ವಾಷಿಂಗ್ಟನ್: ಅಮೆರಿಕದ ಏಜನ್ಸಿಗಳು ಮತ್ತು ಸಾಮಾಜಿಕ-ರಾಜಕೀಯ ಬುದ್ಧಿಜೀವಿಗಳು ಭಾರತೀಯ ಮೂಲದ ಅಮೆರಿಕನ್ನರನ್ನು ಅತ್ಯುತ್ತಮ ಶಿಕ್ಷಣಹೊಂದಿದ ಶ್ರೀಮಂತ ಜನಾಂಗೀಯ ಸಮೂಹ ಎಂದು ಗುರುತಿಸಿದೆ. ಆದಾಗ್ಯೂ ಅಮೆರಿಕದ ಜನಗಣತಿ ಬ್ಯುರೋ ಈ ವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಭಾರತೀಯ-ಅಮೆರಿಕನ್ನರ ಸರಾಸರಿ ಕೌಟುಂಬಿಕ ಆದಾಯವು ವಾರ್ಷಿಕ 100,000 ಡಾಲರ್ ಮುಟ್ಟಿರುವುದಾಗಿ ತಿಳಿಸಿದೆ. ಬಿಳಿಜನರು ಮತ್ತು ಮೂಲ ಅಮೆರಿಕನ್ನರು ಸೇರಿದಂತೆ ಯಾವುದೇ ಜನಾಂಗೀಯ ಗುಂಪಿನಲ್ಲಿ ಇದು ಅತ್ಯಧಿಕವಾಗಿದೆ.
ವಾಸ್ತವವಾಗಿ ಈ ಅಂಕಿಅಂಶವು 2013ರಲ್ಲಿ ದಾಟಿದ್ದರೂ ಶುಕ್ರವಾರ ಬೆಳಕಿಗೆ ಬಂದಿದೆ. ಬ್ಯೂರೋ ಪ್ರಕಾರ, ಏಷ್ಯಾದ ಜನಸಂಖ್ಯೆಯ ಸರಾಸರಿ ಆದಾಯ 2013ರಲ್ಲಿ 72, 472 ಡಾಲರ್ ಇದ್ದಿತ್ತು. ಇದು ರಾಷ್ಟ್ರೀಯ ಸರಾಸರಿ ಆದಾಯವಾದ 51,000 ಡಾಲರ್‌ಗಿಂತ ಹೆಚ್ಚಾಗಿತ್ತು.
ಏಷ್ಯನ್ ಅಮೆರಿಕನ್ನರ ಪೈಕಿ ಭಾರತೀಯ ಮೂಲಕ ಅಮೆರಿಕನ್ನರ ಆದಾಯ 100, 547 ಡಾಲರ್ ಮುಟ್ಟಿದ್ದು, ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತ ಎರಡು ಪಟ್ಟಿನಷ್ಟಿದೆ.
ಅಧಿಕ ವರಮಾನದ ಗುಂಪಿಗೆ ವ್ಯತಿರಿಕ್ತವಾಗಿ ಕಪ್ಪು ಅಮೆರಿಕ ಕುಟುಂಬದ ವಾರ್ಷಿಕ ಆದಾಯ 33321 ಡಾಲರ್ ಆಗಿದ್ದರೆ, ಹಿಸ್ಪಾನಿಕ್ ಜನಾಂಗದ ಆದಾಯ 39, 005 ಡಾಲರ್.
-ವೆಬ್ ದುನಿಯಾ