ಕರ್ನಾಟಕ

ಶಾಸಕರು-ಸಚಿವರು-ಪ್ರಭಾವಿಗಳ ಒತ್ತುವರಿ ಬಚ್ಚಿಡಲಾಗುತ್ತಿದೆ: ಎಚ್.ಎಸ್.ದೊರೆಸ್ವಾಮಿ ಆರೋಪ

Pinterest LinkedIn Tumblr

pro

ಬೆಂಗಳೂರು, ಮೇ 2: ಸರ್ಕಾರಿ ಭೂ ಒತ್ತುವರಿ ಮಾಡಿರುವ ಚಿಕ್ಕಪುಟ್ಟ ಪ್ರಕರಣಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆಯೇ ಹೊರತು ಶಾಸಕರು, ಸಚಿವರು, ಪ್ರಭಾವಿಗಳು ಮಾಡಿರುವ ಒತ್ತುವರಿಯನ್ನು ಬಚ್ಚಿಡಲಾಗುತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆರೋಪಿಸಿದರು.

ಭೂ ಕಬಳಿಕೆ ವಿರೋಧಿ ಆಂದೋಲನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರ್ಯಾ ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ತಿ ಒತ್ತುವರಿ ಪ್ರಕರಣಗಳಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ತೃಪ್ತಿಕರವಾಗಿಲ್ಲ.
ಕಾರ್ಯಾಚರಣೆ ಇದೇ ರೀತಿ ನಡೆದರೆ ಇನ್ನೂ 100 ವರ್ಷವಾದರೂ ಸರ್ಕಾರಿ ಒತ್ತುವರಿ ಭೂಮಿಯನ್ನು ವಶಪಡಿಸಿಕೊಳ್ಳಲು ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಎಕರೆ, ಎರಡು ಎಕರೆ ಭೂ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. 50, 100 ಎಕರೆಯಂತಹ ಭಾರಿ ಒತ್ತುವರಿದಾರರಿಗೆ ರಕ್ಷಣೆ ನೀಡಲಾಗುತ್ತಿದೆ. ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರುಗಳ ಭೂ ಒತ್ತುವರಿಯ ಮಾಹಿತಿ ಪಟ್ಟಿ ಸರ್ಕಾರದ ಬಳಿ ಇದೆ. ಅದನ್ನು ಬಹಿರಂಗೊಳಿಸದೆ ಮುಚ್ಚಿಹಾಕಲಾಗಿದೆ. ಸಣ್ಣ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವ ಜತೆಯಲ್ಲೇ ಭಾರಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಬಚ್ಚಿಟ್ಟಿರುವ ಪಟ್ಟಿಯನ್ನು ತಕ್ಷಣವೇ ಪ್ರಕಟಿಸಬೇಕೆಂದು ಆವರು ಆಗ್ರಹಿಸಿದರು.

ನ್ಯಾಯಾಲಯಗಳು ಪ್ರತಿ ದಿನವೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಶ್ರೀಮಂತರಿಗೆ ಒಂದು ನ್ಯಾಯ , ಬಡವರಿಗೆ ಒಂದು ನ್ಯಾಯ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಎಲ್ಲರಿಗೂ ಏಕರೂಪ ನೀತಿ ಇರಬೇಕು. ಪ್ರಭಾವಿಗಳನ್ನು ರಕ್ಷಣೆ ಮಾಡಬಾರದು ಎಂದರು.

ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ತಪ್ಪುಗಳು ನಡೆದಿವೆ ಎಂದು ಸಹಕಾರ ಸಚಿವರು ಒಪ್ಪಿಕೊಳ್ಳುತ್ತಾರೆ. ಆದರೆ, ಕ್ರಮ ಕೈಗೊಳ್ಳಲು ಹೆದರುತ್ತಿದ್ದಾರೆ. ಏಕೆಂದರೆ ಪ್ರಭಾವಿ ಸಚಿವರೊಬ್ಬರು ಈ ಹಗರಣದಲ್ಲಿರುವುದರಿಂದ ಸಹಕಾರ ಸಚಿವರು ಕ್ರಮಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ. ಹೆಂಡದ ದೊರೆ ಖೋಡೆ ಕುಟುಂಬದ ಭೂ ಕಬಳಿಕೆ ವಿರುದ್ಧವೂ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ನಾವು ಅನಿವಾರ್ಯವಾಗಿ ಲೋಕಾಯುಕ್ತಕ್ಕೆ ಇಂದು ದೂರು ನೀಡುತ್ತಿದ್ದೇವೆ ಎಂದು ಹೇಳಿದರು.

ಒತ್ತುವರಿ ತೆರವಿಗಾಗಿ ಈಗ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಲೋಪದೋಷಗಳಿವೆ. ಆಚಾರ್ಯ ಪಾಠಶಾಲೆ ಭೂಕಬಳಿಕೆ ವಿರುದ್ಧ ಕ್ರಮ ಕೈಗೊಂಡು ಗೋಡೆಯನ್ನು ಒಡೆದು ಹಾಕಲಾಗಿದೆ. ಇದನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದೆ. ತಡೆಯಾಜ್ಞೆಯ ನಂತರ ಮತ್ತೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ನೆಪಮಾತ್ರಕ್ಕೆ ಕಾರ್ಯಾಚರಣೆ ನಡೆಸಿ ಮತ್ತೆ ಅದೇ ಭೂಮಿಯನ್ನು ಅನುಭೋಗದಲ್ಲಿ ಮುಂದುವರೆಯಲು ಅಧಿಕಾರಿಗಳು ಅವಕಾಶ ಕೊಡುತ್ತಿದ್ದಾರೆ ಎಂದು ದೊರೆಸ್ವಾಮಿ ಆರೋಪಿಸಿದರು.

ಈ ನೀತಿಗಳು ಸರಿಯಲ್ಲ. ಒತ್ತುವರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತೆರವಾದ ಭೂಮಿಯನ್ನು ತಲಾ 5 ಎಕರೆಯಂತೆ ಬಡವರು ಹಾಗೂ ರೈತರಿಗೆ ಹಂಚಬೇಕು. ಮತ್ತೆ ಈ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವಂತಿಲ್ಲ ಎಂಬ ಷರತ್ತು ರಚಿಸಬೇಕು ಎಂದು ಕಂದಾಯ ಸಚಿವರಿಗೆ ಸಲಹೆ ನೀಡಿದ್ದೇನೆ. ಅವರು ಕೂಡ ಇದನ್ನು ಒಪ್ಪುತ್ತಾರೆ. ಆದರೆ, ಪ್ರಭಾವಿಗಳ ಹಸ್ತಕ್ಷೇಪವಿರುವುದರಿಂದ ನಿರ್ಧಾರ ತೆಗೆದುಕೊಳ್ಳಲು ಹೆದರುತ್ತಾರೆ ಎಂದರು.

ಸ್ಮಶಾನ, ಕೆರೆ, ಸಾರ್ವಜನಿಕ ಸ್ಥಳಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ದೊರೆಸ್ವಾಮಿ ಆಗ್ರಹಿಸಿದರು. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಮಾತನಾಡಿ, ಒತ್ತುವರಿ ತೆರವು ಸರ್ಕಾರಕ್ಕೆ ಸವಾಲಾಗಿದೆ. ಅಧಿಕಾರದಲ್ಲಿರುವ ಸರ್ಕಾರದ ಜನಪ್ರತಿನಿಧಿಗಳು ತಮ್ಮ ಮನೆಯ ಆಸ್ತಿ ಒತ್ತುವರಿಯಾಗಿದ್ದರೆ ಹೀಗೇ ಕಣ್ಣುಮುಚ್ಚಿ ನೋಡುತ್ತಾ ಇರುತ್ತಿದ್ದರೆ ? ಸಾರ್ವಜನಿಕರು ಪ್ರತಿಭಟನೆ ನಡೆಸಿ ಸರ್ಕಾರಿ ಆಸ್ತಿಯನ್ನು ವಶಪಡಿಸಿಕೊಳ್ಳಿ ಎಂದರೆ ಆಡಳಿತ ನಡೆಸುವವರು ಯಾವುದೇ ಅರಿವಿಲ್ಲದಂತೆ ಇದ್ದಾರೆ. ಇದು ಸರಿಯಲ್ಲ ಎಂದರು. ಎ.ಟಿ.ರಾಮಸ್ವಾಮಿ ಅವರ ವರದಿ ಅನುಷ್ಠಾನಕ್ಕೆ ಬಂದಿಲ್ಲ. 2011ರಲ್ಲಿ ಗಣಿ ಹಗರಣ ಕುರಿತು ನಾನು ನೀಡಿದ ವರದಿಯೂ ಜಾರಿಗೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಾಯುಕ್ತ ಸಂಸ್ಥೆಯಲ್ಲಿ ನಾನು ಕೆಲಸ ಮಾಡಿದ್ದರಿಂದ ಇಂದು ನಾನು ಲೋಕಾಯುಕ್ತಕ್ಕೆ ಹೋಗುವುದಿಲ್ಲ. ಎ.ಟಿ.ರಾಮಸ್ವಾಮಿಯವರು ದೂರು ನೀಡಲಿದ್ದಾರೆ. ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದರು. ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿ, ಭ್ರಷ್ಟರು, ಅಕ್ರಮ ಮಾಡುವವರು ಸರ್ಕಾರದಲ್ಲಿದ್ದಾರೆ. ಅವರ ವಿರುದ್ಧ ಹೋರಾಟ ನಿರಂತರವಾಗಿರಬೇಕು ಎಂದರು. ಆನಂದರಾವ್ ವೃತ್ತದಿಂದ ಲೋಕಾಯುಕ್ತ ಸಂಸ್ಥೆವರೆಗೂ ಪಾದಯಾತ್ರೆ ನಡೆಸಿ ನಂತರ ಲೋಕಾಯುಕ್ತರಿಗೆ ದೂರು ನೀಡಲಾಯಿತು. ಶಿವರಾಮೇಗೌಡ, ಎ.ಟಿ.ರಾಮಸ್ವಾಮಿ, ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ಚಲನಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ಪರಿಸರ ತಜ್ಞ ಯಲ್ಲಪ್ಪರೆಡ್ಡಿ, ದಲಿತ ಮುಖಂಡರಾದ ವೆಂಕಟಸ್ವಾಮಿ, ವಿ.ನಾಗರಾಜ್ ಮತ್ತಿರರರು ಪಾದಯಾತ್ರೆಯಲ್ಲಿದ್ದರು.

Write A Comment