ಕರ್ನಾಟಕ

ಪಾರ್ಕಿಂಗ್‌ ಶುಲ್ಕಕ್ಕೆ ನಾಗರಿಕರ ವಿರೋಧ; ಅಕ್ಟೋಬರ್‌ನಿಂದ ಶುಲ್ಕ ವಿಧಿಸಲು ನಿರ್ಧರಿಸಿರುವ ಬಿಬಿಎಂಪಿ

Pinterest LinkedIn Tumblr

parkಬೆಂಗಳೂರು:  ನಗರದ ಹೃದಯ ಭಾಗ­ದ ರಸ್ತೆಗಳಲ್ಲಿ ವಾಹನ ನಿಲುಗಡೆಗಾಗಿ ಮುಂಬರುವ ಅಕ್ಟೋಬರ್‌ನಿಂದ ಶುಲ್ಕ ವಿಧಿಸಲು ಬಿಬಿಎಂಪಿ ಕೈಗೊಂಡಿರುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸಮೂಹ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸದ ಹೊರತು ನಾಗರಿಕರ ಮೇಲೆ ಹೀಗೆ ಏಕಾಏಕಿ ಗದಾಪ್ರಹಾರ ನಡೆಸುವುದು ತರವಲ್ಲ ಎಂದು ನಗರ ಸಾರಿಗೆ ತಜ್ಞರೂ ಸಾರ್ವಜನಿಕರ ಜತೆ ದನಿಗೂಡಿಸುತ್ತಾರೆ.

‘ಪ್ರತಿ ಕಿಲೋಮೀಟರ್‌ ರಸ್ತೆ ನಿರ್ಮಾಣಕ್ಕೆ ₹ 4ರಿಂದ 5 ಕೋಟಿ ಖರ್ಚಾಗಿರುತ್ತದೆ. ರಸ್ತೆ ನಿರ್ಮಾಣದ ಮೂಲ ಉದ್ದೇಶವೇ ವಾಹನ ಓಡಾಟ. ಶುಲ್ಕ ಪಾವತಿಸಿ ರಸ್ತೆ ಮೇಲೆ ವಾಹನ ಪಾರ್ಕಿಂಗ್‌ ಮಾಡಲು ಬಿಬಿಎಂಪಿ ಅದು ಹೇಗೆ ಯೋಜನೆ ಸಿದ್ಧಪಡಿಸುತ್ತದೆ’ ಎಂದು ಪ್ರಶ್ನಿಸುತ್ತಾರೆ ರಾಜ್ಯ ಸರ್ಕಾರದ ಸಲಹೆಗಾರ (ಸಂಚಾರ, ಸಾರಿಗೆ ಮತ್ತು ಮೂಲಸೌಕರ್ಯ) ಎಂ.ಎನ್‌. ಶ್ರೀಹರಿ.

‘ಕಟ್ಟಡ ನಿರ್ಮಾಣ ಮಾಡುವಾಗ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕಾದುದು ಕಾನೂನಿನ ಪ್ರಕಾರ ಕಡ್ಡಾಯ. ಆಗ ನಿಯಮ ಉಲ್ಲಂಘಿಸಲು ಅನುವು ಮಾಡಿಕೊಟ್ಟ ಪಾಲಿಕೆಯೇ ಈಗ ಇಂತಹ ನಿರ್ಣಯ ಕೈಗೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ನಗರದ ಶೇ 60ರಷ್ಟು ರಸ್ತೆಗಳು ಇಕ್ಕಟ್ಟಾಗಿವೆ. ಹೃದಯ ಭಾಗದಲ್ಲಿ ಈಗಾ ಗಲೇ ವಾಹನಗಳ ಓಡಾಟದ ವೇಗ ಗಂಟೆಗೆ 10 ಕಿ.ಮೀ.ಗೆ ಇಳಿದಿದೆ. ರಸ್ತೆ ಮೇಲೆ ಪಾರ್ಕಿಂಗ್‌ ಹೆಚ್ಚಿದರೆ ಇನ್ನೂ ತೊಂದರೆ ಆಗಲಿದೆ. ಅದರ ಬದಲು ಪ್ರಮುಖ ಪ್ರದೇಶಗಳಲ್ಲಿ ಬಿಬಿಎಂಪಿಯೇ ಪಾರ್ಕಿಂಗ್‌  ಸಂಕೀರ್ಣಗಳನ್ನು ನಿರ್ಮಾಣ ಮಾಡಬೇಕು’ ಎಂದು ಹೇಳುತ್ತಾರೆ.

‘ಮೆಟ್ರೊ ಮೊದಲ ಹಂತದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಬಡಾವಣೆಗಳಿಂದ ಮೆಟ್ರೊ ನಿಲ್ದಾಣಗಳಿಗೆ ಸಾರಿಗೆ ವ್ಯವಸ್ಥೆ ಸಹ ಸಮರ್ಪಕವಾಗಿ ರೂಪುಗೊಂಡಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಜನರ ಮೇಲೆ ಹೊರೆ ಹಾಕುವುದು ಸರಿಯಲ್ಲ’ ಎಂದು ಹೇಳುತ್ತಾರೆ ಸಾರಿಗೆ ವಿಷಯಗಳ ತಜ್ಞ ಲೋಕೇಶ್‌ ಹೆಬ್ಬಾನಿ.

ಮಾಜಿ ಮೇಯರ್‌ ಜೆ.ಹುಚ್ಚಪ್ಪ, ‘ಪಾರ್ಕಿಂಗ್‌ ಶುಲ್ಕ ದುಬಾರಿ ಆಯಿತು. ಈ ಶುಲ್ಕವನ್ನು ಜನಸಾಮಾನ್ಯರು ಮಾತ್ರವಲ್ಲ ಶ್ರೀಮಂತರೂ ಕೊಡಲು ಸಾಧ್ಯವಿಲ್ಲ’ ಎನ್ನುತ್ತಾರೆ.

‘ಬಿಬಿಎಂಪಿಗೆ ಆದಾಯ ತರಲು ಪಾರ್ಕಿಂಗ್‌ ಶುಲ್ಕವೊಂದೇ ದಾರಿಯೇ? ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವ ಲಕ್ಷಾಂತರ ಜನ ಇದ್ದಾರೆ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವರಮಾನ ಸೋರಿಕೆ ತಡೆಗಟ್ಟಬೇಕು. ಜಾಹೀರಾತು ಫಲಕಗಳಿಂದ ಹೆಚ್ಚಿನ ಕರ ವಸೂಲಿ ಮಾಡಬೇಕು’ ಎಂದು ಸಲಹೆ ನೀಡುತ್ತಾರೆ.

‘ದಿಕ್ಕುತಪ್ಪಿದ ಪಾರ್ಕಿಂಗ್‌ ವ್ಯವಸ್ಥೆ ಸರಿದಾರಿಗೆ ತರಲು ಯಾರ ಆಕ್ಷೇಪವೂ ಇಲ್ಲ. ದಲ್ಲಾಳಿಗಳ ಪಾಲಾಗಿರುವ ಪಾರ್ಕಿಂಗ್‌ ಸ್ಥಳಗಳನ್ನು ಬಿಬಿಎಂಪಿ ವಶಕ್ಕೆ ಪಡೆದು ಟೆಂಡರ್‌ ಮೂಲಕ ಗುತ್ತಿಗೆದಾರರಿಗೆ ಕೊಡಬೇಕು. ನಿಗದಿತ ಪಾರ್ಕಿಂಗ್‌ ಸ್ಥಳಗಳಲ್ಲಿ ತುಂಬಾ ಕನಿಷ್ಠ ಶುಲ್ಕವನ್ನು ಮಾತ್ರ ಪಡೆಯಬೇಕು. ರಸ್ತೆ–ರಸ್ತೆಗೆ ಪಾರ್ಕಿಂಗ್‌ ಶುಲ್ಕ ಪಡೆಯುವುದು ತರವಲ್ಲ’ ಎಂದು ವಿವರಿಸುತ್ತಾರೆ.

‘ನಗರದ ನಾಗರಿಕರನ್ನು ಎಷ್ಟು ಅಂತ ಶೋಷಣೆ ಮಾಡಲಾಗುತ್ತದೆ? ಮೂಲ ತಪ್ಪಿರುವುದು ಬಿಬಿಎಂಪಿಯಲ್ಲೇ. ಪ್ರತಿ ಕಟ್ಟಡದಲ್ಲಿ ವಾಹನ ನಿಲುಗಡೆ ಇರುವಂತೆ ನೋಡಿಕೊಂಡಿದ್ದರೆ ಈಗ ಪಾರ್ಕಿಂಗ್‌ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ’ ಎನ್ನುವುದು ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಎನ್‌. ಮುಕುಂದ್‌ ಅವರ ತಕರಾರು.

‘ಪ್ರತಿಯೊಂದು ವಾಣಿಜ್ಯ ಸಂಸ್ಥೆಯ ಟ್ರೇಡ್‌ ಲೈಸನ್ಸ್‌ ನವೀಕರಣ ಮಾಡುವಾಗ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇಲ್ಲದಿದ್ದರೆ ಲೈಸನ್ಸ್‌ ನವೀಕರಣ ಮಾಡಬಾರದು. ಪಾರ್ಕಿಂಗ್‌ಗೆ ಎಲ್ಲ ಕಡೆ ಸೂಕ್ತ ವ್ಯವಸ್ಥೆ ಕಲ್ಪಿಸದ ಮೇಲೂ ರಸ್ತೆ ಮೇಲೆ ವಾಹನ ನಿಲುಗಡೆ ಮಾಡಿದರೆ ಅಧಿಕ ಶುಲ್ಕ ಆಕರಿಸಲು ಯಾರ ಅಭ್ಯಂತರವೂ ಇರುವುದಿಲ್ಲ’ ಎಂದು ಹೇಳುತ್ತಾರೆ.

‘ವಾಹನ ನಿಲುಗಡೆ ಪ್ರದೇಶದಲ್ಲಿ ಸುರಕ್ಷತೆ, ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಶುಲ್ಕ ಆಕರಣೆ ಮಾಡಬಹುದು. ಸೌಲಭ್ಯ ಕಲ್ಪಿಸಲು ಎಷ್ಟು ವ್ಯಯ ಆಗಿರುವುದೋ ಅಷ್ಟನ್ನು ಮಾತ್ರ ಶುಲ್ಕದ ರೂಪದಲ್ಲಿ ಸಂಗ್ರಹಿಸಬೇಕು. ಜನರಿಗೆ ಸೇವೆ ಒದಗಿಸಬೇಕಾದ ಸ್ಥಳೀಯ ಆಡಳಿತ ಲಾಭದ ದೃಷ್ಟಿಯಿಂದ ಯೋಚಿಸುವುದು ತರವಲ್ಲ’ ಎಂದು ವಿವರಿಸುತ್ತಾರೆ ಈಶಾನ್ಯ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ್‌.

‘ಕೇಂದ್ರೀಯ ವಾಣಿಜ್ಯ ಪ್ರದೇಶದ ಬಹುತೇಕ ರಸ್ತೆಗಳು ತುಂಬಾ ಇಕ್ಕಟ್ಟಾಗಿವೆ. ಅಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದರೆ ಓಡಾಟಕ್ಕೆ ಎಲ್ಲಿ ಸ್ಥಳ ಉಳಿಯುವುದು’ ಎಂದು ಪ್ರಶ್ನಿಸುತ್ತಾರೆ ಮಲ್ಲೇಶ್ವರದ ಸ್ವಾಭಿಮಾನ ಸಂಘಟನೆ ಮುಖ್ಯಸ್ಥ ಆನಂದ ಶಿರೂರ್‌.
‘ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗದಂತೆ ಪಾರ್ಕಿಂಗ್‌ ವಲಯ ಗುರುತಿಸಿದರೆ ಯಾವ ತಕರಾರೂ ಇಲ್ಲ. ರಸ್ತೆಗಳ ದುರ್ಬಳಕೆ ತಪ್ಪಿಸಲು ಶುಲ್ಕ ಆಕರಿಸುವುದು ತಪ್ಪಲ್ಲ’ ಎಂದು ಅವರು ಹೇಳುತ್ತಾರೆ. ‘ಒಳ್ಳೆಯ ವ್ಯವಸ್ಥೆ ಕಲ್ಪಿಸಿದರೆ ಯೋಗ್ಯ ಶುಲ್ಕ ನೀಡಲು ಜನ ಸಹ ಸಿದ್ಧರಿದ್ದಾರೆ’ ಎಂದು ಅಭಿಪ್ರಾಯಪಡುತ್ತಾರೆ.

***
ಸಮೂಹ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಬೆಳೆಸಿದ ನಂತರವಷ್ಟೇ ಖಾಸಗಿ ವಾಹನಗಳ ಹಾವಳಿ ತಡೆಗಟ್ಟಲು ಪಾರ್ಕಿಂಗ್‌ ಶುಲ್ಕ ಸಂಗ್ರಹದತ್ತ ಯೋಚಿಸಬೇಕು
-ಲೋಕೇಶ್‌ ಹೆಬ್ಬಾನಿ,
ನಗರ ಸಾರಿಗೆ ತಜ್ಞ

Write A Comment