ಪಣಜಿ, ಜೂ.4: ಮಾದಕ ವಸ್ತು ನಿಗ್ರಹ ಪಡೆಯ ಪೊಲೀಸರೆಂದು ಹೇಳಿಕೊಂಡು ಬಂದ ಐವರು ದೆಹಲಿ ಮೂಲದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಗೋವಾದ ಅಂಜುನಾ ಕಡಲತೀರದಲ್ಲಿ ನಡೆದಿದೆ.
ಗೋವಾಕ್ಕೆ ರಜಾ ದಿನದ ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಮಹಿಳೆಯರು ಟ್ಯಾಕ್ಸಿ ಬಾಡಿಗೆಗೆ ಪಡೆದು ಅಂಜುನಾ ಬೀಚ್ ಬಳಿ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಅರ್ಪೋರ ಗ್ರಾಮದ ಬಳಿ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡ ಐವರು ಅವರನ್ನು ತಡೆದಿದ್ದಾರೆ. ನಂತರ ಅವರನ್ನು ವಶಕ್ಕೆ ಪಡೆಯುವ ನೆಪದಲ್ಲಿ ಕೋಬರೋಡಾ ಬಳಿಯ ಕಲಂಗೂಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಗೋವಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಅವರ ಮೇಲೆ ಅತ್ಯಾಚಾರ, ಅಪಹರಣ, ದರೋಡೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಕಾರನ್ನು ತಡೆದ ನಂತರ ಬಲವಂತವಾಗಿ ಮಹಿಳೆಯರ ಬಳಿ ಇದ್ದ ಸೆಲ್‌ಫೋನ್, ಎಟಿಎಂ ಕಾರ್ಡ್‌ಗಳನ್ನು ಕಿತ್ತುಕೊಂಡು ನಂತರ ಟ್ಯಾಕ್ಸಿ ಚಾಲಕನಿಗೆ ಹಣ ತರುವಂತೆ ಹೇಳಿದರು. ನಂತರ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಆದರೆ ಅಷ್ಟರೊಳಗೆ ಮಹಿಳೆಯರನ್ನು ಆರೋಪಿಗಳು ಅಪಹರಿಸಿದ್ದರು ಎಂದು ಐಜಿಪಿ ಸುನೀಲ್‌ಘರ್ ತಿಳಿಸಿದ್ದಾರೆ.
ಇಂದು 5 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ, ಆರೋಪಿಗಳನ್ನು ಅಜಯ್ ಕುಮಾರ್ ಕುಶ್ವಾಹ (39), ಜೀವನ್ ಪವರ್ (26), ನದೀಮ್ ಖಾನ್ (28), ತ್ರೆಬೋನ್ ಜೋಸೆಫ್ (27) ಹಾಗೂ ಕಮ್ಲೇಶ್ ಚೌಧರಿ (21) ಎಂದು ಗುರ್ತಿಸಲಾಗಿದ್ದು, ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿವೆ.
ಅತ್ಯಾಚಾರ ನಡೆಸಿರುವ ಜೊತೆಗೆ ಕಟ್ಟಿಗೆಯಿಂದ ಹಲ್ಲೆ ಕೂಡ ಮಾಡಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ಬೆಳಗ್ಗೆ ಮಹಿಳೆಯರನ್ನು ಬಿಡುಗಡೆ ಮಾಡಿದ್ದು, ಅವರು ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ನಂತರ ಆರೋಪಿಗಳ ಮಾಹಿತಿ ಕಲೆಹಾಕಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಾತ್ರಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
