ಬೆಂಗಳೂರು: ವಿದ್ಯುತ್ ಕೊರತೆಯಿಂದಾಗಿ ನಗರದಲ್ಲಿ ಬುಧವಾರದಿಂದ ದಿನಕ್ಕೆ ನಾಲ್ಕು ಗಂಟೆ ಲೋಡ್ ಶೆಡ್ಡಿಂಗ್ ಮಾಡಲು ಬೆಸ್ಕಾಂ ನಿರ್ಧರಿಸಿದೆ.
ಈ ಕುರಿತು ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ‘ನಗರದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿರುವುದರಿಂದ ದಿನಕ್ಕೆ 3 ಗಂಟೆ ಇದ್ದ ಲೋಡ್ ಶೆಡ್ಡಿಂಗ್ ಅನ್ನು 4 ಗಂಟೆಗೆ ವಿಸ್ತರಿಸಲಾಗಿದೆ’ ಎಂದರು.
‘ವಸತಿ ಪ್ರದೇಶಗಳಲ್ಲಿ 4 ತಾಸು, ವಾಣಿಜ್ಯ ಪ್ರದೇಶಗಳಲ್ಲಿ 3 ತಾಸು ಹಾಗೂ ಕೈಗಾರಿಕ ಪ್ರದೇಶಗಳಲ್ಲಿ 2 ತಾಸು ಲೋಡ್ ಶೆಡ್ಡಿಂಗ್ ಇರಲಿದೆ. ಅಂದರೆ, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ತಲಾ ಒಂದೊಂದು ತಾಸು ವಿದ್ಯುತ್ ಇರುವುದಿಲ್ಲ’ ಎಂದು ಪಂಕಜ್ ಕುಮಾರ್ ಪಾಂಡೆ ಅವರು ತಿಳಿಸಿದರು.
‘ಈಗ ಶೇ 35ರಷ್ಟು ವಿದ್ಯುತ್ ಕೊರತೆ ಇದೆ. ನಗರಕ್ಕೆ ನಿತ್ಯ 4 ಸಾವಿರ ಮೆಗಾ ವಾಟ್ ವಿದ್ಯುತ್ ಅಗತ್ಯವಿದ್ದು, ಸದ್ಯ 2800 ಮೆ.ವಾ. ಮಾತ್ರ ದೊರೆಯುತ್ತಿದೆ. ಪ್ರದೇಶಗಳಿಗೆ ಅನುಗುಣವಾಗಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರಲಿದ್ದು, ವಿದ್ಯುತ್ ಕೊರತೆ ನೀಗುವವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ’ ಎಂದು ಹೇಳಿದರು.
ಲೋಡ್ ಶೆಡ್ಡಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಬೆಸ್ಕಾಂ ವೆಬ್‌ಸೈಟ್: www.bescom.orgಗೆ ಭೇಟಿ ನೀಡಬಹುದು.