ಕರ್ನಾಟಕ

ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿ ಮೊಬೈಲನ್ನು ಏನು ಮಾಡಿದ ಗೊತ್ತಾ ?

Pinterest LinkedIn Tumblr

gokul

ಬೆಂಗಳೂರು: ಬಾಂಬ್ ಸ್ಫೋಟಿಸುವುದಾಗಿ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಗೋಕುಲ್, ನಂತರ ಆ ಮೊಬೈಲನ್ನು ಗೆಳತಿಯ ಪತಿಗೆ ಸೇರಿದ ಕಾರಿನಲ್ಲಿಟ್ಟು ಸುಲಭವಾಗಿ ಪೊಲೀಸ್ ಖೆಡ್ಡಾಕ್ಕೆ ಬಿದ್ದ. ‘ಗೆಳತಿಯನ್ನು ಒಲಿಸಿಕೊಳ್ಳಲು ಆಕೆಯ ಪತಿಯನ್ನು ಜೈಲಿಗೆ ಕಳುಹಿಸಲು ನಿರ್ಧರಿಸಿದ್ದ ಆರೋಪಿ, ಅವರ ಮತದಾರರ ಗುರುತಿನ ಚೀಟಿಯಿಂದಲೇ ಮೊಬೈಲ್‌ ಸಿಮ್‌ ಖರೀದಿಸಿದ್ದ. ನಂತರ ಅದರಿಂದ ಬೆದರಿಕೆ ಸಂದೇಶ ಕಳುಹಿಸಿ, ಅವರ ಕಾರಿನ ಸೀಟಿನಡಿ ಮೊಬೈಲ್‌ ಎಸೆದಿದ್ದ’ ಎಂದು ಸಿಸಿಬಿ ಅಧಿಕಾರಿಗಳು ಹೇಳಿದರು.

‘ಸಂದೇಶ ಬಂದಿದ್ದ ಸಂಖ್ಯೆ ಆಧರಿಸಿ ಕೆಐಎಎಲ್ ಪೊಲೀಸರು ತನಿಖೆ ಆರಂಭಿಸಿದ್ದರು. ಮರುದಿನ ಬೆಳಿಗ್ಗೆ ಗೋಕುಲ್‌ನ ಗೆಳತಿಯ ಪತಿ, ಕಾರು ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದರು. ಮೊಬೈಲ್ ಕಾರಿನಲ್ಲೇ ಇದ್ದುದರಿಂದ ಕರೆಗಳ ವಿವರ ಆಧರಿಸಿ ಮೊದಲು ಗೆಳತಿಯ ಪತಿಯನ್ನೇ ವಶಕ್ಕೆ ಪಡೆಯಲಾಗಿತ್ತು.

‘ಅವರನ್ನು ವಿಚಾರಣೆ ನಡೆಸಿದಾಗ ಆ ಸಂಖ್ಯೆಯ ಸಿಮ್‌ ಎಂದೂ ಬಳಸಿಲ್ಲಎಂದರು. ಮನೆಗೆ ಕರೆದೊಯ್ದಾಗ ಅವರ ಪತ್ನಿ ಕೂಡ ತನಗೆ ಗೊತ್ತಿಲ್ಲವೆಂದರು. ಅನುಮಾನದಿಂದ ಇಡೀ ಕಾರನ್ನು ತಪಾಸಣೆ ನಡೆಸಿದಾಗ ಸೀಟಿನ ಕೆಳಗೆ ಮೊಬೈಲ್ ಪತ್ತೆಯಾಯಿತು.

‘ಕಾರಿನಲ್ಲಿ ಮೊಬೈಲ್ ಕಂಡು ದಂಪತಿ ಕಕ್ಕಾಬಿಕ್ಕಿಯಾದರು. ಇತ್ತೀಚೆಗೆ ಯಾರಾದರೂ ತಮ್ಮ ಕಾರಿನಲ್ಲಿ ಪ್ರಯಾಣಿಸಿದ್ದರೇ ಎಂದು ಕೇಳಿದಾಗ ಅವರು ಗೋಕುಲ್ ಸೇರಿದಂತೆ ಕೆಲ ಸಂಬಂಧಿಕರ ಹೆಸರು ಹೇಳಿದರು. ಪಕ್ಕದ ಫ್ಲ್ಯಾಟ್‌ನಲ್ಲೇ ನೆಲೆಸಿದ್ದ ಗೋಕುಲ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶವನ್ನು ಬಾಯ್ಬಿಟ್ಟ’ ಎಂದು ಮಾಹಿತಿ ನೀಡಿದರು.

ಪತ್ನಿಯ ಮೊಬೈಲ್ ಇಲ್ಲ: ‘ಜುಲೈ 28ರಂದು ಪತ್ನಿ ಅನುರಾಧ ಅವರನ್ನು ಕೊಲೆ ಮಾಡಿದ ಗೋಕುಲ್, ನಂತರ ತನ್ನನ್ನು ಮದುವೆ ಆಗುವಂತೆ ಪತ್ನಿಯ ಮೊಬೈಲ್‌ನಿಂದಲೇ ದೆಹಲಿಯಲ್ಲಿರುವ ಕೆಲ ಗೆಳೆಯರಿಗೆ ಸಂದೇಶ ಕಳುಹಿಸಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.‘ಈ ಮೂಲಕ ಪತ್ನಿ ತನ್ನನ್ನು ತೊರೆದು ಬೇರೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು ಎನ್ನುವಂತೆ ಬಿಂಬಿಸಲು ಯತ್ನಿಸಿದ್ದ. ಪತ್ನಿಯ ಮೊಬೈಲ್ ಮಾರಿದೆ ಎಂದು ಒಮ್ಮೆ ಹೇಳುವ ಆತ, ಮತ್ತೊಮ್ಮೆ ಅದನ್ನು ಮೋರಿಗೆ ಬಿಸಾಡಿದೆ ಎನ್ನುತ್ತಾನೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

Write A Comment