ ವಿಜ್ಞಾನಿಗಳಿಗೆ ಕೆಲವು ಪಾಠಗಳಿದ್ದವು. ಜೀವವೈವಿಧ್ಯದ ತಾಣಗಳಾದ ಅರಣ್ಯ ಪ್ರದೇಶಗಳು ನಾಶ ಹೊಂದುತ್ತಿರುವುದು ಸಭೆಯಲ್ಲಿದ್ದ ಎಲ್ಲರನ್ನೂ ಬಾಧಿಸುತ್ತಿತ್ತು.

Write A Comment