ರಾಮನಗರ, ಜೂ.4: ಬೆಂಗಳೂರಿನಿಂದ ಅತಿವೇಗವಾಗಿ ಬರುತ್ತಿದ್ದ ಮಾರುತಿ 800 ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕವೇರಿ, ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಶಿಫ್ಟ್ ಕಾರಿಗೆ ಅಪ್ಪಳಿಸಿದ ಪರಿಣಾಮ, ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಮನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ರಾಮನಗರ ಪಟ್ಟಣದ ನಾಗರಬೀದಿ ನಿವಾಸಿಗಳಾದ ಒಂದೇ ಕುಟುಂಬದ ಮಹದೇವ(40), ಮೀನಾಕುಮಾರಿ(35), ಸತೀಶ(25) ಮಧು(24) ಎಂದು ಗುರುತಿಸಲಾಗಿದೆ. ಮಾರುತಿ ಕಾರಿನಲ್ಲಿ ಕಾರ್ಯ ನಿಮಿತ್ತ ಈ ನಾಲ್ಕು ಮಂದಿ ಬೆಂಗಳೂರಿಗೆ ತೆರಳಿ ರಾಮನಗರಕ್ಕೆ ಸಂಜೆ ಹಿಂದಿರುಗುತ್ತಿದ್ದರು. ಅತಿವೇಗ ಅಜಾಗರತೂಕತೆಯಿಂದ ಮಧು ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಬೆಂಗಳೂರು-ಮೈಸೂರು ರಸ್ತೆಯ ಒಡೇರಹಳ್ಳಿ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹತ್ತಿ, ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಶಿಫ್ಟ್ ಕಾರಿಗೆ ಅಪ್ಪಳಿಸಿದೆ.
ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಧು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅದೃಷ್ಟವಶಾತ್ ಶಿಫ್ಟ್ ಕಾರಿನಲ್ಲಿದ್ದ ಬೆಂಗಳೂರು ಮೂಲದವರು ಸಣ್ಣಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ನಾಗರಬೀದಿ ಗ್ರಾಮದಲ್ಲಿ ಮೌನ ಆವರಿಸಿತ್ತು. ಒಂದೇ ಬಾರಿ ನಾಲ್ವರನ್ನು ಕಳೆದುಕೊಂಡ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು. ರಾಮನಗರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ರಾಮನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
