ಕರ್ನಾಟಕ

81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ: ‘ಸಮಾನ ಶಿಕ್ಷಣಕ್ಕೆ ಕನಿಷ್ಠ 50 ಸಾವಿರ ಸಹಿ ಸಂಗ್ರಹ’: ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ ಸಂಘಟನೆ

Pinterest LinkedIn Tumblr

pvec030215kssimv21

ಶ್ರವಣಬೆಳಗೊಳ: ಮಾತೃಭಾಷಾ ಮಾಧ್ಯಮವಿಲ್ಲದೆ, ಸಮಾನ ಶಿಕ್ಷಣ ನೀತಿ ಸಾಧ್ಯವಿಲ್ಲ. ಸಮಾನ ಶಿಕ್ಷಣ ನೀತಿ ಇಲ್ಲದೆ, ಮಾತೃ­ಭಾಷಾ ಮಾಧ್ಯಮ ಜಾರಿಗೆ ಬರುವುದು ಅಸಾಧ್ಯ. ಮಾತೃಭಾಷಾ ಮಾಧ್ಯಮ ಜಾರಿಗೆ ಬರದೇ ಕನ್ನಡ ಭಾಷೆಗೆ ಉಳಿಗಾಲವಿಲ್ಲ…

ಇಂತಹ ಘೋಷಣೆಗಳೊಂದಿಗೆ ‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ ಎಂಬ ಸಂಘಟನೆಯ ಕಾರ್ಯಕರ್ತರು ಕರಪತ್ರಗಳನ್ನು ಹಂಚುತ್ತಿದ್ದ ದೃಶ್ಯ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಡಾ.ಅ.ನ. ಕೃಷ್ಣರಾಯರ ಮಹಾ­ಮಂಟಪದ ಎದುರಿಗೆ ಕಂಡುಬಂತು.

ಸಹಿ ಸಂಗ್ರಹ: ಶಿಕ್ಷಣದಲ್ಲಿ ಮಾತೃಭಾಷೆ ಜಾರಿಗೆ ಒತ್ತಾಯಿಸಿ ಸಂಘಟನೆಯ ಕಾರ್ಯಕ­ರ್ತರು ಸಮ್ಮೇಳನದಲ್ಲಿ ‘ಸಹಿ ಸಂಗ್ರಹ ಅಭಿಯಾನ’ವನ್ನು ಕೂಡ ನಡೆಸು­ತ್ತಿದ್ದಾರೆ. ಸಾಹಿತ್ಯ ಜಾತ್ರೆಗೆ ಬಂದಿರುವ ಸಾಹಿತ್ಯಾಸಕ್ತರು, ಕಾರ್ಯಕರ್ತರ ಕರಪತ್ರ ಪಡೆಯುವುದರ ಜತೆಗೆ, ಅದರ ಮೇಲೆ ಕಣ್ಣಾಡಿಸಿ ಸಹಿ ಕೂಡ ಮಾಡುತ್ತಿದ್ದರು.

‘ಸಮ್ಮೇಳನದ ಮೂರು ದಿನವೂ ಮಾತೃಭಾಷಾ ಮಾಧ್ಯಮವನ್ನು ಮತ್ತು ಸಮಾನ ಶಿಕ್ಷಣ ನೀತಿ ಜಾರಿಗೆ ತರುವ ಬಗ್ಗೆ ಸಾಹಿತ್ಯ ಪ್ರೇಮಿಗಳಲ್ಲಿ ಜಾಗೃತಿ ಮೂಡಿಸುವ ಜತೆಗೆ, ಸಹಿ ಕೂಡ ಸಂಗ್ರಹಿ­ಸುತ್ತಿದ್ದೇವೆ. ಸಮ್ಮೇಳನದ ಎರಡನೇ ದಿನವಾದ ಇಂದು ಒಟ್ಟು ಸುಮಾರು 20 ಸಾವಿರ ಸಹಿ ಸಂಗ್ರಹವಾಗಿದ್ದು, ಮೂರು ದಿನದಲ್ಲಿ ಕನಿಷ್ಠ 50 ಸಾವಿರ ಮಂದಿ ಸಹಿ ಸಂಗ್ರಹಿಸುವ ನಿರೀಕ್ಷೆಯಿದೆ’ ಎಂದು ‘ಸಮಾನ ಶಿಕ್ಷಣಕ್ಕಾಗಿ ಆಂದೋಲನ’ದ ಕಾರ್ಯಕರ್ತೆ ಮಲ್ಲಿಗೆ ತಿಳಿಸಿದರು.

₹ 1ಕ್ಕೆ ದೇವನೂರ ಬರೆದ ಪತ್ರ
ಮಾತೃಭಾಷೆಯನ್ನು ಶಿಕ್ಷಣದಲ್ಲಿ ಜಾರಿಗೆ ತರುವುದರ ಕುರಿತು ಸಾಹಿತಿ ದೇವನೂರ ಮಹಾದೇವ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಬರೆದಿದ್ದ ‘ಎಳೆಯ ಶಿಕ್ಷಣದಲ್ಲಾದರೂ ಪಂಕ್ತಿಭೇದ ಕೂಡದು’ ಎಂಬ ಬಹಿರಂಗ ಪತ್ರವನ್ನು ₹ 1ಕ್ಕೆ ಆಂದೋಲನದ ಕಾರ್ಯಕರ್ತರು ಕರಪತ್ರ ಹಂಚಿಕೆಯ ಜತೆಗೆ ಮಾರು­ತ್ತಿದ್ದರು. ಸಾಹಿತ್ಯ ಪ್ರೇಮಿಗಳು ಈ ಪತ್ರವನ್ನು ಮುಗಿಬಿದ್ದು ಕೊಂಡು­ಕೊಳ್ಳುತ್ತಿದ್ದರು.

ಅಧ್ಯಕ್ಷರಿಗೆ ಮನವಿ ಪತ್ರ
ಸಮ್ಮೇಳನದ ಅಂತಿಮ ದಿನವಾದ ಮಂಗಳವಾರ ಕರಪತ್ರ, ಜನರ ಸಹಿಪತ್ರ ಹಾಗೂ ಮನವಿ ಪತ್ರಗಳನ್ನು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಅವರಿಗೆ ಸಲ್ಲಿಸಿ, ರಾಜ್ಯದಲ್ಲಿ  ಮಾತೃಭಾಷಾ ಮಾಧ್ಯಮ ಮತ್ತು ಸಮಾನ ಶಿಕ್ಷಣ ನೀತಿ ಜಾರಿಗೆ ಜನಾಂದೋಲನ ರೂಪಿಸುವಂತೆ ಕೋರಲಾ­ಗುವುದು ಎಂದು ‘ಸಮಾನ ಶಿಕ್ಷಣಕ್ಕಾಗಿ ಆಂದೋಲನ’ದ ಕಾರ್ಯಕರ್ತೆ ಮಲ್ಲಿಗೆ ಅವರು ಹೇಳಿದರು.

Write A Comment