ರಾಷ್ಟ್ರೀಯ

ದಾವೂದ್ ಶರಣಾಗಲು ಸಿದ್ದನಾಗಿದ್ದ !

Pinterest LinkedIn Tumblr

11Fir14.qxp

ನವದೆಹಲಿ, ಮೇ.2: ಕಳೆದ 1993ರ ಮುಂಬೈ ಸರಣಿ ಸ್ಫೋಟದ 15 ತಿಂಗಳ ನಂತರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಶರಣಾಗಲು ಸಿದ್ದನಾಗಿದ್ದ ಎಂದು ಸಿಬಿಐನ ಮಾಜಿ ಡಿಐಜಿ ನೀರಜ್ ಕುಮಾರ್ ಇಂದಿಲ್ಲಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತಂತೆ ನೀರಜ್ ಕುಮಾರ್ ಅವರಿಗೆ ಮೂರು ಬಾರಿ ಕರೆ ಮಾಡಿ ಸದ್ಯದಲ್ಲಿಯೇ ಶರಣಾಗುತ್ತೇನೆ ಎಂದು ಹೇಳಿದ್ದ. ಆದರೆ ಸಿಬಿಐ ಕಾರಣಾಂತರಗಳಿಂದ ಇದನ್ನು ತಳ್ಳಿಹಾಕಿತ್ತು ಎಂದು ಹೇಳಿದ್ದಾರೆ. 1994ರ ಜೂನ್‌ನಲ್ಲಿ ದಾವೂದ್ ಜೊತೆ ನಾನು ಮಾತನಾಡುವಾಗ ಆತ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ದಂತಿತ್ತು. ಭಾರತಕ್ಕೆ ಮರಳಿದರೆ ಎದುರಾಳಿ ಗ್ಯಾಂಗ್‌ನವರು ತನ್ನನ್ನು ಮುಗಿಸಲು ಪ್ರಯತ್ನ ನಡೆಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದ . ಆದರೆ ಸಿಬಿಐ ನಿನಗೆ ರಕ್ಷಣೆ ಕೊಡುತ್ತದೆ ಎಂಬ ಭರವಸೆಯನ್ನು ಕೂಡ ನೀಡಿತ್ತು. ಎಂದು ಸುದ್ದಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಎರಡು ದಶಕಗಳ ಹಿಂದಿನ ಘಟನೆಯನ್ನು ನೀರಜ್ ಕುಮಾರ್ ಬಹಿರಂಗಪಡಿಸಿದ್ದಾರೆ.

ತನ್ನ ವೈರಿ ಗ್ಯಾಂಗ್‌ಸ್ಟರ್‌ಗಳು ಯಾವುದೆ ಸಂದರ್ಭದಲ್ಲೂ ತನ್ನನ್ನು ಕೊಲ್ಲಬಹುದು. ಇದರಿಂದ ಬಚಾವ್ ಆಗಲು ಬಂಧನವೊಂದೇ ದಾರಿ ಎಂದು ಅರಿತಿದ್ದ ಎಂದು ಹೇಳಿದ್ದಾರೆ. ನಾನು ದಾವೂದ್‌ಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ಅವರು ಆತನೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದೆಂದು ಸೂಚನೆ ನೀಡಿದ್ದರು ಎಂದು ತಿಳಿಸಿದ್ದಾರೆ. ಇಂತಹುದೇ ಮಾಹಿತಿಯನ್ನು ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ನೀಡಿದ್ದು, ಮುಂಬೈನ ಪೊಲೀಸರು ತನಗೆ ಹಿಂಸೆ ನೀಡುವುದಿಲ್ಲ ಎಂದು ಖಾತರಿ ಪಡಿಸಿದರೆ ಶರಣಾಗುತ್ತೇನೆ ಎಂದು ದಾವೂದ್ ಹೇಳಿದ್ದನಂತೆ. ಸಿಬಿಐನ ಸಾಕಷ್ಟು ತನಿಖೆಯ ನೇತೃತ್ವ ವಹಿಸಿದ್ದ ನೀರಜ್‌ಕುಮಾರ್ ಪ್ರಸ್ತುತ ದಾವೂದ್ ಕುರಿತಂತೆ ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ.

Write A Comment