ಕರ್ನಾಟಕ

ವಿಜೃಂಭಣೆಯ ಸಂತ ಮೇರಿ ಉತ್ಸವ

Pinterest LinkedIn Tumblr

santa-fiಸಂತ ಮೇರಿಯ ಉತ್ಸವದ ಅಂಗವಾಗಿ ಶಿವಾಜಿನಗರದ ಸಂತ ಮೇರಿ ಬೆಸಿಲಿಕಾ ಬಳಿ ಸೇರಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ

ಬೆಂಗಳೂರು: ಶಿವಾಜಿನಗರ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು ಮಂಗಳವಾರ ಸಂತ ಮೇರಿಯ ಭಕ್ತರಿಂದ ತುಂಬಿ ತುಳುಕುತ್ತಿದ್ದವು.
ನಿಲ್ದಾಣದಿಂದ ಆನತಿ ದೂರದಲ್ಲಿರುವ ಸಂತ ಮೇರಿ ಬೆಸಿಲಿಕಾದಲ್ಲಿ ಆರೋಗ್ಯ ಮಾತೆಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯಿತು.

ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಬರ್ನಾರ್ಡ್ ಮೊರಸ್ ಅವರು ಸಂಜೆ ನೆರೆದಿದ್ದ ಭಕ್ತರಿಗೆ ಶಾಂತಿ ಸಂದೇಶ ನೀಡುವ ಮೂಲಕ, ಮೇರಿ ಮಾತೆಯು ಪುಟ್ಟ ಏಸುವನ್ನು ಅಪ್ಪಿಕೊಂಡ ಭಂಗಿಯಲ್ಲಿರುವ ಮೂರ್ತಿ ಹೊತ್ತ ಶ್ವೇತ ಬಣ್ಣದ ರಥಕ್ಕೆ ಚಾಲನೆ ನೀಡಿದರು.

ಪಾದ್ರಿಯ ವೇಷದಲ್ಲಿದ್ದ ಪುಟ್ಟ ಬಾಲಕರು ರಥದ ಮುಂದೆ ಮೆರವಣಿಗೆ ಹೊರಟರು. ಅವರ ಹಿಂದೆ ಕ್ರೈಸ್ತ ಧರ್ಮದ ಮುಖಂಡರನ್ನು ಹೊತ್ತ ವಾಹನಗಳು ಸಾಗಿದವು. ವಾಹನದ ಸಾಲುಗಳ ಹಿಂದೆ ಕ್ರೈಸ್ತ ಸನ್ಯಾಸಿನಿಯರ ಗುಂಪು ಸಾಲಾಗಿ ಹೋಗುತ್ತಿದ್ದ ದೃಶ್ಯ ಕಂಡುಬಂತು.

ರಥ ಮುಂದೆ ಸಾಗುತ್ತಿದ್ದಂತೆಯೇ ಭಕ್ತರು ಸಂಪಿಗೆ, ಮಲ್ಲಿಗೆ ಹೂಗಳನ್ನು ಮೂರ್ತಿಯತ್ತ ತೂರಿದರು. ಕೆಲವರು ತಮ್ಮಲ್ಲಿದ್ದ ಶಿಲುಬೆ ಹೊಂದಿದ ಸರವನ್ನು ಕೈಯಲ್ಲಿ ಹಿಡಿದು ನಮಿಸುತ್ತಿದ್ದರು.

ಮೇರಿ ಮಾತೆಗೆ ನಡೆಯುತ್ತಿದ್ದ ಪೂಜೆ ಮತ್ತು ಧರ್ಮಗುರುಗಳ ಸಂದೇಶವನ್ನು ಚರ್ಚ್‌ನ ಹೊರಗಡೆ ನೆರೆದಿದ್ದ ಭಕ್ತರು ವೀಕ್ಷಿಸುವುದಕ್ಕಾಗಿ, ಅಲ್ಲಲ್ಲಿ ಬೃಹತ್‌ ಗಾತ್ರದ ಪರದೆಗಳನ್ನು ಅಳವಡಿಸಲಾಗಿತ್ತು.

ಬಿಗಿ ಭದ್ರತೆ:  ಹಬ್ಬದ ಸಂಭ್ರಮದಲ್ಲಿ ಯಾವುದೇ ಅನಾಹುತಗಳು ನಡೆಯದಂತೆ ಪೊಲೀಸ್ ಇಲಾಖೆ ಬಗಿ ಬಂದೋಬಸ್ತ್ ಮಾಡಿತ್ತು.
ಅಲ್ಲದೆ, ಮೀನಾಕ್ಷಿ ದೇವಸ್ಥಾನದಿಂದ ಇಂಡಿಯನ್ ಎಕ್ಸ್‌ಪ್ರೆಸ್‌ ವೃತ್ತದವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿತ್ತು.

ಜನದಟ್ಟಣೆಯ ನಿಯಂತ್ರಣಕ್ಕಾಗಿ ಶಿವಾಜಿನಗರದ ಬಿಎಂಟಿಸಿ ಬಸ್‌ ನಿಲ್ದಾಣವನ್ನು ಬೆಳಿಗ್ಗೆಯಿಂದ ರಾತ್ರಿ 8ರವರೆಗೆ ಮುಚ್ಚಲಾಗಿತ್ತು. ಹಾಗಾಗಿ, ಬಸ್‌ಗಳು ಇಂಡಿಯನ್‌ ಎಕ್ಸ್‌ಪ್ರೆಸ್‌ ವೃತ್ತ ಮತ್ತು ಕಬ್ಬನ್‌ ರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದವು. ಜತೆಗೆ ಶಿವಾಜಿನಗರ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

Write A Comment