ಕರ್ನಾಟಕ

ಬಿಬಿಎಂಪಿ: ಆಪರೇಷನ್ ಕಮಲದ ಭೀತಿ: ಮಡಿಕೇರಿ ರೆಸಾರ್ಟ್‌ಗಳಲ್ಲಿ ಕಾಂಗ್ರೆಸ್ ಸದಸ್ಯರು

Pinterest LinkedIn Tumblr

congressಮಡಿಕೇರಿ, ಸೆ.8: ಆಪರೇಷನ್ ಕಮಲದ ಭೀತಿಯನ್ನು ಎದುರಿಸುತ್ತಿರುವ ಕಾಂಗ್ರೆಸ್ ತನ್ನ ಬಿಬಿಎಂಪಿ ಸದಸ್ಯರಿಗೆ ಮಡಿಕೇರಿಯ ರೆಸಾರ್ಟ್‌ಗಳಲ್ಲಿ ತಂಗಲು ವ್ಯವಸ್ಥೆ ಮಾಡಿದೆ. ಬಿಜೆಪಿಯ ಆಮಿಷಕ್ಕೆ ಒಬ್ಬ ಸದಸ್ಯನೂ ಬಲಿಯಾಗಬಾರದೆನ್ನುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಎಲ್ಲ 76 ಸದಸ್ಯರನ್ನು ಮಡಿಕೇರಿ ಸಮೀಪದ ಗಾಳಿಬೀಡಿನ ಕ್ಲಬ್ ಮಹೇಂದ್ರ ಹಾಗೂ ತಾಜ್ ರೆಸಾರ್ಟ್‌ಗಳಲ್ಲಿರಿಸಿದೆ. ಶಾಸಕ ಸೋಮಶೇಖರ್ ನೇತೃತ್ವದಲ್ಲಿ ಮಂಗಳವಾರ ನಸುಕಿನಲ್ಲಿ ಮೂರು ವೋಲ್ವೊ ಬಸ್‌ಗಳಲ್ಲಿ ಆಗಮಿಸಿದ ಸದಸ್ಯರು ರೆಸಾರ್ಟ್‌ಗಳಲ್ಲಿ ತಂಗಿದ್ದಾರೆ. 29 ಮಹಿಳಾ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ತಾಜ್ ರೆಸಾರ್ಟ್‌ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದ್ದು, ಪುರುಷ ಸದಸ್ಯರು ಕ್ಲಬ್ ಮಹೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಎರಡೂ ರೆಸಾರ್ಟ್ ಗಳಲ್ಲಿರುವ ಸದಸ್ಯರ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಶಾಸಕ ಸೋಮಶೇಖರ್, ಸೆ. 10ರಂದು ಮಧ್ಯಾಹ್ನ 3 ಗಂಟೆಗೆ ಸರ್ವ ಸದಸ್ಯರೂ ಬೆಂಗಳೂರಿಗೆ ಮರಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.11ರಂದು ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆ. 10ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ನ 76, ಜೆಡಿಎಸ್‌ನ 14 ಹಾಗೂ ಪಕ್ಷೇತರ 4 ಸದಸ್ಯರ ಸಭೆಯನ್ನು ಮುಖಂಡರು ನಡೆಸಲಿದ್ದಾರೆ ಎಂದರು. ಕಾಂಗ್ರೆಸ್ ಸದಸ್ಯರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಆದರೂ ಅಧಿಕಾರ ಹಾಗೂ ಹಣದ ಆಮಿಷಕ್ಕೆ ಒಳಗಾಗಬಾರದು, ಮಾನಸಿಕ ಒತ್ತಡಕ್ಕೆ ಸಿಲುಕಬಾರದು ಮತ್ತು ಆಪರೇಷನ್ ಕಮಲ ನಡೆಯಬಾರದು ಎನ್ನುವ ಕಾರಣಕ್ಕೆ ಅವರನ್ನೆಲ್ಲಾ ಮಡಿಕೇರಿ ರೆಸಾರ್ಟ್‌ಗೆ ಕರೆತರಲಾಗಿದೆ. ಸಚಿವ ರಾಮಲಿಂಗಾರೆಡ್ಡಿರ ಸೂಚನೆಗಳಂತೆ ಸದಸ್ಯರಿಗೆ ಕೊಡಗಿನ ಪ್ರವಾಸಿತಾಣಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಇಲ್ಲಿ ಕೂಡಾ ಸರ್ವ ಸದಸ್ಯರ ಸಭೆಯನ್ನು ನಡೆಸಲಾಗುತ್ತಿದೆ ಎಂದು ಶಾಸಕ ಸೋಮಶೇಖರ್ ತಿಳಿಸಿದರು. ಮೇಯರ್ ಹಾಗೂ ಉಪಮೇಯರ್ ಅಭ್ಯರ್ಥಿಗಳ ಆಯ್ಕೆ ಕುರಿತು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಹಾಗೂ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿದ್ದಾರೆ. ಮತದಾನದ ಹಕ್ಕಿನ ಕುರಿತು ಬಿಜೆಪಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಸೋಮಶೇಖರ್, ನ್ಯಾಯಾಲಯ ನೀಡುವ ಆದೇಶವನ್ನು ಗೌರವಿಸುವುದಾಗಿ ಸ್ಪಷ್ಟಪಡಿಸಿದರು. ಬಿಬಿಎಂಪಿ ಸದಸ್ಯರು ತಂಗಿರುವ ಎರಡೂ ರೆಸಾರ್ಟ್‌ಗಳಲ್ಲಿ ಪತ್ರಕರ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.

Write A Comment