ಕರ್ನಾಟಕ

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಕೌನ್ಸೆಲಿಂಗ್‌ಗೆ ಚಾಲನೆ

Pinterest LinkedIn Tumblr

CET-Counceling

ಬೆಂಗಳೂರು, ಜೂ.3- ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾಗುವ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಸಿಇಟಿ ಕೌನ್ಸೆಲಿಂಗ್ ಇಂದಿನಿಂದ ಚಾಲನೆ ದೊರೆತಿದೆ. ಎರಡು ದಿನಗಳ ಹಿಂದಷ್ಟೇ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಇಂದು ವಿಕಲಚೇತನರು ಮತ್ತು ಎನ್‌ಸಿಸಿ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಯುತ್ತಿದೆ.

ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನ ಆಗಮಿಸಿದ್ದರಿಂದ ಪರೀಕ್ಷಾ ಪ್ರಾಧಿಕಾರದಲ್ಲಿ ನೂಕು ನುಗ್ಗಲಿನ ವಾತಾವರಣ ನಿರ್ಮಾಣವಾಗಿತ್ತು. ವೈದ್ಯಕೀಯ ಸಮಿತಿಯು ಅಭ್ಯರ್ಥಿಗಳ ಪರಿಶೀಲನೆ ನಡೆಸಿ ಶೇ.45ಕ್ಕಿಂತಲೂ ಹೆಚ್ಚಿನ ಅಂಗ ವೈಕಲ್ಯ ಇರುವ ಅಭ್ಯರ್ಥಿಗಳನ್ನು ಶೇ.3ರ ಮೀಸಲಾತಿಯಡಿ ಆಯ್ಕೆಗೆ ಅರ್ಹರೆಂದು ದೃಢೀಕರಿಸಿದೆ. ನಾಳೆ ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಗಳಿಸಿರುವ ಪದಕಗಳನ್ನು ದೃಢೀಕರಿಸಲಿದ್ದಾರೆ.  ಜೂ.5ರಿಂದ 20ರವರೆಗೂ ಉಳಿದ ಅಭ್ಯರ್ಥಿಗಳ ಕೌನ್ಸೆಲಿಂಗ್ ನಡೆಯಲಿದೆ. ಜೂನ್ 13ರಿಂದಲೇ ಸೀಟು ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, 17ರಿಂದ 22ರವರೆಗೆ ಕಾಲೇಜುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 23ರಂದು ಔಪಚಾರಿಕ ಸೀಟು ಹಂಚಿಕೆ ಪ್ರಕ್ರಿಯೆಗಳು ಶುರುವಾಗಲಿವೆ.
ಅಂದು ಕೊನೆಯ ಬದಲಾವಣೆಗೆ ರಾತ್ರಿ 8ರ ನಂತರ ಅವಕಾಶ ಕಲ್ಪಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಜೂನ್ 27ರಿಂದ 30ರವರೆಗೆ ಶುಲ್ಕ ಸಹಿತ ಸೀಟು ಹಂಚಿಕೆ ಕಾರ್ಯ ನಡೆಯಲಿದೆ.

ಜೂನ್ 5ರಿಂದ ಆರಂಭವಾಗುವ ಸಾಮಾನ್ಯ ಕೌನ್ಸೆಲಿಂಗ್‌ಗೆ ರಾಜ್ಯದ 13 ಕಡೆ ಕೌನ್ಸೆಲಿಂಗ್ ಸೆಂಟರ್‌ಗಳನ್ನು ಆರಂಭಿಸಲಾಗಿದೆ. ಬೆಂಗಳೂರು, ದಾವಣಗೆರೆ, ಬಳ್ಳಾರಿ, ಬೆಳಗಾವಿ, ರಾಯಚೂರು. ಗುಲ್ಬರ್ಗ, ವಿಜಯಪುರ, ಧಾರವಾಡ, ಕಾರವಾರ, ಮಂಗಳೂರು, ಶಿವಮೊಗ್ಗ, ಹಾಸನ, ಮೈಸೂರು ಸೇರಿದಂತೆ 13 ಸ್ಥಳಗಳಲ್ಲಿ ಸಿಇಟಿ ಕೌನ್ಸೆಲಿಂಗ್ ಶುರುವಾಗಲಿದೆ.  ಅಭ್ಯರ್ಥಿಗಳು ಸಮೀಪದ ಯಾವುದೇ ಕೇಂದ್ರದಲ್ಲಾದರೂ ಕೌನ್ಸೆಲಿಂಗ್‌ಗೆ ಹಾಜರಾಗಬಹುದು ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಜಿಯಲ್ಲಿ ನಮೂದಿಸಿರುವ ಜಾತಿ ಬದಲಾವಣೆಗೆ ಕೆಲವರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಅಂತಹವರು ಸೂಕ್ತ ದಾಖಲೆಗಳೊಂದಿಗೆ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ತಿಳಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದಾಗ ಮುದ್ರಿತ ಪ್ರತಿ ಪಡೆದುಕೊಳ್ಳದೆ ಇರುವವರು ಈಗ ಮುದ್ರಿತ ಪ್ರತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. http://kea.kar.nic.in/ ಸಂಪರ್ಕಿಸಿ.

Write A Comment