ಬೆಂಗಳೂರು, ಆ.9: ಸಮಾಜದ ರೋಗಕ್ಕೆ ಚಿಕಿತ್ಸೆ ನೀಡಿ ಸಮಾಜ ಸುಧಾರಿಸಬೇಕಿದ್ದ ವೈದ್ಯರೇ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು, ಹಣದ ಆಸೆಗಾಗಿ ಭಾವೀ ವೈದ್ಯರಿಂದ ಹಣ ಪಡೆದು ತಮ್ಮ ವೃತ್ತಿಗೆ ಅಗೌರವ ತಂದ ಘಟನೆ ನಡೆದಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಪರೀಕ್ಷಾ ಅವ್ಯವಹಾರವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಅವ್ಯವಹಾರದ ಸೂತ್ರಧಾರಿ, ವೈದ್ಯ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ, ಇದರೊಂದಿಗೆ ಎಲ್ಲಾ ಆರೋಪಿಗಳು ಬಲೆಗೆ ಬಿದ್ದಂತಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.
`ಭಗೀರಥ` ಸೂತ್ರದಾರ
ರಾಜಸ್ಥಾನದ ಮೂಲದ ಭಗೀರಥ ಅವ್ಯವಹಾರದ ಸೂತ್ರಧಾರನಾಗಿದ್ದು, ಈತ ಬೆಂಗಳೂರಿನ ಮುತ್ಯಾಲನಗರ 12ನೇ ಮೈನ್, 12ನೇ ಎಫ್ ಕ್ರಾಸ್‍ನಲ್ಲಿ ವಾಸವಾಗಿದ್ದ. ಈತನನ್ನು ಅಡ್ಮಿಷನ್ ಸಿಂಗ್ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು. ಈತ ಯಾರಿಗೆ ಬೇಕಾದರೂ ಯಾವುದೇ ಕಾಲೇಜಿನಲ್ಲಿ ಪ್ರವೇಶ ದೊರಕಿಸಿಕೊಡುತ್ತಿದ್ದ. ಈತ ಈ ಹಿಂದೆ ಒಂದು ಕಾಲೇಜು ನಡೆಸುತ್ತಿದ್ದ, ಈಗ ಪಿಜಿ ನಡೆಸುತ್ತಿದ್ದಾನೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೌಲ್ಯಮಾಪನ ವಿಭಾಗದ ಮಾಜಿ ಅಸಿಸ್ಟೆಂಟ್ ರಿಜಿಸ್ಟ್ರಾರ್‍ಗಳಾದ ಉಲ್ಲಾಳ ಮುಖ್ಯ ರಸ್ತೆಯ ಜ್ಞಾನಜ್ಯೋತಿನಗರ ನಿವಾಸಿ ದೇವೇಂದ್ರ ಗೌಡ ಪಾಟೀಲ್ (43), ಬಾಗಲಕೋಟೆಯ ಪುಲಕೇಶಿ ಆರ್ಯುವೇದಿಕ್ ಮೆಡಿಕಲ್ ಕಾಲೇಜಿನ ಡಾ.ಶಂಕರಗೌಡ (38), ಮೌಲ್ಯಮಾಪನ ವಿಭಾಗದ ಹಿರಿಯ ಸಹಾಯಕ ಜಯಮಾದೇಗೌಡ (48) ಬಂಧಿತ ಆರೋಪಿಗಳು.
8 ತಿಂಗಳ ಹಿಂದೆಯೇ ಆರ್‍ಜಿಯುಎಚ್‍ಎಸ್‍ನ ಸಿಬ್ಬಂದಿಗಳಾದ ಧನಂಜಯ್ ಮತ್ತು ಮೈಸೂರು ಮೆಡಿಕಲ್ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ವಿ.ಶ್ರೀಧರ್ ಎಂಬವರನ್ನು ಬಂಧಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಜಯನಗರದಲ್ಲಿರುವ ಕರ್ನಾಟಕ ರಾಜ್ಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪಿ.ಜಿ.ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಡಾ. ರಾಜೇಶ್ ಶೆಣೈ, ಡಾ. ಎಂ.ಕೆ. ರಮೇಶ್, ಡಾ. ಕಿರಣ್ ಕುಮಾರ್ ಎಂಬವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಸಮಗ್ರವಾಗಿ ತನಿಖೆ ನಡೆಸಿ, ಅವ್ಯವಹಾರ ನಡೆದಿದೆ ಎಂದು ವರದಿ ನೀಡಿತ್ತು. ಅದರಂತೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಬಳಿಕ ಅದನ್ನು ಸಿಸಿಬಿಗೆ ವರ್ಗಾಯಿಸಲಾಯಿತು. ಸಿಸಿಬಿ ಅಧಿಕಾರಿಗಳು ಬಹಳ ಶ್ರಮಪಟ್ಟು ಈ ಪ್ರಕರಣವನ್ನು ಭೇದಿಸಿ, ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮನೆ, ಹೋಟೆಲ್‌ಗಳಲ್ಲಿ ಉತ್ತರ
ಪಿ.ಜಿಯಲ್ಲಿ ಒಟ್ಟು ನಾಲ್ಕು ಪುಸ್ತಕಗಳಿದ್ದು, ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆ ರಾಜೀವ್ ಗಾಂಧಿ ವಿವಿಯ ಕೋಡಿಂಗ್ ರೂಮ್‍ಗೆ ಬರುತ್ತದೆ. ಭಗೀರಥ ಆರ್‍ಜಿಯುಎಚ್‍ಎಸ್‍ನಿಂದ ಖಾಲಿ ಉತ್ತರ ಪತ್ರಿಕೆಗಳನ್ನು ಪರೀಕ್ಷೆಯ ಪೂರ್ವದಲ್ಲಿ ಪಡೆದಿರುತ್ತಾನೆ. ಒಂದು ಪತ್ರಿಕೆಗೆ 10 ಸಾವಿರ ರೂ.ಗಳಂತೆ ಆರೋಪಿ ಜಯಮಾದೇಗೌಡ ಮತ್ತು ದಿನಗೂಲಿ ನೌಕರರ ಸಹಾಯದಿಂದ ಪಡೆದುಕೊಳ್ಳುತ್ತಾನೆ. ಅವುಗಳನ್ನು ಹಣ ನೀಡಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಅವುಗಳನ್ನು ಮನೆ ಅಥವಾ ಹೋಟೆಲ್‍ಗಳಲ್ಲಿ ಕುಳಿತು ಬರೆದು ಮತ್ತೆ ಹಿಂದಿರುಗಿಸುತ್ತಾರೆ. ಅದನ್ನು ಕೋಡಿಂಗ್ ರೂಮ್‍ನಲ್ಲಿ ಹಳೆಯ ಉತ್ತರ ಪತ್ರಿಕೆಗೆ ತೆಗೆದು ಅಲ್ಲಿಗೆ ಈಗ ಬರೆದ ಉತ್ತರ ಪತ್ರಿಕೆಗಳನ್ನು ಇಡಲಾಗುತ್ತದೆ. ಉತ್ತರ ಪತ್ರಿಕೆಯ ಮುಖಪುಟವನ್ನು ಬದಲಿಸುವುದಿಲ್ಲ. ಈ ರೀತಿ ಅವ್ಯವಹಾರ ನಡೆಸಲಾಗುತ್ತಿತ್ತು ಎಂದು ಚಂದ್ರಶೇಖರ್ ವಿವರಿಸಿದರು.
1 ರಿಂದ ಎರಡೂವರೆ ಲಕ್ಷ
ಯು.ಜಿ.ಉತ್ತರ ಪತ್ರಿಕೆಗೆ ರೂ.1ರಿಂದ 2 ಲಕ್ಷ ಮತ್ತು ಪಿ.ಜಿಗೆ ತಲಾ ಒಂದು ಉತ್ತರ ಪತ್ರಿಕೆಗೆ 2.50 ಲಕ್ಷ ರೂ.ಗಳನ್ನು ಪಡೆಯಲಾಗುತ್ತಿತ್ತು. ಭಗೀರಥ್ ಸಿಂಗ್ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯಕ್ಕೆ ಡಾ. ರವೀಂದ್ರನಾಥ್ ಕುಲಪತಿಯಾಗಿ ಬಂದ ಬಳಿಕ ಪಾರದರ್ಶಕವಾಗಿ ಪರೀಕ್ಷೆ ನಡೆದಿದ್ದು, ಅಲ್ಲಿ ಯಾವುದೇ ಅವ್ಯವಹಾರ ನಡೆಸಲು ಸಾಧ್ಯವಾಗಿಲ್ಲ. ಈಗ ಸಿಸಿಟಿವಿ ಅಳವಡಿಸಲಾಗಿದೆ ಎಂದು ವಿಚಾರಣೆಯ ವೇಳೆ ಆರೋಪಿಗಳು ತಿಳಿಸಿದ್ದಾರೆ ಎಂದು ಚಂದ್ರಶೇಖರ್ ತಿಳಿಸಿದರು.
ಅವ್ಯವಹಾರದ ಫಲಾನುಭವಿಗಳು
10 ವೈದ್ಯಕೀಯ ಪಿ.ಜಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ 32 ಉತ್ತರ ಪತ್ರಿಕೆಗಳಲ್ಲಿ ಅಕ್ರಮವಾಗಿರುವುದು ದೃಢಪಟ್ಟಿದೆ. ಎಂವಿಜೆ ಕಾಲೇಜಿನ ಡಾ. ಪಾಂಡಿರಾಜ್, ವಿಜಯಪುರ ಅಲ್ ಅಮೀನ್ ಕಾಲೇಜಿನ ಸಯ್ಯದ್ ಅಬ್ದುಲ್ ಖಾದರ್ ಭಾಂಗಿ, ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನ ಡಾ.ಶಿವರಾಜ್ ಆನಂತ್ ರೆಡ್ಡಿ, ಬೆಂಗಳೂರು ಎಂವಿಜೆ ಮೆಡಿಕಲ್ ಕಾಲೇಜಿನ ಡಾ.ಪುನೀತ್ ಪಾಲ್ ಸಿಂಗ್, ಗುಲ್ಬರ್ಗಾ ಮೆಡಿಕಲ್ ಕಾಲೇಜಿನ ಡಾ. ಬಸವೇಶ್ ಎಂ.ಆರ್, ಕಿಮ್ಸ್ ಕಾಲೇಜಿನ ಡಾ.ಗುರುಪ್ರೀತ್ ಸಿಂಗ್ ಚಾಕೋ, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ಕುನಾಲ್ ಸಿನ್ಹಾ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆವಿಜೆ ಮೆಡಿಕಲ್ ಕಾಲೇಜಿನ ಡಾ.ಅನಿಂದಿತ ರಾಯ್, ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ಸುರೇಶ್ ಕನ್ನಮಾಡಿ, ಗುಲ್ಬರ್ಗಾದ ಎಂ.ಆರ್. ಮೆಡಿಕಲ್ ಕಾಲೇಜಿನ ಡಾ. ಶರಣ ಬಸಪ್ಪ ಈ ಅವ್ಯವಹಾರದ ಫಲಾನುಭವಿಗಳು. ಇವರು ಹಣ ನೀಡಿ ಉತ್ತರ ಪತ್ರಿಕೆಯನ್ನು ಎರಡನೆ ಬಾರಿ ಬರೆದಿದ್ದಾರೆ. ಇವರನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗುವುದು. ನ್ಯಾಯಾಲಯ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಅವರನ್ನು ವಿಚಾರಣೆ ನಡೆಸಿದ್ದು, ಅಗತ್ಯವಿದ್ದರೆ ಇನ್ನೊಮ್ಮೆ ವಿಚಾರಣೆ ನಡೆಸಲಾಗುವುದು ಎಂದು ಚಂದ್ರಶೇಖರ್ ತಿಳಿಸಿದರು.