ಬೆಂಗಳೂರು, ಜೂ.4: ವಿಶ್ವದೆಲ್ಲೆಡೆ ಇಂದು ನ್ಯೂಡಲ್ಸ್‌ಗೆ ಭಾರೀ ಬೇಡಿಕೆ ಇದೆ. ಇದಕ್ಕೆ ತಾಜಾ ಉದಾಹರಣೆ 2014ರಲ್ಲಿ 107.7 ಬಿಲಿಯನ್ ಮಂದಿ ದಿಢೀರ್ ನ್ಯೂಡಲ್‌ಗಳ ಮೊರೆ ಹೋಗಿದ್ದಾರೆ. ವಿಶ್ವದಲ್ಲಿ ಪ್ರತಿ ಮನುಷ್ಯ ವರ್ಷವೊಂದರಲ್ಲಿ ಸರಾಸರಿ ಹದಿನಾಲ್ಕು ಬಾರಿ ಇದನ್ನು ಮುಕ್ಕಿ ಖುಷಿ ಪಟ್ಟಿದ್ದಾನೆ. ಜಗತ್ತಿನೆಲ್ಲೆಡೆ ಎಲ್ಲಾ ವಯಸ್ಸಿನವರೂ, ಹೆಣ್ಣು-ಗಂಡು ಯಾವುದೇ ಭೇದ-ಭಾವವಿಲ್ಲದೆ ಇದನ್ನು ಸವಿದು ಬಾಯಿ ಚಪ್ಪರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇದನ್ನು ಜಾಗತಿಕ ಆಹಾರ ಎಂದೇ ಪರಿಗಣಿಸಲಾಗಿದೆ. ಭಾರತದಲ್ಲೂ ಇದು ತೀರ ಸುಲಭದ ಆಹಾರ ಎಂದೇ ಗುರುತಿಸಿಕೊಂಡಿದೆ.
ನ್ಯೂಡಲ್ಸ್ ಸೇವನೆಯಲ್ಲಿ ಚೀನಾ ಪ್ರಥಮ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಅಂತಿಮ ಸ್ಥಾನದಲ್ಲಿದೆ. ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಹೈ-ಪೈ ಮಂದಿಯ ಅತಿ ಮುದ್ದಿನ ಆಹಾರವಾಗಿದೆ. ವಿಶ್ವದ ಹಿರಿಯಣ್ಣ ಅಮೆರಿಕಾ ಇದರ ಬಳಕೆಯಲ್ಲಿ ಆರನೆ ಸ್ಥಾನದಲ್ಲಿದೆ. ಭಾರತದಲ್ಲಿಯೂ ಇಂದು ಆಧುನಿಕತೆಯ ವ್ಯಾಮೋಹ ಮಿತಿಮೀರಿದ್ದು, ಹಣದ ಹಿಂದೆ ಬಿದ್ದಿರುವ ಬಹುಪಾಲು ಮಂದಿ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹಾಗಾಗಿ ಸಮಯದ ಅಭಾವ ಅವರನ್ನು ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ಇಂತಹ ದಿಢೀರ್ ಆಹಾರಗಳ ಮೊರೆ ಹೋಗಿ ಆರೋಗ್ಯವನ್ನು ಕಡೆಗಣಿಸಿದ್ದಾರೆ. ಅದರ ಪರಿಣಾಮವೇ ಇಂತಹ ಮ್ಯಾಗಿಗಳ ಪ್ರಯೋಗ ಎಂಬುದು ನಿರ್ವಿವಾದ.
