ಬೆಂಗಳೂರು, ಸೆ.9: ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಆರ್. ಅಶೋಕ್ ವಿರುದ್ಧ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಇತ್ತೀಚೆಗೆ ಏಕವಚನ ಬಳಸಿ ಟೀಕಿಸಿರುವುದಕ್ಕೆ ಬಿಜೆಪಿ ಮುಖಂಡರು ಇಂದು ಸೋಮಶೇಖರ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬಿಜೆಪಿ ಮುಖಂಡರಾದ ಜಗ್ಗೇಶ್, ತೇಜಸ್ವಿನಿ ರಮೇಶ್, ಎನ್.ಆರ್. ರಮೇಶ್, ಅಶ್ವಥ್ ನಾರಾಯಣ್, ವಿಜಯಕುಮಾರ್ ಸಹಿತ ಹಲವು ಮುಖಂಡರು ಸೋಮಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಿಬಿಎಂಪಿ ಅಧಿಕಾರ ಚುಕ್ಕಾಣಿ ಹಿಡಿಯಲು ವಾಮಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದ ಮೌರ್ಯ ವೃತ್ತದ ಬಳಿ ಬಿಜೆಪಿ ಏರ್ಪಡಿಸಿದ್ದ ಪ್ರತಿಭಟನೆಯನ್ನುದ್ದೇಶಿಸಿ ಜಗ್ಗೇಶ್ ಮಾತನಾಡಿ, ಸೋಮಶೇಖರ್ ಅವರ ಯೋಗ್ಯತೆ ಏನೆಂಬುದು ರಾಜ್ಯದ ಜನರಿಗೆ ಗೊತ್ತಿದೆ. ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಮುಸರೆ ತಿಕ್ಕುತ್ತಿದ್ದ ಸೋಮಶೇಖರ್ ಕಾಂಗ್ರೆಸ್ ಪಕ್ಷದ ಜೂನಿಯರ್ ಆರ್ಟಿಸ್ಟ್ ಇದ್ದಂತೆ. ಒಮ್ಮೊಮ್ಮೆ ಮಾತನಾಡಲು ಅವಕಾಶ ಸಿಕ್ಕಿದರೆ ಈ ರೀತಿ ಬಡ ಬಡಾಯಿಸುತ್ತಾರೆ ಎಂದು ಟೀಕಿಸಿದರು.
ಜಗ್ಗೇಶ್ ಅವರು ಹಣ ಪಡೆದು ಬಿಜೆಪಿಗೆ ಹೋಗಿದ್ದಾರೆ ಎಂದು ಸೋಮಶೇಖರ್ ಆರೋಪಿಸಿದ್ದಾರೆ. ಇದುವರೆಗಿನ ನನ್ನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಬೇಕಾದರೆ ತಪಾಸಣೆ ನಡೆಸಲಿ. ನಾನು ನನ್ನಷ್ಟಕ್ಕೆ ಚಿತ್ರದಲ್ಲಿ ನಟಿಸುತ್ತಾ ಆರಾಮಾ ಆಗಿದ್ದೆ. ಆದರೆ ಡಿ.ಕೆ. ಶಿವಕುಮಾರ್, ಎಸ್.ಎಂ. ಕೃಷ್ಣ ನನ್ನನ್ನು ರಾಜಕೀಯಕ್ಕೆ ತಂದು ಬಳಿಕ ಹಿಂದಿನಿಂದ ಚೂರಿ ಹಾಕಿದರು. ಸುಮ್ಮನೆ ಇದ್ದ ನನ್ನನ್ನು ಕೆಣಕಿದರು. ಈಗಲೂ ನಾನು ವರ್ಷಕ್ಕೆ ಒಂದು ಸಿನಿಮಾ ಮಾಡಿ ಸೋಮಶೇಖರ್ ಅವರ ಕುಟುಂಬವನ್ನು ನೋಡಿಕೊಳ್ಳಲು ಸಮರ್ಥನಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಎಲ್ಲಿಂದ ಬಂದವರು. ಮಹದೇವಪ್ಪ, ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ನಾಯಕರು ಬೇರೆ ಪಕ್ಷದಿಂದ ವಲಸೆ ಬಂದವರಾಗಿದ್ದಾರೆ. ಇದೀಗ ಜೆಡಿಎಸ್ ಪಕ್ಷ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡು ಡಿ.ಕೆ. ಶಿವಕುಮಾರ್ ಅವರನ್ನು ಮುಗಿಸಲು ತಂತ್ರ ಹೂಡಿವೆ. ನನ್ನ ಆತ್ಮೀಯ ಸ್ನೇಹಿತರಾಗಿರುವ ಡಿ.ಕೆ. ಶಿವಕುಮಾರ್ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ನವರು ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮನೆಗೆ ಕಲ್ಲೆಸೆಯಬಾರದು. ಅಶೋಕ್ ಏನೆಂಬುದು ರಾಜ್ಯದ ಜನತೆಗೆ ಗೊತ್ತಿಗೆ. 6 ಬಾರಿ ಶಾಸಕರಾಗಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಬಿಬಿಎಂಪಿಯಲ್ಲಿ 100 ಸ್ಥಾನಗಳನ್ನು ಗಳಿಸಿದ್ದಾರೆ. ಅವರು ನಮ್ಮ ಪಕ್ಷದ ಸಾಮ್ರಾಟ ಹೌದು ಎಂದು ತಿರುಗೇಟು ನೀಡಿದರು.
ತೇಜಸ್ವಿನಿ ರಮೇಶ್ ಮಾತನಾಡಿ, ಅಶೋಕ್ ಒಂದು ದಿನದಲ್ಲೇ ನಾಯಕರಾದವರಲ್ಲ. ಹಲವು ವರ್ಷಗಳ ಹೋರಾಟದ ಪರಿಶ್ರಮದಿಂದ ಇಂದು ರಾಜ್ಯದ ಪ್ರಮುಖ ನಾಯಕರಾಗಿದ್ದಾರೆಂದು ಹೇಳಿದರು.
ಎನ್.ಆರ್. ರಮೇಶ್ ಮಾತನಾಡಿ, ಸೋಮಶೇಖರ್ ಅವರಿಗೆ ಬಿಜೆಪಿ ಮುಖಂಡರ ವಿರುದ್ಧ ಮಾತನಾಡುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.