ಬೆಂಗಳೂರು: ದೈನಂದಿನ ಆಡಳಿತ ನಿರ್ವಹಣೆ ಹಾಗೂ ಯೋಜನೆಗಳ ಮೇಲುಸ್ತುವಾರಿಗೆ ರಾಜ್ಯದಾದ್ಯಂತ ಸಂಪರ್ಕವುಳ್ಳ ಭೌಗೋಳಿಕ ಮಾಹಿತಿ ವ್ಯವಸ್ಥೆಯ (ಜಿಐಎಸ್) ಅಂತರ್ಜಾಲ ತಾಣ (ಪೋರ್ಟಲ್) ಸ್ಥಾಪಿಸಲಾಗುವುದು ಎಂದು ರಾಜ್ಯಪಾಲ ವಜುಭಾಯಿ ವಾಲಾ ಪ್ರಕಟಿಸಿದರು.
ಸೋಮವಾರ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ‘ಇದು ಆಡಳಿತ ನಿರ್ವಹಣೆಗೆ ಸಂಬಂಧಪಟ್ಟಂತೆ ದೇಶದ ಮೊದಲ ಜಿಐಎಸ್ ಪೋರ್ಟಲ್ ಆಗಲಿದೆ’ ಎಂದರು.
ನೂತನ ಮಾಹಿತಿ ತಂತ್ರಜ್ಞಾನ ನೀತಿಯಂತೆ ಐದು ಲಕ್ಷದಿಂದ 25 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಿಗೆ ಮಾಹಿತಿ ತಂತ್ರಜ್ಞಾನವನ್ನು ತಲುಪಿಸುವ ಪ್ರಯತ್ನ ಆರಂಭವಾಗಿದೆ. ಇದಕ್ಕಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೈ ಫೈ ಸೌಲಭ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ. ಉದ್ದಿಮೆಗಳ ಸ್ಥಾಪನೆಗೆ ಪೂರಕವಾಗಿ ‘ಇನ್‌ಕ್ಯುಬೇಷನ್’ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
ಮುಖ್ಯಾಂಶಗಳು
* ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಮತ್ತು ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ. ಸರ್ಕಾರಿ ಜಮೀನುಗಳ ಒತ್ತುವರಿ ನಿಷೇಧ ಕಾಯ್ದೆ–2011ರ ಅಡಿಯಲ್ಲಿ ಒತ್ತುವರಿ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಪ್ರಕ್ರಿಯೆ.
* ತೆರಿಗೆ ವರಮಾನದಲ್ಲಿ ಏರಿಕೆ. 2014ರ ನವೆಂಬರ್‌ವರೆಗೆ ₹ 26,847 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇ 16.15ರಷ್ಟು ಪ್ರಗತಿ.
* ಅಬಕಾರಿ ಮೂಲಕ ನವೆಂಬರ್ ಅಂತ್ಯಕ್ಕೆ ₹ 8,825 ಕೋಟಿ ವರಮಾನ ಸಂಗ್ರಹ. ಇದು ಕಳೆದ ವರ್ಷಕ್ಕಿಂತ ಶೇ 8.43ರಷ್ಟು ಹೆಚ್ಚು.
* ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮ. ಕೋಮು ಸೌಹಾರ್ದ ಕಾಪಾಡುವಲ್ಲಿ ಸರ್ಕಾರ ಯಶಸ್ವಿ.
* ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ಎಲ್ಲ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಗಳ ನಿಗದಿ. ಬೆಂಗಳೂರಿನಲ್ಲಿ ಹೆಚ್ಚುವರಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ.
* ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಬಾಧಿತವಾಗಿರುವ ಪ್ರದೇಶಗಳ ಪುನಶ್ಚೇತನಕ್ಕೆ ₹ 2 ಸಾವಿರ ಕೋಟಿ ಕ್ರಿಯಾ ಯೋಜನೆ.
* ಹೊಸ ಪ್ರವಾಸೋದ್ಯಮ ನೀತಿಯ ಭಾಗವಾಗಿ ‘ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮ’.
* ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 90 ಸಾವಿರ ಮಕ್ಕಳಿಗೆ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶ ಕೊಡಿಸಲಾಗಿದೆ.
* ಪ್ರಸಕ್ತ ಸಾಲಿನಲ್ಲಿ 4,017 ಬಾಲ ಕಾರ್ಮಿಕರನ್ನು ಗುರುತಿಸಿ, ಪುನರ್ವಸತಿ ಕಲ್ಪಿಸಲಾಗಿದೆ.
ಸಂಪ್ರದಾಯ ಮುರಿದರು
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ವಿಧಾನಸಭೆಗೆ ಬರುವ ರಾಜ್ಯಪಾಲರು ಆಡಳಿತ ಪಕ್ಷದ ಕಡೆಯಿಂದ ಸಭಾಧ್ಯಕ್ಷರ ಪೀಠ ಏರಿ ವಿರೋಧ ಪಕ್ಷದ ಕಡೆಯಿಂದ ಇಳಿದು ಹೋಗುವ ಸಂಪ್ರದಾಯವನ್ನು ಈವರೆಗೂ ಪಾಲಿಸಲಾಗುತ್ತಿತ್ತು. ಆದರೆ, ವಜುಭಾಯಿ ವಾಲಾ ಅವರು ಸೋಮವಾರ ಈ ಸಂಪ್ರದಾಯ ಪಾಲಿಸಲಿಲ್ಲ.
ವಿಧಾನಸೌಧಕ್ಕೆ ಬಂದ ರಾಜ್ಯಪಾಲರನ್ನು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಭಯ ಸದನಗಳ ಕಾರ್ಯದರ್ಶಿಗಳು ಸ್ವಾಗತಿಸಿದರು. ಪೊಲೀಸ್ ವಾದ್ಯ ವೃಂದದ ಸ್ವಾಗತದೊಂದಿಗೆ ಸದನ ಪ್ರವೇಶಿಸಿದ ರಾಜ್ಯಪಾಲರು ವಿರೋಧ ಪಕ್ಷದ ಕಡೆಯಿಂದಲೇ ಪೀಠ ಏರಿದರು. ಭಾಷಣ ಮುಗಿದ ಬಳಿಕ ಅದೇ ಭಾಗದಿಂದ ಕೆಳಕ್ಕೆ ಇಳಿದು ಹೊರಟುಹೋದರು.
ರಾಜ್ಯಪಾಲರ ನಿರ್ಗಮನದ ಬಳಿಕ ಸಚಿವರು, ಶಾಸಕರ ನಡುವೆ ಈ ಬಗ್ಗೆ ಸಣ್ಣ ಚರ್ಚೆಯೂ ನಡೆಯಿತು. ‘ಅವರಿಗೆ ಬಿಜೆಪಿಯವರ ಮೇಲೆ ಪ್ರೀತಿ ಜಾಸ್ತಿ. ಅದಕ್ಕಾಗಿ ನಮ್ಮ ಕಡೆ ಬರಲೇ ಇಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರನ್ನು ಉದ್ದೇಶಿಸಿ ಹೇಳಿದರು.
ಕನ್ನಡದಲ್ಲಿ ಆರಂಭ
‘ಎಲ್ಲರಿಗೂ ನಮಸ್ಕಾರ, ಹೊಸ ವರ್ಷದ ಶುಭಾಶಯಗಳು’ ಎನ್ನುವ ಮೂಲಕ ರಾಜ್ಯಪಾಲರು ಕನ್ನಡದಲ್ಲಿ ಭಾಷಣ ಆರಂಭಿಸಿ-ದರು. ನಂತರ ಹಿಂದಿಯಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತ-ನಾಡಿದರು.
ರಾಜ್ಯಪಾಲರ ಹಿಂದಿ ಭಾಷಣದ ಅನುವಾದವನ್ನು ಕನ್ನಡದಲ್ಲಿ ಮುದ್ರಿಸಲಾಗಿತ್ತು. ಆದರೆ, ಕನ್ನಡ ಪ್ರತಿಯ ತುಂಬಾ ‘ಕಸ್ಟಮ್ ಹೈರ್’, ‘ಓರಲ್ ಹೆಲ್ತ್’, ‘ಡೆಂಚರ್’, ‘ಮೆಮೊರಾಂಡಮ್’, ‘ಮೈನರ್ ಪೋರ್ಟ್ ಡೆವಲಪ್‌ಮೆಂಟ್ ಪಾಲಿಸಿ’ ಮುಂತಾದ ಇಂಗ್ಲಿಷ್ ಪದಗಳೇ ತುಂಬಿಕೊಂಡಿದ್ದವು.
ಮುನ್ನೋಟ ಇಲ್ಲ
ಸರ್ಕಾರವು ರಾಜ್ಯಪಾಲರಿಂದ ಮಾಡಿಸಿದ ಭಾಷಣದಲ್ಲಿ ದೂರದೃಷ್ಟಿ ಇಲ್ಲ. ಹಿಂದೆ ಏನು ಮಾಡಲಾಗಿದೆ ಎನ್ನುವ ವಿವರಣೆ ನೀಡಲಾಗಿದೆಯೇ ಹೊರತು ಮುಂದೆ ಏನು ಮಾಡಲಾಗುತ್ತದೆ ಎನ್ನುವ ಮಾಹಿತಿ ಇಲ್ಲ. ನೀತಿ, ನಿರೂಪಣೆ ಕುರಿತಂತೆ ಚಕಾರ ಎತ್ತಿಲ್ಲ. ಗೊತ್ತು–ಗುರಿ ಇಲ್ಲದ , ನಿರಾಶಾದಾಯಕ ಭಾಷಣ.
–ಜಗದೀಶ ಶೆಟ್ಟರ್, ವಿಧಾನಸಭೆ ವಿರೋಧ ಪಕ್ಷದ ನಾಯಕ
ಚರ್ಚೆಗೂ ಅಯೋಗ್ಯ
ಚರ್ಚೆಗೆ ಯೋಗ್ಯವಲ್ಲದ ಭಾಷಣ ಇದಾಗಿದೆ. ಕೊನೆಪಕ್ಷ ಜನ ನಂಬುವ ಸುಳ್ಳುಗಳನ್ನಾದರೂ ಹೇಳಿಸಬಹುದಿತ್ತು. ಅದರಲ್ಲೂ ಸರ್ಕಾರ ಸೋತಿದೆ. ಬದ್ಧತೆ ಕಾಣದಾಗಿದೆ. ದೂರದೃಷ್ಟಿ ಗೌಣವಾಗಿದೆ. ಈ ಭಾಷಣದಲ್ಲಿ ಉಪ್ಪೂ ಇಲ್ಲ, ಖಾರವೂ ಇಲ್ಲ.
–ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ನಾಯಕ
ಸುಳ್ಳು ಹೇಳಿಸಿದ ಸರ್ಕಾರ
ರಾಜ್ಯದಲ್ಲಿ ನಡೆದಿರುವ ಎಲ್ಲ ಬೆಳವಣಿಗೆ-ಗ-ಳನ್ನು ರಾಜ್ಯಪಾಲರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಂಥವರ ಬಾಯಿಯಿಂದಲೇ ಸರ್ಕಾರ ಸುಳ್ಳು ಹೇಳಿಸಿದೆ. ಅತ್ಯಾಚಾರ ಹೆಚ್ಚಾಗಿದ್ದರೂ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂದು ಹೇಳಿಸಲಾಗಿದೆ.
–ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
ವೈಫಲ್ಯಕ್ಕೆ ತೇಪೆ
ನಿರ್ಜೀವ ಸರ್ಕಾರದ ನೀರಸ ಭಾಷಣ. ನೀರಾವರಿ, ವಿದ್ಯುತ್, ಹಣಕಾಸು ಇಲಾಖೆಗಳ ವೈಫಲ್ಯ ಮುಚ್ಚಿಕೊಳ್ಳುವ ಯತ್ನ ಮಾಡಲಾಗಿದೆ. ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಮಾತೇ ಇಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಸ್ಪಷ್ಟ ದಿಸೆ ತೋರದ ಈ ಭಾಷಣದಿಂದ ನಿರಾಸೆಯಾಗಿದೆ.
– ಬಸವರಾಜ ಬೊಮ್ಮಾಯಿ, ಶಾಸಕ
ಬದ್ಧತೆ
ರಾಜ್ಯಪಾಲರು ಮಾಡಿರುವ ಭಾಷಣ ರಾಜ್ಯದ ವಸ್ತು ಸ್ಥಿತಿಯನ್ನು ಜನರ ಮುಂದಿರಿಸಿದೆ. ರಾಜ್ಯ ಸರ್ಕಾರದ ಜನಪರ ಕಾಳಜಿ ಮತ್ತು ಅಭಿವೃದ್ಧಿ ಪರವಾದ ಬದ್ಧತೆಯನ್ನು ಇದು ಬಿಂಬಿಸಿದೆ.
– ವಿ.ಎಸ್.ಉಗ್ರಪ್ಪ, ಶಾಸಕ