ಕನ್ನಡ ವಾರ್ತೆಗಳು

ಬೇಸಿಗೆ ರೋಗಗಳ ಬಗ್ಗೆ ಎಚ್ಚರವಿರಲಿ

Pinterest LinkedIn Tumblr

charma

* ಪ.ನಾ.ಹಳ್ಳಿ.ಹರೀಶ್ ಕುಮಾರ್

ಬೇಸಿಗೆ ಕಾಲ ಬಂತೆಂದರೆ ಗಂಭೀರ ಸ್ವರೂಪದ ಕಾಯಿಲೆಗಳು ಜನರನ್ನು ಕಾಡಲು ಪ್ರಾರಂಭಿಸುತ್ತವೆ. ಅಲ್ಲದೆ ಬೇಸಿಗೆಗಾಲದಲ್ಲಿ ಮನೆಯಿಂದ ಹೊರಗೆಲ್ಲೂ ಹೋಗದಂತೆ ಮಾಡುತ್ತದೆ. ಇಂತಹ ಕಾಯಿಲೆಗಳ ಬಗ್ಗೆ ಎಚ್ಚರಿಕೆಯಿಂದರಬೇಕಾದುದು ಅಗತ್ಯ.

ಬೇಸಿಗೆಯಲ್ಲಿ ನಿಮ್ಮನ್ನು ನಿತ್ರಾಣಗೊಳಿಸುವ ಹತ್ತಾರು ಕಾಯಿಲೆಗಳಿದ್ದು ಅವುಗಳಲ್ಲಿ ಕೆಲವನ್ನು ಮುಂಜಾಗರೂಕತೆ ತೆಗೆದುಕೊಂಡು ತಡೆಗಟ್ಟಬಹುದಾಗಿದೆ. ಉರಿಬಿಸಿಲಿನ ತಾಪವನ್ನು ತಣಿಸುವ ಹಲವಾರು ಹಣ್ಣುಗಳನ್ನು ದಿನನಿತ್ಯ ಸೇವಿಸುವುದರಿಂದ ಬೇಸಿಗೆಯ ಕಾಯಿಲೆಗಳಿಗೆ ಕಾರಣವಾದ ವೈರಸ್ ಹಾಗೂ ಬ್ಯಾಕ್ಟೀರಿಯಾಗಳೂ ಸುಲಭವಾಗಿ ನಮ್ಮ ದೇಹವನ್ನು ಸೇರಿಕೊಳ್ಳುತ್ತವೆ. ಅಲ್ಲದೆ ತಂಪು ಪಾನೀಯಗಳ ಮೂಲಕವೂ ಸುಲಭವಾಗಿ ಅನೇಕ ರೋಗಾಣುಗಳು ನಿಮ್ಮ ದೇಹವನ್ನು ಹೊಕ್ಕಿ ರೋಗಗಳನ್ನು ಉಂಟುಮಾಡುತ್ತವೆ.

ಈ ರೋಗಾಣುಗಳು ಪ್ರಾರಂಭದಲ್ಲಿ ಕಡಿಮೆಮಟ್ಟದಲ್ಲಿ ಸೋಂಕುಗಳನ್ನು ಉಂಟು ಮಾಡುತ್ತವೆಯಾದರೂ ನಂತರ ನಿಧಾನವಾಗಿ ಗಂಭೀರ ಸ್ವರೂಪದ ಕಾಯಿಲೆಗಳನ್ನು ಉಂಟುಮಾಡುತ್ತವೆ. ಪ್ರಾರಂಭದಲ್ಲಿ ಕೇವಲ ಶೀತ, ನೆಗಡಿ, ಫ್ಲೂಗಳಂತಹ ರೋಗಗಳ ಲಕ್ಷಣಗಳು ಕಂಡುಬರುತ್ತವೆಯಾದರೂ ನಂತರದ ದಿನಗಳಲ್ಲಿ ರೋಗವು ಉಲ್ಬಣಿಸುತ್ತಾ ಸಾಗಿ ವಿಷಮ ಸ್ವರೂಪವನ್ನು ಪಡೆದುಕೊಳ್ಳುತ್ತದೆ.

ಹೀಟ್ ಸ್ಟ್ರೋಕ್: ಪ್ರಮುಖವಾದ ಕಾಯಿಲೆಗಳ ಪೈಕಿ ‘ಹೀಟ್ ಸ್ಟ್ರೋಕ್’ ಅಥವಾ ಬಿಸಿಲ ಧಗೆಯ ಹೊಡೆತವೂ ಒಂದು. ಇದು ಬೇಸಿಗೆಯಲ್ಲಿ ಪ್ರತಿಯೊಬ್ಬರನ್ನೂ ಕಾಡುವ ಕಾಯಿಲೆಯಾಗಿದ್ದು ಕಡೆಗಣಿಸಿದಲ್ಲಿ ಮಾರಣಾಂತಿಕವಾಗಿಯೂ ಕಾಡುತ್ತದೆ. ಹೀಟ್ ಸ್ಟ್ರೋಕ್‌ಗೆ ಪ್ರಮುಖ ಕಾರಣವೆಂದರೆ ವ್ಯಕ್ತಿಯು ದೀರ್ಘಕಾಲದವರೆಗೆ ಉರಿಬಿಸಿಲಿನಲ್ಲಿ ಕಾಲಕಳೆಯುವುದು. ಹೀಗಾದಾಗ ದೇಹದ ಉಷ್ಣತೆಯಲ್ಲಿ ಇದ್ದಕ್ಕಿಂದ್ದಂತೆ ಗಣನೀಯ ಪ್ರಮಾಣದಲ್ಲಿ ಏರಿಕೆಯುಂಟಾಗುವುದಲ್ಲದೇ ತಲೆನೋವು, ವಾಂತಿ, ತಲೆ ಸುತ್ತು, ವಾಕರಿಕೆ, ತಲೆ ತಿರುಗಿ ಬೀಳುವುದು ಕಂಡುಬರುತ್ತವೆ. ಇದರಿಂದ ಬಚಾವಾಗಲು ಬಿಸಿಲಿನಿಂದ ದೂರವುಳಿಯುವುದೊಂದೇ ದಾರಿ. ಬಿಸಿಲಿನಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಬಂದಲ್ಲಿ ತಲೆ ಹಾಗೂ ಮುಖದ ಭಾಗವನ್ನು ಮುಚ್ಚಿಕೊಳ್ಳುವುದರ ಮೂಲಕ ಬಿಸಿಲಿಗೆ ದೇಹವನ್ನು ತೆರೆದಿಡದಂತೆ ನಿಗಾವಹಿಸುವುದು ಬಹು ಮುಖ್ಯವಾಗಿದೆ. ಅಲ್ಲದೆ ಹೆಚ್ಚುಹೆಚ್ಚು ನೀರು ಹಾಗೂ ನೀರಿನಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ದೇಹವನ್ನು ಜಲಪೂರಣವಾಗಿರಿಸಿಕೊಳ್ಳುವುದು ಕೂಡ ಅವಶ್ಯ.

ಸಿಡುಬು: ಬೇಸಿಗೆಯಲ್ಲಿ ಕಂಡುಬರುವ ಅತಿ ಗಂಭೀರ ಸ್ವರೂಪದ ರೋಗವೆಂದರೆ ಸಿಡುಬು. ಮೈಮೇಲೆ ಉಂಟಾಗುವ ಉರಿಗುಳ್ಳೆಗಳು ಸಿಡುಬಿನ ಲಕ್ಷಣಗಳಾಗಿವೆ. ಕರಾವಳಿ ಭಾಗದ ಜನರನ್ನು ಕಾಡುವ ಮತ್ತೊಂದು ಕಾಯಿಲೆಯೆಂದರೆ ನೀರಿನಿಂದ ಉಂಟಾಗುವ ಕಾಮಾಲೆ.

ಇವಿಷ್ಟೇ ಅಲ್ಲದೇ ಸಾಮಾನ್ಯವಾಗಿ ನಾವು ಬೇಸಿಗೆಯಲ್ಲಿ ಕೆಲವೊಂದು ಎಚ್ಚರಿಕೆಯ ಅಂಶಗಳನ್ನು ಪಾಲಿಸಿದಲ್ಲಿ ಸಾಧಾರಣವಾಗಿ ಬೇಸಿಗೆಯಲ್ಲಿ ನಮ್ಮನ್ನು ಕಾಡಬಹುದಾದ ಸಣ್ಣಪುಟ್ಟ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಬೇಸಿಗೆಯಲ್ಲಿ ಧರಿಸುವ ಉಡುಪುಗಳು ಸಡಿಲವಾಗಿದ್ದು ಚರ್ಮಕ್ಕೆ ಅಂಟದಂತಿರಲಿ ಮತ್ತು ಸುಲಭವಾಗಿ ಗಾಳಿಯು ಸುಳಿದಾಡುವಂತಿದ್ದರೆ ಚರ್ಮ ಸಂಬಂಧಿ ಕಾಯಿಲೆಗಳಿಂದ ನರಳುವುದು ತಪ್ಪ್ಪುತ್ತದೆ.

ಬೇಸಿಗೆಯಲ್ಲಿ ಆಹಾರವು ಬೇಗನೇ ಹಳಸುವ ಮೂಲಕ ವಿಷವಾಗಿ ಪರಿಣಮಿಸುವ ಸಂಭವ ಜಾಸ್ತಿ. ಆದ್ದರಿಂದ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ಗಳಲ್ಲಿಡಿ, ರೆಫ್ರಿಜರೇಟರ್ ಇಲ್ಲವಾದಲ್ಲಿ ಆಹಾರ ಪದಾರ್ಥಗಳಲ್ಲಿನ ಸೂಕ್ಷಾಣು ಜೀವಿಗಳ ಬೆಳವಣಿಗೆಯನ್ನು ನಿಯಂತ್ರಿಸಲು ಆಹಾರ ಪದಾರ್ಥವನ್ನು ಆಗಿಂದಾಗ್ಗೆ ಬಿಸಿ ಮಾಡುತ್ತಿರಿ. ಆಹಾರವನ್ನು ಸೇವಿಸುವ ಮುನ್ನ ಅದರಿಂದ ದುರ್ವಾಸನೆಯೇನೆ ಬರುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಿ, ಇಲ್ಲವಾದಲ್ಲಿ ಅಂತಹ ಆಹಾರ ಸೇವನೆಯು ಅತಿಸಾರ ಹಾಗೂ ವಾಂತಿಗೆ ಕಾರಣವಾಗಬಲ್ಲದು.

Write A Comment