ನವದೆಹಲಿ, ಮೇ 2: ಪ್ರಧಾನಿ ನರೇಂದ್ರ ಮೋದಿ , ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಎನ್‌ಡಿಎ ಸರ್ಕಾರದ ಮಾಜಿ ಸಚಿವ ಅರುಣ್ ಶೌರಿ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸಿದೆ.
ಮೋದಿ ಸರ್ಕಾರದ ಆರ್ಥಿಕ ನೀತಿಗಳು ದಿಕ್ಕು ತಪ್ಪಿವೆ ಎಂದು ಟೀಕಿಸಿದ್ದ ಅರುಣ್ ಶೌರಿ, ಪಕ್ಷಾಧ್ಯಕ್ಷ ಅಮಿತ್ ಷಾ ಅವರ ವಿರುದ್ಧವೂ ಹರಿಹಾಯ್ದಿದ್ದರು. ಘರ್ ವಾಪಸಿಯಂತಹ ಚಟುವಟಿಕೆಗಳಲ್ಲಿ ತೊಡಗಿರುವ ಸಂಘ ಪರಿವಾರ ಹಾಗೂ ಪಕ್ಷದ ನಾಯಕರ ಬಗ್ಗೆ ಮೋದಿ ತಾಳಿರುವ ದಿವ್ಯ ಮೌನ ದೇಶದಲ್ಲಿ ಕೋಮು ಸಾಮರಸ್ಯ ಕದಡುವುದಾಗಿದೆ. ದೇಶದಲ್ಲಿ ಈ ರೀತಿ ಘಟನೆಗಳು ನಡೆಯಬಾರದು. ಅಮಿತ್ ಷಾ ಅವರಂತಹ ನಾಯಕರು ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಅದರೆ ಪ್ರಧಾನಿ ಮೋದಿ ಮಾತ್ರ ಈ ಬಗ್ಗೆ ಬಾಯ್ಬಿಟ್ಟಿಲ್ಲ ಎಂದು ಶೌರಿ ಖಂಡಿಸಿದ್ದಾರೆ.
ಬರುವ ಮೇ 26ರಂದು ಒಂದು ವರ್ಷ ಪೂರೈಸಿದ ಸಂಭ್ರಮಾಚರಣೆಯ ಸಿದ್ದತೆಯಲ್ಲಿರುವಾಗಲೇ ಅರುಣ್ ಶೌರಿಯಂತಹ ಪಕ್ಷದ ಹಿರಿಯ ನಾಯಕರೊಬ್ಬರು ಈ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿರುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರೀ ಇರುಸು ಮುರಿಸು ಉಂಟಾಗಿದೆ.
ಪ್ರಮುಖವಾಗಿ ಮೋದಿ ಸರ್ಕಾರದ ಆರ್ಥಿಕ ನೀತಿಗಳು ದಿಕ್ಕು ತಪ್ಪಿ ಸಾಗುತ್ತಿವೆ ಎಂದು ಹೇಳಿರುವುದು ಪಕ್ಷ ಮತ್ತು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್ ಬೆಂಬಲ: ಅರುಣ್ ಶೌರಿ ಅವರ ಹೇಳಿಕೆಯನ್ನು ಬೆಂಬಲಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜಿವಾಲಾ ಅವರು, ಮೋದಿಯವರ ಸರ್ವಾಧಿಕಾರಿ ಧೋರಣೆಯನ್ನು ಅರುಣ್ ಶೌರಿ ಖಚಿತಗೊಳಿಸಿದ್ದಾರೆ ಎಂದು ಹೇಳಿದ್ದಾರೆ.