ಕರ್ನಾಟಕ

ಹೈಕಮಾಂಡ್ ಮೀರಿ ಸಿದ್ದು ಬೆಳೆದಿದ್ದಾರೆಯೇ..?: ಪ್ರಹ್ಲಾದ್ ಜೋಷಿ

Pinterest LinkedIn Tumblr

Prahalad-Jopsh9opfhfgdhfgಬೆಂಗಳೂರು, ಜು.15- ನಾಯಿ ಬಾಲ ಅಲ್ಲಾಡಿಸಬೇಕೆ ಹೊರತು ಬಾಲವೇ ನಾಯಿಯನ್ನು ಅಲ್ಲಾಡಿಸಬಾರದು.  ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಲು ಮುಂದಾಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಆಗಮನಕ್ಕೆ ತಡೆಯೊಡ್ಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿದ್ದು ಈ ರೀತಿ…

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ನಾಯಿ ಬಾಲ ಅಲ್ಲಾಡಿಸಬೇಕೆ ಹೊರತು  ಬಾಲವೇ ನಾಯಿಯನ್ನು ಅಲ್ಲಾಡಿಸುವ ಸ್ಥಿತಿಗೆ ಬರಬಾರದು. ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮೀರಿ ಬೆಳೆದಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.

ದೇಶದ ಯಾವುದೇ ಭಾಗದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ರಾಹುಲ್‌ಗಾಂಧಿ ಅಲ್ಲಿಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಾರೆ. ಹರಿಯಾಣ, ತೆಲಂಗಾಣ, ಪಂಜಾಬ್, ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಲು ಅವರಿಗೆ ಸಮಯವಿರುತ್ತದೆ. ಕರ್ನಾಟಕದಲ್ಲಿ ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಇಲ್ಲಿನ ಯುವ ನಾಯಕನಿಗೆ ಸಮಯವಿಲ್ಲವೋ ಅಥವಾ   ನಾನು ಬಂದರೆ ಪಕ್ಷಕ್ಕೆ ಮುಜುಗರ ಕಾರಣವಾಗಬಹುದೇ ಎಂದು ಅವರು ವ್ಯಂಗ್ಯವಾಡಿದರು. ರೈತರ ಬಗ್ಗೆ ಸಂಸತ್‌ನಲ್ಲಿ ಪುಂಖಾನುಪುಂಖವಾಗಿ ಮಾತನಾಡುವ ರಾಹುಲ್‌ಗಾಂಧಿ, ಕರ್ನಾಟಕದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಲು ಅವರಿಗೆ ಏಕೆ ಸಾಧ್ಯವಾಗುತ್ತಿಲ್ಲ. ತಮ್ಮ ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆಯೇ ಎಂದು ಜೋಷಿ ತರಾಟೆಗೆ ತೆಗೆದುಕೊಂಡರು.

ರಾಹುಲ್‌ಗಾಂಧಿ ಕರ್ನಾಟಕಕ್ಕೆ ಭೇಟಿ ನೀಡಿದರೆ ತಮಗೆ ಮುಜುಗರವಾಗಬಹುದು ಎಂದು ಸಿದ್ದರಾಮಯ್ಯ ತಮ್ಮೆಲ್ಲ ಶಕ್ತಿ ಬಳಸಿ ತಡೆಯೊಡ್ಡುವ ಕೆಲಸ ಮಾಡಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಕೂಡ ಭೇಟಿ ನೀಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ತಮ್ಮ ಪ್ರವಾಸ ರದ್ದು ಪಡಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ರೈತರ ವಿಷಯದಲ್ಲಿ ಧ್ವನಿ ಇಲ್ಲದವರಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.  ಪ್ರವಾಸ: ರೈತರ ಸಮಸ್ಯೆಗಳನ್ನು ಆಲಿಸಲು ಇದೇ 18 ಮತ್ತು 19ರಂದು ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸರಣಿ ಸಭೆ ಹಮ್ಮಿಕೊಳ್ಳಲಾಗುವುದು. ಅಂದು ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ರೈತರನ್ನು ಖುದ್ದು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸುವರು. ಬಳಿಕ ಪಕ್ಷದ ವತಿಯಿಂದ ವರದಿಯೊಂದನ್ನು ಸಿದ್ಧಪಡಿಸಲಿದ್ದೇವೆ ಎಂದು ಹೇಳಿದರು. ಇದರ ಜತೆ ಇದೇ 25 ಮತ್ತು 26ರಂದು ಎರಡು ದಿನಗಳ ಕಾಲ ಆರು ತಂಡವನ್ನು ರಚಿಸಿ, ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದೇವೆ ಎಂದರು.

ಮೊದಲ ತಂಡದಲ್ಲಿ ತಾವು, ಸಂಸದ ಶಿವಕುಮಾರ್, ಶಾಸಕ ಸುನಿಲ್‌ಕುಮಾರ್, ಎರಡನೆ ತಂಡದಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ  ಸೋಮಣ್ಣ ಬೇವಿನಮರದ, ಮೂರನೆ ತಂಡದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಅರವಿಂದ ಲಿಂಬಾವಳಿ, ಗೋ.ಮಧುಸೂದನ್, ನಾಲ್ಕನೆ ತಂಡದಲ್ಲಿ ಆರ್.ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಮಣ್ಣ, ಐದನೆ ತಂಡದಲ್ಲಿ ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಗಣೇಶ್ ಕಾ ರ್ನಿಕ್, ಆರನೆ ತಂಡದಲ್ಲಿ ಕೆ.ಬಿ.ಶಾಣಪ್ಪ, ಲಕ್ಷ್ಮಣ ಸವದಿ, ರಘುನಾಥ್ ಮಲ್ಕಾಪುರೆ ಇರುತ್ತಾರೆ ಎಂದರು.

ವಿಶೇಷ ಅರ್ಥ ಬೇಡ: ಸರ್ಕಾರದ ವೈಫಲ್ಯಗಳ ವಿರುದ್ಧ ಜೆಡಿಎಸ್ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ. ಕಾಂಗ್ರೆಸ್ ಪಕ್ಷ ಬಹುಮತವಿರುವುದರಿಂದ ಅವಿಶ್ವಾಸ ನಿರ್ಣಯ ಮಂಡಿಸಲು ಈಗ ಕಾಲ ಪಕ್ವವಾಗಿಲ್ಲ. ಇದರ ಬಗ್ಗೆ ಜೆಡಿಎಸ್ ನಾಯಕರು ತಮ್ಮ ಬಳಿ ಚರ್ಚೆಯೂ ನಡೆಸಿಲ್ಲ. ಹಾಗಾಗಿ ನಾವು ಬೆಂಬಲ ನೀಡದಿರಲು ತೀರ್ಮಾನಿಸಿದ್ದೇವೆ ಎಂದು ಜೋಷಿ ಹೇಳಿದರು.
ಇಂದಿನ ಸಭೆಗೆ ಪಕ್ಷದ ನಾಯಕರಾದ ಯಡಿಯೂರಪ್ಪ ಗೈರು ಹಾಜರಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ದೆಹಲಿಯಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿರುವುದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದರು.
ಪಕ್ಷದ ಹೋರಾಟ, ಸಂಘಟನೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಅವರ ಸಂಪೂರ್ಣ ಬೆಂಬಲವಿರುತ್ತದೆ ಎಂಬ  ವಿಶ್ವಾಸವನ್ನು ಜೋಷಿ ವ್ಯಕ್ತಪಡಿಸಿದರು.

Write A Comment