ಕರ್ನಾಟಕ

ನರೇಂದ್ರ ಮೋದಿ ‘ಸೆಲ್ಫಿ’ ಪ್ರಧಾನಿ : ಕಾಂಗ್ರೆಸ್ ಟೀಕೆ

Pinterest LinkedIn Tumblr

Modi-Selfi

ಬೆಂಗಳೂರು, ಮೇ 23: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂದು ವರ್ಷದಲ್ಲಿ ಯಾವ ಸಾಧನೆಯನ್ನೂ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಜಯರಾಮ್ ರಮೇಶ್ ಟೀಕಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ಒಂದು ವರ್ಷದಲ್ಲಿ ಹಳೆ ಯೋಜನೆಗಳನ್ನೇ ರಿ-ಪ್ಯಾಕೇಜಿಂಗ್ ಮಾಡಿ ಹೆಸರು ಬದಲಾವಣೆ ಮಾಡುವ ಮೂಲಕ ಒಳ್ಳೆಯ ಮಾರುಕಟ್ಟೆ ಮಾಡಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಒಂದು ವರ್ಷದ ವೈಫಲ್ಯಗಳನ್ನು ಪಟ್ಟಿ ಮಾಡಿದ ಅವರು, ಮೋದಿ ಹೆಸರಿನ ಪ್ರತಿಯೊಂದು ಅಕ್ಷರಕ್ಕೂ ಪ್ರತ್ಯೇಕ ವ್ಯಾಖ್ಯಾನ ನೀಡಿದರು. ಎಂ ಎಂದರೆ ಮರ್ಡರ್ರ್ ಆಫ್ ಡೆಮಾಕ್ರೆಟಿಕ್ ಇನ್ಸ್‌ಟ್ಯೂಷನ್ ಎಂದರ್ಥ. ಮೋದಿ ಪ್ರಧಾನಿಯಾಗಿ ಸಂಸತ್‌ಗೆ ಹಾಜರಾಗಿದ್ದು ಬಹಳ ಕಡಿಮೆ. ಸಂವಿಧಾನಾತ್ಮಕ ಡಿಎಸ್‌ಡಿ ಸಂಸ್ಥೆ ಕುರಿತು ಮಸೂದೆ ಮಂಡನೆಯಾದಾಗಲೂ ಸಂಸತ್‌ನಲ್ಲಿ ಹಾಜರಾಗಲಿಲ್ಲ. ಒಂದು ವರ್ಷದಲ್ಲಿ 53 ಕಾಯ್ದೆಗಳನ್ನು ಮಂಡಿಸಿದ್ದಾರೆ. ಅವುಗಳಲ್ಲಿ 5 ಸ್ಥಾಯಿ ಸಮಿತಿಗೆ ಹೋಗಿವೆ ಎಂದು ವಿವರಿಸಿದರು.

8 ತಿಂಗಳಿನಿಂದ ಮಾಹಿತಿ ಆಯುಕ್ತರಿಲ್ಲ, 6 ತಿಂಗಳಿಂದ ಮುಖ್ಯಜಾಗೃತ ಅಧಿಕಾರಿಯಿಲ್ಲ. ಇದು ಮೋದಿ ಸರ್ಕಾರದ ಆಡಳಿತ ಎಂದು ವ್ಯಂಗ್ಯವಾಡಿದರು. ಕನಿಷ್ಠ ಗಾತ್ರದ ಸರ್ಕಾರ, ಗರಿಷ್ಠ ಆಡಳಿತ ಎಂಬುದು ಮೋದಿ ಅವರ ಘೋಷಣೆಯಾಗಿತ್ತು. ಆದರೆ ಈಗ ಏಕವ್ಯಕ್ತಿ ಸರ್ಕಾರವಾಗಿದೆ, ಮೋದಿ ಸೆಲ್ಫಿ ಪ್ರಧಾನಿಯಾಗಿದ್ದಾರೆ ಎಂದು ಕುಹಕವಾಡಿದರು. ಮೋದಿ ಪ್ರಧಾನಿಯಾಗುವ ಮೊದಲು ಅಣು ಒಪ್ಪಂದವನ್ನು ಹಾಗೂ ಆಧಾರ್ ಗುರುತಿನ ಕಾರ್ಡ್ ನೀಡುವುದನ್ನು ಬಲವಾಗಿ ವಿರೋಧಿಸಿದ್ದರು. ಪ್ರಧಾನಿಯಾದ ನಂತರ ಅವುಗಳನ್ನೇ ಮುಂದುವರೆಸಿದ್ದಾರೆ. 2013ರಲ್ಲಿ ಯುಪಿಎ ಸರ್ಕಾರ ಮಂಡಿಸಿದ್ದ ಭೂ ಸ್ವಾಧೀನ ಹಾಗೂ ಪರಿಹಾರ ಕಾಯ್ದೆಗೆ ಬಿಜೆಪಿ ಬೆಂಬಲ ನೀಡಿತ್ತು. ಮೋದಿ ಪ್ರಧಾನಿಯಾಗುತ್ತಿದ್ದಂತೆ ಕೆಲ ತಿದ್ದುಪಡಿಗಳನ್ನು ಮಾಡಿ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಬ್ಯಾಂಕ್‌ಗಳ ಮೂಲಕ ಜಾರಿ ಮಾಡುತ್ತಿರುವ ಮೂರು ವಿಮಾ ಯೋಜನೆಗಳು ಹಾಗೂ ಜನಧನ್ ಯೋಜನೆ ಹೊಸದಲ್ಲ. ಹಿಂದೆ ಯುಪಿಎ ಸರ್ಕಾರದಲ್ಲೇ ಇವು ಜಾರಿಯಲ್ಲಿದ್ದವು. ಮೋದಿ ಸರ್ಕಾರ ಅವುಗಳನ್ನು ರಿ-ಪ್ಯಾಕೇಜಿಂಗ್ ಮಾಡಿ ಹೆಸರು ಬದಲಾವಣೆ ಮಾಡಿಕೊಂಡು ಮಾರುಕಟ್ಟೆ ಮಾಡಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು. ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದಾಗ ದೇವಸ್ಥಾನಗಳಿಗಿಂತ ಶೌಚಾಲಯಗಳು ಮುಖ್ಯ ಎಂದು ಹೇಳಿದ್ದನ್ನು ದೊಡ್ಡ ವಿವಾದ ಮಾಡಲಾಗಿತ್ತು. ಈಗ ಮೋದಿ ಅದೇ ಹೇಳಿಕೆಯನ್ನು ಬೇರೆ ರೀತಿ ಹೇಳಿದ್ದಾರೆ. ನಿರ್ಮಲ್ ಭಾರತ್ ಯೋಜನೆಯನ್ನು ಕ್ಲೀನ್ ಇಂಡಿಯಾ ಹೆಸರಿನಲ್ಲಿ ಬದಲಾವಣೆ ಮಾಡಿ, ತಮ್ಮ ಸ್ವಂತದ್ದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ರಾಜ್ಯಗಳಿಗೆ ನೀಡುತ್ತಿರುವ ಅನುದಾನ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡುತ್ತಿದ್ದ ಅನುದಾನದಲ್ಲಿ ಭಾರೀ ಕಡಿತ ಮಾಡಲಾಗಿದೆ. ಪ್ರಧಾನಿ ವಿದೇಶ ಪ್ರವಾಸ ಉತ್ತಮವೇ ಆದರೂ, ಅಲ್ಲಿ ಹೋಗಿ ಭಾರತದ ಸ್ಥಳೀಯ ರಾಜಕಾರಣದ ಬಗ್ಗೆ ಮಾತನಾಡುವ ಬಾಲಿಶ ವರ್ತನೆಯನ್ನು ಯಾವ ಪ್ರಧಾನಿಯೂ ಪ್ರದರ್ಶಿಸಿರಲಿಲ್ಲ ಎಂದು ಜೈಯರಾಮ್ ರಮೇಶ್ ತರಾಟೆಗೆ ತೆಗೆದುಕೊಂಡರು. ನಾರಾಯಣಮೂರ್ತಿಯಂತವರು ಮೋದಿ ಆಡಳಿತವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರದ ವೈಫಲ್ಯಗಳ ಬಗ್ಗೆಯೂ ಚರ್ಚೆ ಮಾಡಬೇಕು ಎಂದು ಅವರು ತಿರುಗೇಟು ನೀಡಿದರು.

Write A Comment