ದುಬೈ : ಎಮಿರೇಟ್ಸ್ ಇಂಡಿಯಾ ಫ್ರಟರ್ನಿಟಿ ಫೋರಮ್ ಯು ಏ ಇ ಕರ್ನಾಟಕ ವತಿಯಿಂದ ಆಯೋಜಿಸಿದ Go Fest UAE-2015 ವ್ಯಾರ್ ಫಾಮಿಲೀಸ್ ಯುನೈಟ್ ಎಂಬ ಶೀರ್ಷಿಕೆಯಡಿ ನಡೆದ ಕುಟುಂಬ ಸಮ್ಮಿಲನ ಮತ್ತು ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಮೇ 29 ರಂದು ದುಬೈ ಅಲ್ ಕುಸೈಸ್ ನಲ್ಲಿರುವ ಬಿಲ್ವ ಸ್ಕೂಲಿನ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಎಮಿರೇಟ್ಸ್ ಇಂಡಿಯಾ ಫ್ರಟರ್ನಿಟಿ ಫೋರಮ್ ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಜನಾಬ್ ನವೀದ್ ಕುಂದಾಪುರ ಮಾತನಾಡಿ ನಿರಂತರ ಕೆಲಸದ ಒತ್ತಡದಿಂದ ಬಿಡುವಿಲ್ಲದ ಜೀವನಕ್ಕೆ ಅನಿವಾರ್ಯವಾಗಿ ಹೊಂದಿಕೊಂಡಿರುವ ಅನಿವಾಸಿ ಭಾರತೀಯರಿಗೆ ಒಂದು ದಿನದ ಮಟ್ಟಿಗೆ ಒತ್ತಡದ ನಡುವೆಯೂ ತುಸು ವಿಶ್ರಾಂತಿಯನ್ನು ಪಡೆದುಕೊಳ್ಳಲು ಅವಕಾಶವನ್ನು ಮಾಡಿಕೊಡುವುದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾಗಿ ತಿಳಿಸಿದರು , ಎಮಿರೇಟ್ಸ್ ಇಂಡಿಯಾ ಫ್ರಟರ್ನಿಟಿ ಫೋರಮ್ ಯು.ಎ.ಇ ಕರ್ನಾಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಜನಾಬ್ ಅಬ್ದುಲ್ ರಶೀದ್ ,ಜನಾಬ್ ಹಸನ್ ಅಶ್ರಫ್ , ಜನಾಬ್ ಮುಬೀನ್ ಕಾರ್ಕಳ ಹಾಗೂ ಯು ಎ ಇ ಯ ಖ್ಯಾತ ಉದ್ಯಮಿ ಖುಷಿ ಗ್ರೂಪ್ ಆಫ್ ಕಂಪನಿಯ ಮಾಲಕ ಜನಾಬ್ ಮೊಹಮ್ಮದ್ ಶರೀಫ್ ಮೊದಲಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ತಿತರಿದ್ದರು.
ನಂತರ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಚಿಣ್ಣರಿಗಾಗಿ ಗಾಯನ,ಕ್ವಿಝ್, ಕಾಬಾದ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಪುರುಷರಿಗಾಗಿ ಹಾಸ್ಯಮಯ ಕ್ರೀಡಾ ಸ್ಪರ್ಧೆ,ಕ್ವಿಝ್ ಮತ್ತು ಮಹಿಳೆಯರಿಗಾಗಿ ಸ್ವಾದಿಷ್ಠ ಅಡುಗೆ ತಯಾರಿ,ಕ್ವಿಝ್ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮಹಿಳೆಯರಿಗಾಗಿ ನಡೆದ ಸ್ವಾದಿಷ್ಟ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಸಿಹಿ ತಿನಿಸಿನ ಮೇಳವು ನೋಡುಗರ ಕಣ್ಮನ ಸೆಳೆಯುವಂತಿತ್ತು. ಕರಾವಳಿ ಕರ್ನಾಟಕದವರ ದಫ್ ಕಾರ್ಯಕ್ರಮ ಪ್ರೇಕ್ಷಕರನ್ನು ಆಕರ್ಷಿಸಿತಲ್ಲದೆ, ಆರೋಗ್ಯದ ಕುರಿತು ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ “ಹೆಲ್ತ್ ಅವಾರ್ನೆಸ್ ” ಎಂಬ ಪ್ರಹಸನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪುಟಾಣಿ ಮಕ್ಕಳ “ರೆಸ್ಪೆಕ್ಟ್ ಟು ಪೇರೆಂಟ್” ಕಿರು ನಾಟಕವು ಚಿಣ್ಣರ ಕಲಾ ಪ್ರತಿಭೆಯನ್ನು ಬಿಂಬಿಸಿತು. ಉದ್ಯೋಗದ ಒತ್ತಡದ ಜೊತೆಗೆ ಯಾಂತ್ರಿಕ ಜೀವನ ವ್ಯವಸ್ಥೆಗೆ ಸಿಲುಕಿರುವ ಅನಿವಾಸಿ ಭಾರತೀಯರಿಗೆ ಈ ಕಾರ್ಯಕ್ರಮ ಅದ್ದೂರಿಯ ಮನರಂಜನೆಯನ್ನು ನೀಡಿತು .
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಂಡಿಯನ್ ಕಲ್ಚರಲ್ ಸೊಸೈಟಿ ಯು ಎ ಇ ಇದರ ಅಧ್ಯಕ್ಷರಾದ ಜನಾಬ್ ಅಲಿಯಾರ್ ಸಾಹೇಬ್ ಹಾಗೂ ಶರೀಫ್ ಕಾರ್ಸ್ ನ ಮಾಲಕ ಶರೀಫ್ ಅವಿರ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ ಮುಕ್ತಾಯದಲ್ಲಿ ಭೋಜನಾ ಕೂಟವನ್ನು ವ್ಯವಸ್ಥೆಗೊಳಿಸಲಾಗಿತ್ತು, ಜನಾಬ್ ನಾಸಿರ್ ಕೆ.ಕೆ.ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



























