ಗಲ್ಫ್

ರಾಜತಾಂತ್ರಿಕ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ: ದಾಳಿಯ ವಿರುದ್ಧದ ಪೊಲೀಸರ ಕ್ರಮಕ್ಕೆ ಸೌದಿ ಪ್ರತಿಭಟನೆ

Pinterest LinkedIn Tumblr

rape

ನವದೆಹಲಿ: ನೇಪಾಳದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ರಾಜತಾಂತ್ರಿಕ ಅಧಿಕಾರಿಯನ್ನು ವಾಪಸ್‌ ಕರೆಸುವಂತೆ ಸೌದಿ ಅರೇಬಿಯಾಕ್ಕೆ ಭಾರತ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿ ನೆಲೆಸಿರುವ ಗುಡಗಾಂವ್‌ನಲ್ಲಿರುವ ಮನೆಯ ಮೇಲೆ ಪೊಲೀಸರು ನಡೆಸಿರುವ ದಾಳಿಯ ವಿರುದ್ಧ ಸೌದಿ ಅರೇಬಿಯಾ ಪ್ರತಿಭಟನೆ ದಾಖಲಿಸಿದೆ.

ರಾಜತಾಂತ್ರಿಕ ಅಧಿಕಾರಿಯ ವಿರುದ್ಧದ ಅರೋಪ ಸುಳ್ಳು ಎಂದು ವಾದಿಸಿರುವ ನವದೆಹಲಿಯಲ್ಲಿರುವ ಸೌದಿ ರಾಯಭಾರ ಕಚೇರಿ, ಮಹಿಳೆಯರನ್ನು ರಕ್ಷಿಸುವುದಕ್ಕಾಗಿ ಅಧಿಕಾರಿಯ ಫ್ಲ್ಯಾಟ್‌ಗೆ ಪೊಲೀಸರು ನುಗ್ಗಿದ್ದಾರೆ. ಇದು ರಾಜತಾಂತ್ರಿಕ ನಿಯಮಗಳ ಉಲ್ಲಂಘನೆ ಎಂದು ಹೇಳಿದೆ.

ಸೌದಿ ಅರೇಬಿಯಾ ರಾಯಭಾರ ಕಚೇರಿಯಲ್ಲಿ ಕಾರ್ಯದರ್ಶಿ (ಪ್ರಥಮ) ಹುದ್ದೆಯಲ್ಲಿರುವ ರಾಜತಾಂತ್ರಿಕ ಅಧಿಕಾರಿಗೆ ವಿಯೆನ್ನಾ ಕರಾರಿನ 31ನೇ ವಿಧಿ ಅನ್ವಯ ಭಾರತದಲ್ಲಿ ಅಪರಾಧ ತನಿಖೆ ಅಥವಾ ಬಂಧನದಿಂದ ವಿನಾಯಿತಿ ಇದೆ. ಅವರ ರಾಜತಾಂತ್ರಿಕ ರಕ್ಷಣೆಯನ್ನು ಸೌದಿ ಹಿಂದಕ್ಕೆ ಪಡೆಯುವ ಸಂಭವ ಇಲ್ಲ.

ವರ್ಷದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ಪ್ರಸ್ತಾವ ಇದೆ. ಹಾಗಾಗಿ ಎರಡು ದೇಶಗಳ ನಡುವಣ ಸಂಬಂಧದಲ್ಲಿ ಬಿರುಕು ಉಂಟಾಗುವುದನ್ನು ತಡೆಯಲು ಅಧಿಕಾರಿಯನ್ನು ಸೌದಿ ವಾಪಸ್‌ ಕರೆಸಿಕೊಳ್ಳುವುದೇ ಏಕೈಕ ದಾರಿ ಎಂದು ಮೂಲಗಳು ತಿಳಿಸಿವೆ.

ಸೌದಿ ಅರೇಬಿಯಾ ರಾಜತಾಂತ್ರಿಕ ಅಧಿಕಾರಿಯ ನಿವಾಸದಿಂದ ಇಬ್ಬರು ನೇಪಾಳಿ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಇಬ್ಬರು ಡಿಎಲ್‌ಎಫ್‌ ಮೂರನೇ ಹಂತ ಪೊಲೀಸ್‌ ಠಾಣೆಯಲ್ಲಿ ಸೌದಿ ಅಧಿಕಾರಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ವರದಿ ಸಲ್ಲಿಕೆ (ಪಿಟಿಐ): ನೇಪಾಳ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ವಿಸ್ತೃತ ವರದಿಯನ್ನು ಗುಡಗಾಂವ್‌ ಪೊಲೀಸರು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಬುಧವಾರ ಸಲ್ಲಿಸಿದ್ದಾರೆ.

ಇಬ್ಬರು ಮಹಿಳೆಯರ ವೈದ್ಯಕೀಯ ತಪಾಸಣೆ ನಡೆಸಿದ ನಂತರ ವರದಿಯನ್ನು ಸಚಿವಾಲಯಕ್ಕೆ ಇ–ಮೇಲ್‌ ಮಾಡಲಾಗಿದೆ. ರಾಜತಾಂತ್ರಿಕ ಅಧಿಕಾರಿ ಮನೆ ಯಿಂದ ರಕ್ಷಿಸಲಾದ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವುದನ್ನು ಗುಡ ಗಾಂವ್‌ ಎಸಿಪಿ ರಾಜೇಶ್‌ ಚೇಚಿ ದೃಢಪಡಿಸಿದ್ದಾರೆ.

ಒಂದು ಲಕ್ಷಕ್ಕೆ ಮಾರಿದರು: ಮಹಿಳೆ ಯರನ್ನು ರಕ್ಷಣೆ ಮಾಡಿದ ಗುಡಗಾಂವ್ ಪೊಲೀಸರ ಜತೆ ಕೈಜೋಡಿಸಿದ ಎನ್‌ಜಿಒದ ಸದಸ್ಯರು ಈ ಇಬ್ಬರನ್ನು ಮಾರಾಟ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ‘ಈ ಅತ್ಯಾಚಾರ ಸಂತ್ರಸ್ತೆಯರನ್ನು ಭಾರತದ ಏಜೆಂಟ್‌ ಒಬ್ಬ ಒಂದು ಲಕ್ಷಕ್ಕೆ ಮಾರಾಟ ಮಾಡಿದ್ದಾನೆ’ ಎಂದಿದ್ದಾರೆ.

‘ನೇಪಾಳದಲ್ಲಿ ಭೂಕಂಪ ಸಂಭವಿಸಿದ ನಂತರ ತಾಯಿ ಮಗಳನ್ನು ಭಾರತಕ್ಕೆ ಕರೆತರಲಾಗಿದೆ. ಇಬ್ಬರೂ ಕಷ್ಟದಲ್ಲಿದ್ದರು. ಅವರಿಗೆ ₹30 ಸಾವಿರ ವೇತನ, ಒಳ್ಳೆಯ ಆಹಾರ ನೀಡುವುದಾಗಿ ಕಲ್ಪನ ಎಂಬ ಹೆಸರಿನ ಏಜೆಂಟ್‌ ಒಬ್ಬ ಭರವಸೆ ನೀಡಿದ್ದ’ ಎಂದು ವಿವರಿಸಿದ್ದಾರೆ.

‘ಕಲ್ಪನ ಇವರನ್ನು ಮತ್ತೊಬ್ಬ ಏಜೆಂಟ್‌ ಅನ್ವರ್‌ಗೆ ತಲಾ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಇಬ್ಬರನ್ನು ಜಿದ್ದಾಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅವರು ಭಾರತಕ್ಕೆ ಬಂದ ನಂತರ ದೌರ್ಜನ್ಯ ಮುಂದುವರಿಯಿತು’ ಎಂದು ಎನ್‌ಜಿಒ ಸದಸ್ಯೆ ಹೇಳಿದ್ದಾರೆ.

ಚಾಕು ತೋರಿಸಿ ಬೆದರಿಕೆ

ನವದೆಹಲಿ: ‘ನಮ್ಮನ್ನು ಬೀಗ ಹಾಕಿದ ಕೊಠಡಿಯಲ್ಲಿ ಕೂಡಿಹಾಕಿದ್ದರು. ಯಾವುದೇ ಶಬ್ದ ಮಾಡದಂತೆ ನಿರ್ಬಂಧ ವಿಧಿಸಿದ್ದರು. ಚಾಕು ತೋರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ್ದರು’ ಎಂದು ಸೌದಿ ರಾಜತಾಂತ್ರಿಕ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ ಹೊರಿ ಸಿರುವ ತಾಯಿ ಮತ್ತು ಮಗಳು ಬುಧವಾರ ತಮ್ಮ ಮೇಲಿನ ದೌರ್ಜನ್ಯ ಕುರಿತು ವಿವರ ನೀಡಿದ್ದಾರೆ.

‘ಗುಡಗಾಂವ್‌ನ ಬಂಗಲೆಯಲ್ಲಿ ರಾಜತಾಂತ್ರಿಕ ಅಧಿಕಾರಿ ಮತ್ತು ಅವರ ಅತಿಥಿಗಳು ಅತ್ಯಾಚಾರ ನಡೆಸಿದರು. ಉತ್ತಮ ಭವಿಷ್ಯದ ಆಮಿಷ ತೋರಿ ನಮ್ಮನ್ನು ಭಾರತಕ್ಕೆ ಕರೆತರಲಾಯಿತು. 4 ತಿಂಗಳಿಂದ ಸಂಬಳ ನೀಡದೆ ವಂಚಿಸಿದರು’ ಎಂದು ಆರೋಪಿಸಿದ್ದಾರೆ. ‘ದೊಡ್ಡ ಮನೆಯ ಒಳ್ಳೆಯ ಮನುಷ್ಯ ಎಂಬುದಾಗಿ ನಂಬಿಸಲಾಗಿತ್ತು. ಆದರೆ ಆತ ಯಾವ ರೀತಿಯಲ್ಲಿ ಒಳ್ಳೆಯವನು ಎಂಬುದು ತಿಳಿದಿಲ್ಲ. ಮನೆಕೆಲಸ ಮಾಡಲು ಕರೆತರಲಾಗಿತ್ತು. ಆದರೆ ಆತ ನಮ್ಮ ಮೇಲೆ ದೌರ್ಜನ್ಯ ನಡೆಸಿದ’ ಎಂದು ಮಹಿಳೆ ದೂರಿದ್ದಾರೆ.

Write A Comment