ಬೆಂಗಳೂರು: ‘ವಿದ್ಯುತ್ ಅಭಾವ ತೀವ್ರವಾಗಿರುವ ಕಾರಣ ಉಳಿತಾಯದ ಕಡೆ ಗಮನಹರಿಸಲಾಗಿದೆ. ಬೀದಿ ದೀಪಗಳನ್ನು ತಡವಾಗಿ ಆನ್ ಮಾಡುವ ಮತ್ತು ಬೆಳಗಿನ ಜಾವ ಬೇಗನೇ ಆರಿಸುವ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬುಧವಾರ ಪ್ರಕಟಿಸಿದರು.
‘ಕೆಲವು ನಗರಗಳಲ್ಲಿ ಸಂಜೆ 6ಕ್ಕೇ ಬೀದಿ ದೀಪಗಳನ್ನು ಆನ್ ಮಾಡಲಾಗುತ್ತದೆ. ಇನ್ನು ಇದನ್ನು 7 ಗಂಟೆಗೆ ಆನ್ ಮಾಡಿಸಲಾಗುವುದು. ಬೆಳಿಗ್ಗೆ 6 ಗಂಟೆ ಬದಲು 5ಗಂಟೆಗೆ ಆರಿಸುವಂತೆ ಎಂಜಿನಿಯರ್ಗಳಿಗೆ ಸೂಚಿಸಲಾಗಿದೆ. ಎಲ್ಲ ಬೀದಿ ದೀಪಗಳು ಏಕ ಕಾಲಕ್ಕೆ ಬೆಳಗುವ ಬದಲು, ಒಂದು ಬಿಟ್ಟು ಒಂದನ್ನು ಆನ್ ಮಾಡುವುದರ ಮೂಲಕ ಬಳಕೆ ತಗ್ಗಿಸಲಾಗುವುದು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳೇ ವಿದ್ಯುತ್ ದೀಪಗಳ ನಿರ್ವಹಣೆಯನ್ನು ಮಾಡುತ್ತಿದ್ದರೂ ಆನ್– ಆಫ್ ಮಾಡುವುದರ ಮೇಲೆ ನಿಗಾ ಇಡಲು ನಮ್ಮ ಎಂಜಿನಿಯರ್ಗಳಿಗೆ ಮತ್ತು ಲೈನ್ಮೆನ್ಗಳಿಗೆ ಸೂಚಿಸಲಾಗುವುದು’ ಎಂದು ಹೇಳಿದರು. ‘ಮುಂದಿನ ವಾರ ಗಣೇಶ ಚತುರ್ಥಿ ಹಬ್ಬ ಇದ್ದು, ಈ ಸಂದರ್ಭದಲ್ಲಿ ಎಲ್ಲೆಡೆ ಗಣೇಶನನ್ನು ಕೂರಿಸಲಾಗುತ್ತದೆ. ಇದಕ್ಕೆ ನೇರವಾಗಿ ವಿದ್ಯುತ್ ಮಾರ್ಗದಿಂದಲೇ ಅಕ್ರಮವಾಗಿ ತೆಗೆದುಕೊಳ್ಳುವ ಸಂಪ್ರದಾಯ ಮೊದಲಿನಿಂದಲೂ ನಡೆದುಬಂದಿದೆ.
ಆದರೆ, ಈ ಬಾರಿ ಮಾತ್ರ ಅದಕ್ಕೆ ಅವಕಾಶ ನೀಡುವುದಿಲ್ಲ. ವಿದ್ಯುತ್ನ ತೀವ್ರ ಸಮಸ್ಯೆ ಇರುವ ಕಾರಣ ಇದಕ್ಕೆ ಕಡಿವಾಣ ಹಾಕಲಾಗುವುದು. ಇಂತಹ ಕಾರ್ಯಕ್ರಮಗಳಿಗೆ ಬೇಕಿದ್ದರೆ ಜನರೇಟರ್ಗಳನ್ನು ಬಳಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು. ‘ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ 2ರಷ್ಟು ವಿದ್ಯುತ್ ಬೀದಿ ದೀಪಗಳ ಸಲುವಾಗಿಯೇ ಬಳಕೆ ಆಗುತ್ತಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೊಸ ಯೋಜನೆ: ವಿವಿಧ ರೀತಿಯ ಸುಧಾರಣಾ ಕ್ರಮಗಳ ಮೂಲಕ ಕನಿಷ್ಠ 800 ಮೆಗಾವಾಟ್ ವಿದ್ಯುತ್ ಉಳಿಸುವ ಚಿಂತನೆ ಇದೆ. ಈ ಸಂಬಂಧ ಸದ್ಯದಲ್ಲೇ ಯೋಜನೆ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. ಡಿಸೆಂಬರ್ ವೇಳೆಗೆ ಸಹಜ: ‘ವಿವಿಧ ಮೂಲಗಳಿಂದ ವಿದ್ಯುತ್ ಖರೀದಿಸುವ ಪ್ರಯತ್ನ ನಡೆದಿದ್ದು, ಡಿಸೆಂಬರ್ ವೇಳೆಗೆ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೇಕೆದಾಟು ಜಲವಿದ್ಯುತ್ ಯೋಜನೆಗೆ ಮನವಿ
‘ಮೇಕೆದಾಟು ಮತ್ತು ಶಿವನಸಮುದ್ರ ಸಮೀಪ ಕಾವೇರಿ ನದಿಯಲ್ಲಿ ಹರಿದು ಹೋಗುವ ನೀರಿನಿಂದ 600 ಮೆಗಾವಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಯೋಜನೆಗೆ ತಮಿಳುನಾಡಿನ ನಿರಾಕ್ಷೇಪಣಾ ಪತ್ರ ಬೇಕೆನ್ನುವ ಷರತ್ತಿಗೆ ವಿನಾಯಿತಿ ನೀಡಬೇಕೆಂದು ಕೇಂದ್ರ ಜಲ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಸಚಿವರು ವಿವರಿಸಿದರು. ‘ನಾವೂ ಎಲ್ಲಿಯೂ ನೀರನ್ನು ತಡೆದು ನಿಲ್ಲಿಸುವುದಿಲ್ಲ. ಹರಿಯುವ ನೀರಿನಲ್ಲೇ ವಿದ್ಯುತ್ ಉತ್ಪಾದನೆ ಮಾಡುವುದರಿಂದ ಇದಕ್ಕೆ ತಮಿಳುನಾಡಿನ ಒಪ್ಪಿಗೆ ಬೇಕೆನ್ನುವ ಷರತ್ತು ಸರಿಯಲ್ಲ’ ಎಂದರು.
