ಮುಂಬೈ

ರಾಕೇಶ್ ಮಾರಿಯಾಗೆ ದಿಢೀರ್ ವರ್ಗ: ಶೀನಾ ಬೋರಾ ತನಿಖೆಯಲ್ಲಿ ದಿನಕ್ಕೊಂದು ತಿರುವು!

Pinterest LinkedIn Tumblr

Rakeshಮುಂಬೈ, ಸೆ.8: ಭಾರೀ ಕುತೂಹಲ ಕೆರಳಿಸಿರುವ ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆಯನ್ನು ಸ್ವತಃ ನಿಭಾಯಿಸುತ್ತಿದ್ದ ಮುಂಬೈ ಪೊಲೀಸ್ ಕಮಿಶನರ್ ರಾಕೇಶ್ ಮಾರಿಯಾ ಅವರಿಗೆ ಮಹಾರಾಷ್ಟ್ರ ಗೃಹರಕ್ಷಕ ದಳದ ಮಹಾ ನಿರ್ದೇಶಕ ಹಾಗೂ ನಾಗರಿಕ ರಕ್ಷಣೆ ಮಹಾನಿರ್ದೇಶಕರಾಗಿ ಭಡ್ತಿ ನೀಡಲಾಗಿದೆ.
ನೂತನ ಪೊಲೀಸ್ ಕಮಿಶನರ್ ಆಗಿ ಅಹ್ಮದ್ ಜಾವೇದ್ ಅಧಿಕಾರ ಸ್ವೀಕರಿಸಿದ್ದಾರೆ.
ಮಾರಿಯಾ ಅಧಿಕಾರವನ್ನು ಮಂಗಳವಾರವೇ ನೂತನ ಕಮಿಶನರ್‌ಗೆ ಹಸ್ತಾಂತರಿಸಿದ್ದಾರೆ.
ಹಬ್ಬದ ಋತು ಆರಂಭಗೊಳ್ಳುವ ಮೊದಲೇ ಆದೇಶ ಹೊರಡಿಸಲು ಸರಕಾರ ಬಯಸಿತ್ತು ಎಂದು ಪ್ರತಿಪಾದಿಸುವ ಮೂಲಕ ಮಹಾರಾಷ್ಟ್ರದ ಗೃಹ ಕಾರ್ಯದರ್ಶಿ ಕೆ.ಪಿ. ಬಕ್ಷಿ, ಮಾರಿಯಾರ ಭಡ್ತಿಗೂ ಅವರು ತನಿಖೆ ನಡೆಸುತ್ತಿದ್ದ ನಿರ್ದಿಷ್ಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಾಗಿದೆ.
ಶೀನಾ ಬೋರಾ ಹತ್ಯೆಗೆ ಸಂಬಂಧಿಸಿ 58 ವರ್ಷದ ಮರಿಯ, ಮಾಜಿ ಮಾಧ್ಯಮ ಉದ್ಯಮಿ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಗಂಡ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರೈನನ್ನು ಸುದೀರ್ಘ ಅವಧಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇತ್ತೀಚೆಗೆ ಇಂದ್ರಾಣಿ ಗಂಡ ಹಾಗೂ ಸ್ಟಾರ್ ಟವಿ ಚಾನೆಲ್‌ಗಳ ಸಮೂಹದ ಮಾಜಿ ಭಾರತೀಯ ಮುಖ್ಯಸ್ಥ ಪೀಟರ್ ಮುಖರ್ಜಿಯನ್ನೂ ವಿಚಾರಣೆಗೆ ಗುರಿಪಡಿಸಿದ್ದರು. ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಪ್ರಧಾನ ಆರೋಪಿಯಾಗಿದ್ದಾಳೆ.
30 ವರ್ಷಗಳ ಸೇವೆಯನ್ನು ಪೂರೈಸಿದ ಓರ್ವ ಐಪಿಎಸ್ ಅಧಿಕಾರಿ ಡಿಜಿಪಿ ದರ್ಜೆಯ ಅಧಿಕಾರಿಯಾಗಿ ಭಡ್ತಿ ಹೊಂದುವ ಅರ್ಹತೆ ಹೊಂದುತ್ತಾರೆ. ಇರುವ ಖಾಲಿ ಹುದ್ದೆಗಳ ಆಧಾರದಲ್ಲಿ ಜ್ಯೇಷ್ಠತೆಯನ್ನು ಪರಿಗಣಿಸಿ ಅವರಿಗೆ ಭಡ್ತಿ ನೀಡಲಾಗುತ್ತದೆ. ರಾಕೇಶ್ ಮರಿಯ 2011ರಲ್ಲೇ ಡಿಜಿಪಿ ಹುದ್ದೆಗೆ ಅರ್ಹತೆ ಗಳಿಸಿದ್ದರು. ಅವರು 2016 ಡಿಸೆಂಬರ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ.
ಶೀನಾ ಬೋರಾರನ್ನು 2012 ಎಪ್ರಿಲ್ 12ರಂದು ಹತ್ಯೆ ಮಾಡಲಾಗಿತ್ತು. ಕಾರಿನಲ್ಲಿ ಆಕೆಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿತ್ತು ಎಂದು ಹೇಳಲಾಗಿದೆ. ಶೀನಾರ ತಾಯಿ ಇಂದ್ರಾಣಿ, ಆಕೆಯ ಮಾಜಿ ಗಂಡ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಮ್ ರೈ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ತನಿಖೆಯ ವೇಳೆ ಮರಿಯ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಇದು ಅತ್ಯಂತ ಅಪರೂಪದ ವಿದ್ಯಮಾನವಾಗಿದೆ. ಇದಕ್ಕೂ ಮೊದಲು ಕಮಿಶನರ್ ಆಗಿದ್ದ ಅವಧಿಯಲ್ಲಿ ಅವರು ಮಾಧ್ಯಮಗಳಿಗೆ ಒಂದೇ ಒಂದು ಸಂದರ್ಶನವನ್ನು ಕೊಟ್ಟಿರಲಿಲ್ಲ.
ಅದೂ ಅಲ್ಲದೆ, ತನ್ನ ಅತ್ಯಂತ ನಂಬಿಗಸ್ಥ ಪೊಲೀಸ್ ಅಧಿಕಾರಿಗಳಿಗೆ ತನಿಖೆಯ ಹೊಣೆಯನ್ನು ವಹಿಸಿದ್ದರು. 26/11ರ ತನಿಖೆಯಲ್ಲಿ ಪಾಲ್ಗೊಂಡಿದ್ದ ದತ್ತಾತ್ರೇಯ ಭರ್ಗುಡೆ, ದಿನೇಶ್ ಕದಮ್ ಮತ್ತು ಸಂಜಯ್ ಕದಮ್ ಮುಂತಾದ ಅಧಿಕಾರಿಗಳನ್ನು ಪ್ರಕರಣದ ತನಿಖೆಗೆ ನಿಯೋಜಿಸಲಾಗಿತ್ತು.
ಶೀನಾ ಬೋರಾ ಹತ್ಯೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ದಿನೇಶ್ ಕದಮ್‌ರನ್ನು ಪ್ರಕರಣದ ತನಿಖೆ ನಡೆಯುತ್ತಿರುವ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Write A Comment