ಮೇಯರ್–ಉಪಮೇಯರ್ ಸ್ಥಾನಕ್ಕೆ ಶುಕ್ರವಾರ ಚುನಾವಣೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸಂಖ್ಯಾಬಲಕ್ಕಾಗಿ ತೆರೆಮರೆಯಲ್ಲಿ ಸರ್ಕಸ್ ನಡೆದೇ ಇದೆ. ಸದ್ಯ ಸಂಖ್ಯೆಯ ಆಟದಲ್ಲಿ ಮೇಲಿದ್ದಂತೆ ಕಂಡುಬರುವ ಕಾಂಗ್ರೆಸ್ ಬಣದಲ್ಲಿ ಮೇಯರ್ ಹುದ್ದೆಗೆ ಪೈಪೋಟಿ ಹೆಚ್ಚಿದೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಕ್ಷೇತ್ರದವರೇ ಆದ ಬಿ.ಎನ್. ಮಂಜುನಾಥ್ ರೆಡ್ಡಿ ಪರವಾಗಿದ್ದರೆ, ಸಚಿವ ದಿನೇಶ್ ಗುಂಡೂರಾವ್, ಶಾಸಕ ಮುನಿರತ್ನ ಮತ್ತಿತರರು ಆರ್.ಎಸ್. ಸತ್ಯನಾರಾಯಣ ಪರ ವಕಾಲತ್ತು ವಹಿಸಿದ್ದಾರೆ. ಮ್ಯಾಜಿಕ್ ಸಂಖ್ಯೆ ಒಲಿಸಿಕೊಳ್ಳಲು ಬಿಜೆಪಿ ಯಶಸ್ವಿಯಾದರೆ ಪದ್ಮನಾಭ ರೆಡ್ಡಿ ಆ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಮೇಯರ್–ಉಪಮೇಯರ್ ಆಯ್ಕೆ ಪ್ರಕ್ರಿಯೆ ಸುತ್ತಲಿನ ಮಾಹಿತಿ ಇಲ್ಲಿದೆ:
1. ಸದಸ್ಯರ ಪ್ರಮಾಣ
ಮೇಯರ್–ಉಪಮೇಯರ್ ಚುನಾವಣೆಗೆ ಮುನ್ನ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಕಾಯ್ದೆ 1976ರ ಸೆಕ್ಷನ್ 18ರನ್ವಯ ಚುನಾಯಿತ ಸದಸ್ಯರಿಗೆ ಪ್ರಾದೇಶಿಕ ಆಯುಕ್ತರು ಪ್ರಮಾಣ ವಚನ ಬೋಧಿಸಲಿದ್ದಾರೆ. ಹತ್ತು ಜನರಿಗೆ ಒಂದು ತಂಡದಂತೆ ಮಾಡಿ ಸಾಮೂಹಿಕವಾಗಿ ಪ್ರಮಾಣ ವಚನ ಬೋಧಿಸಲು ನಿರ್ಧರಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಮಾಣ ವಚನದ ನಮೂನೆ ಮುದ್ರಿಸಲಾಗಿದೆ.
2. ಮೇಯರ್ ಚುನಾವಣೆ
ಕೆಎಂಸಿ ಕಾಯ್ದೆ ಪ್ರಕಾರ ಮೇಯರ್–ಉಪಮೇಯರ್ ಆಯ್ಕೆಗೆ ಸಭೆ ಸೇರಲು ನೋಟಿಸ್ ನೀಡಿದ ದಿನದಿಂದ ಚುನಾವಣೆ ನಡೆಯುವ ದಿನದವರೆಗೆ ಪ್ರತಿದಿನ ಬೆಳಿಗ್ಗೆ 8ರಿಂದ 9.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ನಮೂನೆ–27ರ ಒಂದೊಂದು ಸೆಟ್ ನಾಮಪತ್ರ (ಮೇಯರ್, ಉಪಮೇಯರ್ ಹಾಗೂ 12 ಸ್ಥಾಯಿ ಸಮಿತಿಗಳ ಸದಸ್ಯತ್ವಕ್ಕಾಗಿ ನಾಮಪತ್ರದ ಅರ್ಜಿಗಳ ಗುಚ್ಛ) ಪಡೆದಿವೆ. ಆದರೆ, ಬುಧವಾರದವರೆಗೆ ನಾಮಪತ್ರ ಸಲ್ಲಿಕೆ ಆಗಿಲ್ಲ.
ಚುನಾವಣೆ ನಡೆಯುವ ದಿನವಾದ ಶುಕ್ರವಾರ ಬೆಳಿಗ್ಗೆಯೇ ನಾಮಪತ್ರ ಸಲ್ಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಬಣಗಳು ತೀರ್ಮಾನಿಸಿವೆ.
3. ಆಯ್ಕೆ ಪ್ರಕ್ರಿಯೆ ಹೇಗೆ?
ಬೆಳಿಗ್ಗೆ 11.30ಕ್ಕೆ ಸಭೆ ಆರಂಭವಾಗಲಿದ್ದು, ಪ್ರಾದೇಶಿಕ ಆಯುಕ್ತರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆ ಸೇರುತ್ತಿದ್ದಂತೆಯೇ ಎಲ್ಲ ಸದಸ್ಯರ ಹಾಜರಾತಿ ಪಡೆಯಲಾಗುತ್ತದೆ. ನಂತರ ಪ್ರಮಾಣ ವಚನ ಬೋಧಿಸಲಾಗುತ್ತದೆ. ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಮುಗಿದ ಬಳಿಕ ಪ್ರಾದೇಶಿಕ ಆಯುಕ್ತರು ಚುನಾವಣಾ ಪ್ರಕ್ರಿಯೆ ಆರಂಭಿಸುತ್ತಾರೆ. ಕೆಎಂಸಿ ಕಾಯ್ದೆ 72 (ಬಿ) ಪ್ರಕಾರ, ಬಂದ ಎಲ್ಲ ನಾಮಪತ್ರಗಳನ್ನು ಪರಿಶೀಲಿಸಿ, ಕ್ರಮಬದ್ಧ ಆಗಿರುವ ನಾಮಪತ್ರಗಳ ವಿವರವನ್ನು ಆಯುಕ್ತರು ಪ್ರಕಟಿಸುತ್ತಾರೆ. ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಲಾಗುತ್ತದೆ. ಬಳಿಕ ಚುನಾವಣೆ ನಡೆಸಲಾಗುತ್ತದೆ.
ನಿಯಮ 72 (ಡಿ) (3)ರ ಪ್ರಕಾರ ಮೊದಲು ಅಭ್ಯರ್ಥಿ ಪರವಾಗಿ ಇರುವವರು, ನಂತರ ವಿರುದ್ಧವಾಗಿ ಇರುವವರು ಕೈ ಎತ್ತುವ ಮೂಲಕ ಮತಗಳನ್ನು ದಾಖಲಿಸಬೇಕು. ನಡವಳಿ ಪುಸ್ತಕದಲ್ಲಿ ಸದಸ್ಯರ ಮತ ದಾಖಲಿಸಿಕೊಂಡು ಅವರ ಸಹಿ ಪಡೆಯಲಾಗುತ್ತದೆ.
ನಿಯಮ 72 (ಡಿ) (4)ರ ಪ್ರಕಾರ ಮತದಾನ ಹಕ್ಕು ಹೊಂದಿದ ಸದಸ್ಯರಲ್ಲಿ ಇಚ್ಛಿಸಿದವರು ತಟಸ್ಥರಾಗಿ ಉಳಿಯಲು ಅವಕಾಶ ಇದೆ. ಹೆಚ್ಚಿನ ಮತ ಪಡೆದ ಅಭ್ಯರ್ಥಿ ನಿಯಮ 72 (ಡಿ) (5)ರ ಪ್ರಕಾರ ಮೇಯರ್ ಸ್ಥಾನಕ್ಕೆ ಚುನಾಯಿತ ಆಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಸಮಾನ ಮತಗಳು ಬಂದಲ್ಲಿ ನಿಯಮ 72 (ಡಿ) (6)ರ ಪ್ರಕಾರ ಚೀಟಿ ಎತ್ತುವ ಮೂಲಕ ಮೇಯರ್ ಆಯ್ಕೆ ಮಾಡಲಾಗುತ್ತದೆ.
4.ಉಪಮೇಯರ್ ಚುನಾವಣೆ
ಮೇಯರ್ ಚುನಾವಣೆ ನಂತರ ಉಪಮೇಯರ್ ಚುನಾವಣೆ ನಡೆಸಲಾಗುತ್ತದೆ. ಮೇಯರ್ ಆಯ್ಕೆಗೆ ಇರುವ ನಿಯಮಾವಳಿ ಉಪಮೇಯರ್ ಆಯ್ಕೆಗೂ ಅನ್ವಯವಾಗಲಿದೆ.
5. ಸ್ಥಾಯಿ ಸಮಿತಿಗಳಿಗೆ ಆಯ್ಕೆ
ಮೇಯರ್–ಉಪಮೇಯರ್ ಆಯ್ಕೆ ಬಳಿಕ ಹನ್ನೆರಡು ಸ್ಥಾಯಿ ಸಮಿತಿಗಳ ತಲಾ 11 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತದೆ. ಬ್ಯಾಲೆಟ್ ಮತದಾನದ ಮೂಲಕ ಈ ಆಯ್ಕೆ ನಡೆಸಬೇಕು ಎನ್ನುತ್ತದೆ ಕೆಎಂಸಿ ಕಾಯ್ದೆ 11 (1ಎ) ಮತ್ತು (2) ನಿಯಮ. ಒಂದೊಂದು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೂ 2–3 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದರೆ, ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆಸುವುದು ಇದುವರೆಗಿನ ರೂಢಿ. ಈ ಸಲ ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಕ್ಕೂ ಪೈಪೋಟಿ ಏರ್ಪಟ್ಟರೆ ಚುನಾವಣೆ ಪ್ರಕ್ರಿಯೆ 2–3 ದಿನ ನಡೆಯುವ ಸಂಭವವಿದೆ ಎಂದು ಹೇಳುತ್ತಾರೆ.
6. ಸಕಲ ಸಿದ್ಧತೆ
ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣಾವರೆಗೆ ಎಲ್ಲ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ. ಪಾಲಿಕೇತರ ಸದಸ್ಯರನ್ನು ಒಳಗೊಂಡಂತೆ ಒಟ್ಟಾರೆ 260 ಪ್ರತಿನಿಧಿಗಳು ಮತಾಧಿಕಾರ ಹೊಂದಿದ್ದಾರೆ. ಎಲ್ಲ ಸದಸ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಆಸನದ ಮೇಜಿನ ಮೇಲೆ ಕ್ರಮಸಂಖ್ಯೆಗೆ ಅನುಗುಣವಾಗಿ ಹೆಸರಿನ ಫಲಕ ಇಡಲಾಗಿದೆ. ಪ್ರತಿಯೊಬ್ಬ ಸದಸ್ಯರಿಗೂ ಸಭೆ ನೋಟಿಸ್ ಹಾಗೂ ಪಾಸ್ಗಳನ್ನು ಕಳುಹಿಸಿಕೊಡಲಾಗಿದೆ.