ಕರ್ನಾಟಕ

ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷವಾಗಿ ಬಿಜೆಪಿ ವಿಫಲ : ಬಿಎಸ್‌ವೈ ಗರಂ

Pinterest LinkedIn Tumblr

BJP-Yadiyurappa0987766ಬೆಂಗಳೂರು, ಜು.15- ರೈತರ ಸಮಸ್ಯೆಗಳು ಗಂಭೀರವಾಗಿದ್ದರೂ ಸರ್ಕಾರಕ್ಕೆ  ಬಿಸಿ ಮುಟ್ಟಿಸಲು ಪ್ರತಿಪಕ್ಷವಾಗಿ ಬಿಜೆಪಿ ಎರಡು ಸದನಗಳಲ್ಲಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಪಕ್ಷದ ಕಚೇರಿಯಲ್ಲಿ ಇಂದು ನಡೆಯಬೇಕಾಗಿದ್ದ ಪ್ರಮುಖರ ಸಭೆ( ಕೋರ್ ಕಮಿಟಿ)ಗೆ ಗೈರು ಹಾಜರಾಗುವುದರ ಮೂಲಕ ಯಡಿಯೂರಪ್ಪ, ರಾಜ್ಯ ಘಟಕದ ನಾಯಕರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಸಾಲಬಾಧೆ ತಾಳಲಾರದೆ  ರೈತರು ದಿನಂಪ್ರತಿ ಸಾವಿಗೆ ಶರಾಣಗುತ್ತಿದ್ದಾರೆ. ಕಳೆದ 15 ದಿನಗಳಲ್ಲಿ 50 ಕ್ಕೂ ಹೆಚ್ಚು ಮಂದಿ ರೈತರು ಸಾವನ್ನಪ್ಪಿದ್ದರೂ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವಲ್ಲಿ ವಿಫಲವಾಗಿದೆ. ಜೆಡಿಎಸ್ ನೋಡಿ  ನೀವು ಕಲಿಯಬೇಕೆಂದು ಸಲಹೆ ಮಾಡಿದ್ದಾರೆ.  ಯಾವುದೇ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ನಮ್ಮ ಪಕ್ಷ ಸಂಪೂರ್ಣವಾಗಿ ವಿಫಲವಾಗುತ್ತಿದೆ. ರೈತರ ಅತ್ಮಹತ್ಯೆ, ಕಬ್ಬು ಬೆಳೆಗಾರರ ಸಮಸ್ಯೆ, ಒಂದಂಕಿ ಲಾಟರಿ ಪ್ರಕರಣ, ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ, ಐಎಎಸ್ ಅಧಿಕಾರಿ ಡಿ.ಕೆ, ರವಿ ನಿಗೂಢ ಸಾವು ಸೇರಿದಂತೆ ಎಲ್ಲ ವಿಷಯಗಳಲ್ಲೂ ವಿಫಲರಾಗುತ್ತಿದ್ದೇವೆ.

ನಮ್ಮ ವೈಫಲ್ಯವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ .ಕುಮಾರ ಸ್ವಾಮಿ ಅವರು ಹೈಜಾಕ್ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದರೆ ನೀವು ಅವರನ್ನು ನೋಡಿ ಕಲಿಯಿರಿ ಎಂದು ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್. ಈಶ್ವರಪ್ಪ  ಸೇರಿದಂತೆ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೂ ಬಿಸಿ ಮುಟ್ಟಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಪಕ್ಷದ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಿದೆ.  ಸುಷ್ಮಾ ಸ್ವರಾಜ್, ವಸುಂಧರಾರಾಜೆ ಅವರ ಐಪಿಎಲ್ ಪ್ರಕರಣ, ವ್ಯಾಪಂ ಹಗರಣದಲ್ಲಿ  ಸಿಲುಕಿಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್, ಮಹಾರಾಷ್ಟ್ರದ ಸಚಿವೆ ಪಂಕಜ ಮುಂಡೆ ಸೇರಿದಂತೆ ಹಲವು ಪ್ರಕರಣಗಳು ನಮ್ಮ ಪಕ್ಷಕ್ಕೆ ಕಳಂಕ ತಂದಿವೆ. ಕಾಂಗ್ರೆಸ್ ನಮ್ಮ ವಿರುದ್ದ ಎಲ್ಲ ಪಕ್ಷಗಳನ್ನು ಸಂಘಟಿಸಲು ಮುಂದಾಗಿದೆ. ಆದರೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಕೆಲವು ಗಂಭೀರ ಪ್ರಕರಣಗಳಿವೆ.

ಆದರೂ ನಮ್ಮ ಪಕ್ಷ ಇವುಗಳನ್ನು ಎತ್ತಿ ಹಿಡಿಯಲು ವಿಫಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ನಾನು ಪ್ರತಿಪಕ್ಷದ ನಾಯಕನಾಗಿದ್ದಾರೆ ಸರ್ಕಾರದ ಜುಟ್ಟು ಹಿಡಿದು ಸಮಸ್ಯೆ ಪರಿಹರಿಸುವಂತೆ ಒತ್ತಡ ಹಾಕುತ್ತಿದ್ದೆ. ಕುಮಾರಸ್ವಾಮಿ ಪ್ರತಿಯೊಂದು ವಿಷಯದಲ್ಲೂ ದಾಖಲೆಗಳನ್ನು ಮುಂದಿಟ್ಟುಕೊಂಡು ಸದನದಲ್ಲಿ ಮಾತನಾಡುತ್ತಾರೆ. ಲೋಕಾಯುಕ್ತ ಪ್ರಕರಣದಲ್ಲಿ ಅವರ ಬಳಿ ಈಗಾಗಲೇ ಸಾಕಷ್ಟು ದಾಖಲೆಗಳು ಸಂಗ್ರಹವಾಗಿವೆ. ನೀವು ಎಷ್ಟು ದಾಖಲೆಗಳನ್ನು ಇಟ್ಟುಕೊಂಡಿದ್ದೀರಿ ಎಂದು ಬಿಎಸ್‌ವೈ ಶೆಟ್ಟರ್ ಅವರನ್ನು ನೇರವಾಗಿಯೇ ಪ್ರಶ್ನೆ ಮಾಡಿದ್ದಾರೆ.
ಮುಂದಿನ ದಿನಗಳಲ್ಲಾದರೂ ಒಗ್ಗಟ್ಟಿನಿಂದ ಉಭಯಸದನಗಳಲ್ಲಿ  ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು. ಇಲ್ಲದಿದ್ದರೆ ಜೆಡಿಎಸ್ ಇದರ ಲಾಭ ಪಡೆದುಕೊಳ್ಳಲಿದೆ. ನಿಮ್ಮ ವರ್ತನೆ ಇದೇ ರೀತಿ ಮುಂದುವರೆದರೆ ರಾಷ್ಟ್ರ ನಾಯಕರ ಬಳಿ ದೂರು ನೀಡಲು ಹಿಂದೆ ಮುಂದೆ ನೋಡುವುದಿಲ್ಲ. ಮೊದಲು ಸದನದಲ್ಲಿ ಮಾತನಾಡುವಾಗ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಿ. ಸರ್ಕಾರದ ವಿರುದ್ದ ಪ್ರತಿಭಟಿಸುವಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಎಂದು ಸಲಹೆ ಮಾಡಿದ್ದಾಗಿ ಪಕ್ಷದ ಮೂಲಗಳು ತಿಳಿಸಿವೆ.

Write A Comment