ಬೆಂಗಳೂರು, ಏ.3-ಆರವತ್ತಾರು ಲಕ್ಷ ರೂ. ಹಣದೊಂದಿಗೆ ಇತ್ತೀಚೆಗೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಎಟಿಎಂಗೆ ತುಂಬಿಸುವ ಟಾಟಾ ಸುಮೋ ವಾಹನ ಮೈಸೂರಿನ ಜೆ.ಪಿ.ನಗರದಲ್ಲಿ ಪತ್ತೆಯಾಗಿದೆ. ಅದರಲ್ಲಿ ಡಬಲ್ ಬ್ಯಾರೆಲ್ ಬಂದೂಕು ಮತ್ತು ಖಾಲಿಪೆಟ್ಟಿಗೆ ಕೂಡ ಹಾಗೆಯೇ ಇದೆ..! ಸಿ.ಟಿ.ಮಾರ್ಕೆಟ್ ಬಳಿ ಇತ್ತೀಚೆಗೆ ಇಂಡಿಯನ್ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ಗಳ ಎಟಿಎಂಗೆ ಹಣ ತುಂಬಲು ಗುತ್ತಿಗೆ ನೀಡಲಾಗಿದ್ದ ಕಂಪನಿಯ ಚಾಲಕ ಜೇಮ್ಸ್, ಸೆಕ್ಯೂರಿಟಿ ಗಾರ್ಡ್ ಹಾಗೂ ಸಿಬ್ಬಂದಿಯ ಕಣ್ತಪ್ಪಿಸಿ ವಾಹನದೊಂದಿಗೆ ಪರಾರಿಯಾಗಿದ್ದ.
ತೀವ್ರ ಶೋಧನೆ ಕಾರ್ಯ ಕೈಗೊಂಡ ಪೊಲೀಸರಿಗೆ ಮೈಸೂರಿನ ಜೆ.ಪಿ.ನಗರದ ಬಳಿ ಇಂದು ಮುಂಜಾನೆ ವಾಹನ ಪತ್ತೆಯಾಗಿದೆ. ಅದರಲ್ಲಿ ಇದ್ದಂತಹ ಹಣ ಇಡುವಪೆಟ್ಟಿಗೆ ಹಾಗೆಯೇ ಇದ್ದು, ಅದರಲ್ಲಿ ಕಾಂಚಾಣ ಮಾಯವಾಗಿದೆ.
ಪ್ರಸ್ತುತ ಹಣ ಲಪಟಾಯಿಸಿ ತಲೆ ಮರೆಸಿಕೊಂಡಿರುವ ಜೇಮ್ಸ್ ಪತ್ತೆಗೆ ಪೊಲೀಸರು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಆತನ ಚಹರೆ ಇಟ್ಟುಕೊಂಡು ಹುಡುಕಾಟ ನಡೆಸಿದ್ದಾರೆ. ಮೂಲಗಳ ಪ್ರಕಾರ ಕಾಣೆಯಾದ ವಾಹನದ ಪೆಟ್ಟಿಗೆಯಲ್ಲಿ 66 ಲಕ್ಷ ರೂ. ನಗದು ಇತ್ತು ಎಂದು ಬ್ಯಾಂಕಿನ ವ್ಯವಸ್ಥಾಪಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.