ಮನೋರಂಜನೆ

ನ್ಯಾಶನಲ್ ಗೇಮ್ಸ್: ಮುಂದುವರಿದ ಹರ್ಯಾಣದ ಪ್ರಾಬಲ್ಯ; ಕರ್ನಾಟಕದ ಪ್ರಕಾಶ್ ನಂಜಪ್ಪಗೆ ಚಿನ್ನ

Pinterest LinkedIn Tumblr

manoj__

ತಿರುವನಂತಪುರಂ, ಫೆ.2: ಮೂವತ್ತೈದನೆಯ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕದ ಶೂಟರ್ ಪ್ರಕಾಶ ನಂಜಪ್ಪ ಚಿನ್ನದ ಪದಕ ಜಯಿಸಿದ್ದು ಹರ್ಯಾಣದ ಕ್ರೀಡಾಪಟುಗಳು 14 ಚಿನ್ನದ ಪದಕವನ್ನು ಜಯಿಸಿ ಮಿಂಚಿದ್ದಾರೆ.

ಗೇಮ್ಸ್‌ನಲ್ಲಿ ಹರ್ಯಾಣ 10 ಚಿನ್ನ, 3 ಬೆಳ್ಳಿ, 1 ಕಂಚು ಸಹಿತ ಒಟ್ಟು 14 ಪದಕವನ್ನು ಜಯಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಆತಿಥೇಯ ಕೇರಳ(3 ಚಿನ್ನ, 7 ಬೆಳ್ಳಿ ಹಾಗೂ 6 ಕಂಚು) ಐದನೆ ಹಾಗೂ ಕರ್ನಾಟಕ(1 ಚಿನ್ನ, 4 ಬೆಳ್ಳಿ, 5 ಕಂಚು) 10 ಪದಕ ಪಡೆದು 8ನೆ ಸ್ಥಾನದಲ್ಲಿದೆ. ನಂಜಪ್ಪ 50 ಮೀ. ಪಿಸ್ತೂಲ್ ವಿಭಾಗದಲ್ಲಿ 736.1 ಸ್ಕೋರ್ ದಾಖಲಿಸಿ ಚಿನ್ನದ ಪದಕ ಪಡೆದರು. ಗೇಮ್ಸ್‌ನ ಮೊದಲ ದಿನ ಪುರುಷರ, ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಆರು ಫೈನಲ್‌ಗಳು ನಡೆದಿದ್ದು ಐದರಲ್ಲಿ ಹರ್ಯಾಣ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಜಿತೇಂದರ್(74 ಕೆಜಿ, ಫ್ರೀಸ್ಟೈಲ್), ಮನೋಜ್ ಕುಮಾರ್(85ಕೆಜಿ, ಗ್ರೀಕೊ ರೊಮನ್) ಹಾಗೂ ರವೀಂದರ್ ಸಿಂಗ್(66ಕೆಜಿ ಗ್ರಿಕೊ ರೊಮನ್) ಪುರುಷರ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದರು. ಮಹಿಳಾ ವಿಭಾಗದಲ್ಲಿ ರಿತು ಮಲಿಕ್(55 ಕೆಜಿ ಫ್ರೀಸ್ಟೈಲ್) ಹಾಗೂ ಸುಮನ್ ಕುಂದು(69ಕೆಜಿ ಫ್ರೀಸ್ಟೈಲ್)ತಲಾ ಒಂದು ಸ್ವರ್ಣದ ಪದಕ ಸಂಪಾದಿಸಿ ಹರ್ಯಾಣಕ್ಕೆ ಚಿನ್ನದ ಮಳೆ ಹರಿಸಿದರು.

ಮಧ್ಯಪ್ರದೇಶದ ಈಜುಪಟು ಆ್ಯರೊನ್ ಡಿ’ಸೋಜಾ 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 1.52 ಸೆಕೆಂಡ್‌ನಲ್ಲಿ ಗುರಿ ತಲುಪಿ ನೂತನ ಚಾಂಪಿಯನ್ ಎನಿಸಿಕೊಂಡರು. ಗುವಾಹಟಿಯಲ್ಲಿ 2007ರ ಆವೃತ್ತಿಯ ಗೇಮ್ಸ್‌ನಲ್ಲಿ ವೀರ್‌ಧವಳ್ ಖಾಡೆ ನಿರ್ಮಿಸಿದ್ದ 1.53.91 ಸೆಕೆಂಡ್ ದಾಖಲೆ ಪತನಗೊಂಡಿದೆ. 1.53.27 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಕೇರಳದ ಸಾಜನ್ ಪ್ರಕಾಶ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಮಹಿಳಾ ಈಜು ಸ್ಪರ್ಧೆಯಲ್ಲಿ ಹರ್ಯಾಣದ 16ರ ಹರೆಯದ ಶಿವಾನಿ ಕಟಾರಿಯಾ 2.07.46 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಮಾತ್ರವಲ್ಲ ರಾಂಚಿಯಲ್ಲಿ 2011ರ ಆವೃತ್ತಿಯಲ್ಲಿ ರಿಚಾ ಮಿಶ್ರಾ ದಾಖಲಿಸಿದ್ದ ಗೇಮ್ಸ್ ದಾಖಲೆ(2.09.53 ಸೆ.) ಮುರಿದರು.

ಮಹಾರಾಷ್ಟ್ರದ ಮೊನಿಕ್ ಗಾಂಧಿ (2.09.44 ಸೆ.) ಬೆಳ್ಳಿ ಪದಕ ಹಾಗೂ ಕರ್ನಾಟಕದ ಮಾಳವಿಕಾ ವಿ.(2.09.89 ಸೆ.) ಕಂಚಿನ ಪದಕವನ್ನು ಜಯಿಸಿದ್ದಾರೆ. 100 ಮೀ. ಪುರುಷರ ಬಟರ್ ಫ್ಲೈ ಸ್ಪರ್ಧೆಯಲ್ಲಿ ಸ್ಥಳೀಯ ಆಟಗಾರ ಸಾಜನ್ ಪ್ರಕಾಶ್(55.03 ಸೆ.) ಚಿನ್ನ, ಬಂಗಾಳದ ಸುಪ್ರಿಯ ಮಂಡಳ್(55.18 ಸೆ.) ಬೆಳ್ಳಿ ಹಾಗೂ ಡಿ’ಸೋಜಾ(55.33 ಸೆ.) ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. 4್ಡ100 ಮೀ. ಪುರುಷರ ರಿಲೇ ಸ್ಪರ್ಧೆಯಲ್ಲಿ ಹೊಸ ಕೂಟ ದಾಖಲೆ ದಾಖಲಾಗಿದ್ದು, ಆತಿಥೇಯ ಕೇರಳ ತಂಡ 3.32.31 ಸೆ.ನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಜಯಿಸಿತು. ವೀರ್‌ಧವಳ್ ಖಾಡೆ ಅವರನ್ನೊಳಗೊಂಡ ಮಹಾರಾಷ್ಟ್ರ (3.33.10 ಸೆ.) ಬೆಳ್ಳಿ ಪದಕವನ್ನು ಹಾಗೂ ಮಧ್ಯಪ್ರದೇಶ (3.33.17 ಸೆ.) ಕಂಚಿನ ಪದಕವನ್ನು ಪಡೆಯಿತು.
ಮಹಿಳೆಯರ 4್ಡ100 ಮೀ. ಸ್ಪರ್ಧೆಯಲ್ಲಿ ಮಹಾರಾಷ್ಟ್ರ ತಂಡ ಮತ್ತೊಮ್ಮೆ ಗೇಮ್ಸ್ ದಾಖಲೆಯನ್ನು ಮುರಿಯಿತು. 4.04.57 ಸೆಕೆಂಡ್‌ನಲ್ಲಿ ಗುರಿ ತಲುಪಿದ ಮಹಾರಾಷ್ಟ್ರ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಕರ್ನಾಟಕ(4.06.50 ಸೆ.) ಎರಡನೆ ಹಾಗೂ ಕೇರಳ(4.12.40 ಸೆ.) ಮೂರನೆ ಸ್ಥಾನ ಪಡೆದುಕೊಂಡಿವೆ.
ಫುಟ್ಬಾಲ್‌ನ ಪ್ರಾಥಮಿಕ ಸುತ್ತಿನಲ್ಲಿ ಕೇರಳದ ಪುರುಷರ ಹಾಗೂ ಮಹಿಳಾ ತಂಡ ಗೆಲುವು ಸಾಧಿಸಿ ಶುಭಾರಂಭ ಮಾಡಿವೆ.
ಸ್ಕ್ವಾಷ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಸೌರವ್ ಘೋಷಾಲ್ ಹಾಗೂ ಎರಡನೆ ಶ್ರೇಯಾಂಕಿತ ಹರಿಂದರ್‌ಪಾಲ್ ಸಿಂಗ್ ಸಂಧು ಪುರುಷರ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಈ ಇಬ್ಬರು ಆಟಗಾರರು ಇಂಚೋನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.

ಮಹಿಳಾ ವಿಭಾಗದಲ್ಲಿ ಜೋತ್ಸ್ನಾ ಚಿನ್ನಪ್ಪ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

Write A Comment