ಕರ್ನಾಟಕ

ಉಪಕುಲಪತಿಗಳ ನೇಮಕಾತಿಗೆ ಮಾನದಂಡವಿಲ್ಲದಿರುವುದು ಕಳವಳಕಾರಿ

Pinterest LinkedIn Tumblr

30BGPRABHU_DEV_1222593e

ಬೆಂಗಳೂರು, ಮೇ 2- ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕ ಸಂಬಂಧ ಯಾವುದೇ ನಿರ್ದಿಷ್ಟ ಮಾನದಂಡಗಳು ಇಲ್ಲದಿರುವುದು ಕಳವಳಕಾರಿ ವಿಷಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್.ಪ್ರಭುದೇವ್ ತಿಳಿಸಿದ್ದಾರೆ. ಕಾನೂನು ಕಾಲೇಜಿನಲ್ಲಿ ಉಪಕುಲಪತಿಗಳ ನೇಮಕಾತಿ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,  ದೇಶದಲ್ಲೇ ಯಾವ ರಾಜ್ಯದಲ್ಲಿಯೂ ವಿವಿಗಳ ಉಪಕುಲಪತಿಗಳ ನೇಮಕಾತಿಗೆ ಯಾವುದೇ ನಿರ್ದಿಷ್ಟ ಮಾನದಂಡ ಇಲ್ಲ.

ಸರ್ಕಾರ ಈ ಬಗ್ಗೆ ಕ್ರಮವಹಿಸಿದರೆ ವಿಶ್ವವಿದ್ಯಾನಿಲಯಗಳ ನಮ್ಮ ವೇದಿಕೆ ಕುಲಪತಿ ನೇಮಕಕ್ಕೆ ಮಾನದಂಡ ರೂಪಿಸಲು ಸಿದ್ಧವಿದೆ ಎಂದು ಹೇಳಿದರು. ವಿವಿಗಳ ಕುಲಪತಿಗಳು ಆರ್ಥಿಕ ವ್ಯವಸ್ಥೆ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಅಂತಹ ಮುಖ್ಯಸ್ಥರ ಆಯ್ಕೆಗೆ ಇಡೀ ದೇಶದಲ್ಲೇ ಯಾವುದೇ ಮಾನದಂಡವಿಲ್ಲ. ಹಳೆಯ ವ್ಯವಸ್ಥೆಯನ್ನು ಉತ್ತಮ ಪಡಿಸುವ ಮೂಲಕ ಗುಣಮಟ್ಟ ಕಾಪಾಡಬೇಕು ಎಂದು ಅಭಿಪ್ರಾಯಪಟ್ಟರು.

ದಾಕ್ಷಿಣ್ಯಕ್ಕೆ ಕುಲಪತಿಗಳ ಆಯ್ಕೆ ನಡೆಯುತ್ತದೆ. ಆದರೆ, ಇಂತಹ ಉನ್ನತ ಹುದ್ದೆಗೆ ನೇಮಕ ಮಾಡುವ ಸಂಬಂಧ ವಿವಿಗಳ ಸಿಂಡಿಕೇಟ್, ಸರ್ಕಾರ, ಯುಜಿಸಿ ಸೇರಿದಂತೆ ಶೋಧನಾ ಸಮಿತಿಯೊಂದನ್ನು ರಚಿಸಿ ಆ ಮೂಲಕ ಆಯ್ಕೆ ನಡೆಸಬೇಕು. ಜತೆಗೆ ಮಾನದಂಡಗಳನ್ನು ಇಟ್ಟುಕೊಂಡು ಈ ಕಾರ್ಯಕೈಗೊಂಡರೆ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು. ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಗುರುತಿಸಲ್ಪಟ್ಟ ವ್ಯಕ್ತಿಯ ಆಧಾರದ ಮೇಲೆ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇಂತಹ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳಿವೆ. ಸರ್ಕಾರ ಆಸಕ್ತಿ ವಹಿಸಿದರೆ ನಿರ್ದಿಷ್ಟ ಮಾನದಂಡ ರಚಿಸಲು ನಮ್ಮ ವೇದಿಕೆ ಸಿದ್ಧವಿದೆ ಎಂದು ಹೇಳಿದರು. ಅಧ್ಯಾಪಕರು, ಪ್ರೊಫೆಸರ್‌ಗಳಿಂದ ಮಾಹಿತಿ ಕಲೆ ಹಾಕಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲು ಸಿದ್ಧವಿದ್ದು, ಅದನ್ನು ಅನುಸರಿಸಿ ಸಂಶೋಧನಾ ಸಮಿತಿ ರಚಿಸುವ ಮೂಲಕ ಕುಲಪತಿಗಳ ಆಯ್ಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬಹುದಾಗಿದೆ.

ಪ್ರೊಫೆಸರ್ ಆಗಿ 10 ವರ್ಷಗಳ ಅನುಭವ, ಆಡಳಿತಾತ್ಮಕ ಅನುಭವ ನಿಗದಿತ ಸಂಖ್ಯೆಯ ಸಂಶೋಧನಾ ಪ್ರಬಂಧ ರಚಿಸಿರಬೇಕು. ಇದರೊಂದಿಗೆ ರಾಜಕೀಯ ಹೊರತಾದ ವ್ಯಕ್ತಿ ನೇಮಕವಾಗುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಪ್ರೊ.ಎಂ.ಮಹದೇವಪ್ಪ ಮಾತನಾಡಿ, 6 ವಿಶ್ವವಿದ್ಯಾನಿಲಯಗಳಲ್ಲಿ   ಉಪಕುಲಪತಿಗಳ ಹುದ್ದೆ  ಖಾಲಿ ಇದೆ. ಆಯ್ಕೆ ಸಮಿತಿಯಲ್ಲಿ ಗೊಂದಲವೂ ಇದೆ. ಕೃಷಿ, ಪಶು ಹೀಗೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿ ನೇಮಕಕ್ಕೆ ಯಾವುದೇ ನಿಯಮಾವಳಿಗಳಿಲ್ಲ. ಇದನ್ನು ಜಾರಿಗೆ ತರಬೇಕಾಗಿದೆ.  ವ್ಯವಸ್ಥೆ ಸರಿಯಿಲ್ಲ ಎಂಬುದು ನಮ್ಮ ಅಭಿಪ್ರಾಯವಲ್ಲ. ಅದನ್ನು ಉತ್ತಮ ಪಡಿಸಬೇಕು ಎಂಬುದು ನಮ್ಮ ಅಭಿಮತ ಎಂದರು. ಅರ್ಜಿ ಆಹ್ವಾನಿಸಿ ಕುಲಪತಿ ನೇಮಕ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರಬಾಬು, ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ಅಸೋಷಿಯೇಷನ್ ಕಾರ್ಯದರ್ಶಿ ಚಂದ್ರಶೇಖರ್, ಚಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
-ಈ ಸಂಜೆ

Write A Comment