ದುಬೈ: ಕಟ್ಟಡಗಳನ್ನು ನಿರ್ಮಿಸಿ ವಿಶ್ವದ ಪ್ರವಾಸಿಗರನ್ನು ಸೆಳೆಯುತ್ತಿರುವ ಯುಎಇ ಈಗ ಕಟ್ಟಡ ನಿರ್ಮಾಣದಲ್ಲಿ ಮತ್ತೊಂದು ದಾಖಲೆ ಮಾಡಲು ಮುಂದಾಗಿದೆ. ವಿಶ್ವದ ಅತ್ಯಂತ ಎತ್ತರವಾದ ವಸತಿ ಸಮುಚ್ಚಯವನ್ನು ದುಬೈಯಲ್ಲಿ ನಿರ್ಮಿಸಲು ಮುಂದಾಗುತ್ತಿದೆ.
ನೆಲದಿಂದ 711 ಮೀಟರ್(2,333 ಅಡಿ) ಎತ್ತರದವರೆಗೆ ದುಬೈ ಒನ್ ಹೆಸರಿನ ಸಮುಚ್ಚಯ ನಿರ್ಮಿಸಲು ಯುಎಇ ಸರ್ಕಾರ ಯೋಜನೆ ರೂಪಿಸಿದೆ.
ಏನೇನು ಇರುತ್ತೆ?: 900 ವಸತಿಗೃಹಗಳು, ಫೈವ್ ಸ್ಟಾರ್ ಹೊಟೇಲ್, ಒಳಾಂಗಣ ಬಹುಪಯೋಗಿ ಕ್ರೀಡಾ ಸೌಲಭ್ಯ, ಡ್ಯಾನ್ಸಿಂಗ್ ಫೌಂಟೇನ್‍ಗಳು ಈ ವಸತಿ ಸಮುಚ್ಚಯದಲ್ಲಿ ಇರಲಿದೆ. ಅಷ್ಟೇ ಅಲ್ಲದೇ 655 ಮೀಟರ್ ಎತ್ತರದಲ್ಲಿ ಪರಿವೀಕ್ಷಣಾ ಕೇಂದ್ರ, 675 ಮೀಟರ್ ಎತ್ತರದಲ್ಲಿ ರೆಸ್ಟೋರೆಂಟ್ ನಿರ್ಮಾಣವಾಗಲಿದೆ. ಈ ಸಮುಚ್ಚಯದಲ್ಲಿ 78 ಸಾವಿರ ಮಂದಿ ವಾಸ ಮಾಡಬಹುದು ಎಂದು ನಿರ್ಮಾಣದ ಗುತ್ತಿಗೆ ಪಡೆದಿರುವ ಕಂಪೆನಿ ಹೇಳಿಕೊಂಡಿದೆ.
ವೆಚ್ಚ ಎಷ್ಟು? ಯೋಜನೆಯ ಮೊದಲ ಹಂತ ಮುಂದಿನ 5 ವರ್ಷಗಳಲ್ಲಿ ಪೂರ್ಣವಾಗಲಿದ್ದು 4.3 ಶತಕೋಟಿ ಪೌಂಡ್ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಆದರೆ ಈ ಕಟ್ಟಡ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗುವುದಿಲ್ಲ. ದುಬೈಯಲ್ಲಿರುವ ಬುರ್ಜ್ ಖಲೀಫಾ ವಿಶ್ವದ ಅತ್ಯಂತ ದೊಡ್ಡ ಕಟ್ಟಡವಾಗಿದ್ದು ಇದು ನೆಲದಿಂದ 828 ಮೀಟರ್ ಎತ್ತರದವರೆಗೆ ನಿರ್ಮಾಣವಾಗಿದೆ. ಹೀಗಾಗಿ ಈ ವಸತಿ ಸಮುಚ್ಚಯದ ಕೆಲಸ ಪೂರ್ಣಗೊಂಡಲ್ಲಿ ವಿಶ್ವದ ಎರಡನೇ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ದುಬೈ ಒನ್ ಪಾತ್ರವಾಗಲಿದೆ.
