ಕರ್ನಾಟಕ

ರೌಡಿಗಳೇ ಬಾಲ ಬಿಚ್ಚಿದರೆ ಹುಷಾರ್ : ಅಲೋಕ್ ಖಡಕ್ ವಾರ್ನಿಂಗ್

Pinterest LinkedIn Tumblr

alok-kumar

ಬೆಂಗಳೂರು, ಮೇ.2-ರೌಡಿಗಳೇ ಬಾಲ ಬಿಚ್ಚಿದರೆ ಹುಷಾರ್… ಹೀಗೆಂದು ಇಂದು ನಗರದ 400 ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದವರು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್‌ಕುಮಾರ್. ಕೆಲ ದಿನಗಳಿಂದ ಸ್ಥಗಿತಗೊಳಿ ಸಲಾಗಿದ್ದ ರೌಡಿಗಳ ಪರೇಡ್ ಮತ್ತೆ ಆರಂಭವಾಗಿದ್ದು ಇಂದು ಬಸವೇಶ್ವರ ನಗರದ ಪೊಲೀಸ್ ಆವರಣದಲ್ಲಿ 400 ರೌಡಿಗಳ ಪರೇಡ್ ನಡೆಸಲಾಯಿತು. ಪಶ್ಚಿಮ  ವಿಭಾಗದ ವಿಜಯನಗರ ಉಪವಿಭಾಗದ ಎಲ್ಲಾ ರೌಡಿಗಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು 350 ರೌಡಿಗಳನ್ನು ಕರೆತಂದಿದ್ದಾರೆ.

ಅಲ್ಲದೆ ಉತ್ತರ ವಿಭಾಗದ ಪೊಲೀಸರು ಮಲ್ಲೇಶ್ವರ ಉಪವಿಭಾಗದ ರೌಡಿಗಳ ಮನೆ ಮೇಲೆ ದಾಳಿ ಮಾಡಿ 100 ರೌಡಿಗಳನ್ನು ಕರೆತಂದಿದ್ದಾರೆ.  ಮುಂಜಾನೆ 5 ಗಂಟೆಯಿಂದಲೇ ಈ ಕಾರ್ಯಾಚರಣೆ ನಡೆಸಿರುವ ಪೊಲೀಸರು ಒಟ್ಟು 400 ರೌಡಿಗಳನ್ನು ಬಸವೇಶ್ವರ ನಗರ ಠಾಣೆಯ ಆವರಣಕ್ಕೆ ಕರೆತಂದರು. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ನೇತೃತ್ವದಲ್ಲಿ ರೌಡಿಗಳ ವಿಚಾರಣೆ ನಡೆಸಲಾಯಿತು. ಪರೇಡ್‌ನಲ್ಲಿ ರೌಡಿ ಚಟುವಟಿಕೆಗಳಿಂದ ದೂರವಿರುವಂತೆ ರೌಡಿಗಳಿಗೆ ಕಿವಿಮಾತು ಹೇಳಿದ ಅಲೋಕ್‌ಕುಮಾರ್, ದುಶ್ಚಟಗಳಿಗೆ ಬಲಿಯಾಗಬೇಡಿ, ಎಚ್ಚರಿಕೆಯ ನಡುವೆಯೂ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ರೌಡಿ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ತೊಂದರೆ ನೀಡುವುದು, ಆಸ್ತಿ-ಪಾಸ್ತಿಗೆ ನಷ್ಟವುಂಟು ಮಾಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.  ಈ ಸಂದರ್ಭದಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್, ಉತ್ತರ ವಿಭಾಗದ  ಡಿಸಿಪಿ ಸುರೇಶ್ ಹಾಗೂ ಹಿರಿಯ-ಕಿರಿಯ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
-ಈ ಸಂಜೆ

Write A Comment