ಕರ್ನಾಟಕ

ಬಿಬಿಎಂಪಿ ವಿಭಜನೆ ತುರ್ತು ಅಧಿವೇಶನ : ನಾಳೆ ಜೆಡಿಎಸ್ ನಿಲುವು ಪ್ರಕಟ

Pinterest LinkedIn Tumblr

jds

ಬೆಂಗಳೂರು, ಏ.19- ಬೃಹತ್ ಬೆಂಗಳೂರು ಮಹಾನಗರ ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜನೆ ಮಾಡುವ ಸಂಬಂಧ ನಾಳೆ ಕರೆದಿರುವ ವಿಶೇಷ ಅಧಿವೇಶನದಲ್ಲಿ ಪಕ್ಷದ ನಿಲುವು ಪ್ರಕಟಿಸಲು ಜೆಡಿಎಸ್ ತುರ್ತು ಶಾಸಕಾಂಗ ಸಭೆ ಕರೆದಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಕಚೇರಿಯಲ್ಲಿ ಸಭೆ ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ಈ ಶಾಸಕಾಂಗ ಸಭೆಯಲ್ಲಿ ವಿಧಾನಸಭೆಯ 40 ಶಾಸಕರು ಹಾಗೂ

ವಿಧಾನ ಪರಿಷತ್‌ನ 12 ಮಂದಿ ಸದಸ್ಯರು ಕಡ್ಡಾಯವಾಗಿ ಪಾಲ್ಗೊಳ್ಳಲೇಬೇಕೆಂದು ಕುಮಾರಸ್ವಾಮಿ ಪತ್ರ ಮುಖೇನ ಸೂಚನೆ ನೀಡಿದ್ದಾರೆ.  ಕಲಾಪದಲ್ಲಿ ಪಕ್ಷ ಭಾಗವಹಿಸಬೇಕೆ ಇಲ್ಲವೆ ಬಹಿಷ್ಕಾರ ಮಾಡಬೇಕೆ ಎಂಬ ನಿಲುವನ್ನು ನಾಳೆ ಕುಮಾರಸ್ವಾಮಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಈಗಾಗಲೇ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಲಾಪ ಬಹಿಷ್ಕರಿಸುವಂತೆ ಶಾಸಕರಿಗೆ ಸೂಚನೆ ಕೊಟ್ಟಿದ್ದಾರೆ. ಗೌಡರ ಅಭಿಪ್ರಾಯವನ್ನೇ ಪುಷ್ಟೀಕರಿಸುವಂತೆ ನಾವು ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ಕುಮಾರಸ್ವಾಮಿ ಕೂಡ ಸ್ಪಷ್ಟಪಡಿಸಿದ್ದಾರೆ.

ಆದರೂ ಕೆಲವು ಶಾಸಕು ಕಲಾಪದಲ್ಲಿ ಪಾಲ್ಗೊಂಡು ಸರ್ಕಾರವನ್ನು ಸದನದಲ್ಲಿ ತರಾಟೆಗೆ ತೆಗೆದುಕೊಳ್ಳಬೇಕು. ಬಹಿಷ್ಕಾರ ಮಾಡುವ ನಿರ್ಧಾರವನ್ನು ಕೈ ಬಿಡಬೇಕೆಂದು  ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದ್ದಾರೆ. ಅಂತಿಮವಾಗಿ ನಾಳೆ ಶಾಸಕಾಂಗ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಕುಮಾರಸ್ವಾಮಿ 10 ಗಂಟೆಯೊಳಗೆ ಅಧಿಕೃತ ನಿಲುವು ಪ್ರಕಟಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇತ್ತ ವಿಧಾನಮಂಡಲದ ಉಭಯ ಸದನಗಳ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ ಸದನವನ್ನು ಬಹಿಷ್ಕಾರ ಮಾಡದಂತೆ ಜೆಡಿಎಸ್ ಮನವೊಲಿಸಿದೆ.  ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಮುಖಂಡ ಆರ್.ಅಶೋಕ್ ಕೂಡ ಕುಮಾರಸ್ವಾಮಿ ಮನವೊಲಿಸಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಕೊನೆ ಕ್ಷಣದವರೆಗೂ ಮನವಿ ಮಾಡಲು ಮುಂದಾಗಿದ್ದಾರೆ.

ಶಾಸಕರ ಒಟ್ಟಾರೆ ಅಭಿಪ್ರಾಯದಂತೆ ತುರ್ತು ಅಧಿವೇಶನದಲ್ಲಿ ಭಾಗವಹಿಸಬೇಕೆ ಇಲ್ಲವೆ ಬೇಡವೆ ಎಂಬುದು ನಾಳೆ ತಿಳಿಯಲಿದೆ.

Write A Comment