ಕರ್ನಾಟಕ

ಸಿಎಂ ಸಿದ್ದರಾಮಯ್ಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಜೆಡಿಎಸ್ ತಯಾರಿ

Pinterest LinkedIn Tumblr

hdk-siddu

ಬೆಂಗಳೂರು, ಜ.31: ಸೋಮವಾರದಿಂದ ಆರಂಭವಾಗಲಿರುವ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಜೆಡಿಎಸ್ ಈ ಬಾರಿ ತನ್ನ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರ ಗಳನ್ನು ಪ್ರಯೋಗಿಸಲು ತೀರ್ಮಾನಿಸಿದೆ.

ಸರ್ಕಾರದ ಈ ಬಗ್ಗೆ ಈವರೆಗೂ ಮೃದು ಧೋರಣೆ ಅನುಸರಿಸಿದ್ದ ಜೆಡಿಎಸ್ ಈ ಬಾರಿ ಆಡಳಿತ ಪಕ್ಷದ ಲೋಪ ದೋಷಗಳನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಕಾರ್ಯತಂತ್ರ ರೂಪಿಸಿದೆ. ಅದರಲ್ಲೂ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಕೇಳಿ ಬಂದಿರುವ ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನ ಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಮನವಿ ಮಾಡಿದ್ದಾರೆ.

ಈಗಾಗಲೇ ಸೂಕ್ತ ದಾಖಲೆಗಳನ್ನು ಕಲೆ ಹಾಕಿರುವ ಕುಮಾರಸ್ವಾಮಿ ಅರ್ಕಾವತಿ ಕರ್ಮಕಾಂಡವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಇದರಲ್ಲಿ ಯಾರು ಯಾರು ಪಾಲುದಾರರಾಗಿದ್ದಾರೆ. ಸ್ವತಃ ಸಿದ್ದರಾಮಯ್ಯನವರೇ ಯಾವ ರೀತಿ ತಪ್ಪು ಮಾಡಿದ್ದಾರೆ ಎಂಬುದನ್ನು ದಾಖಲೆಗಳ ಮೂಲಕ ಚರ್ಚೆ ನಡೆಸಲು ಸಿದ್ಧರಾಗಿದ್ದಾರೆ. ಶತಾಯ ಗತಾಯ ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಹಣಿಯಲು ಸಜ್ಜಾಗಿರುವ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕಡ್ಡಾಯವಾಗಿ ಸದನಕ್ಕೆ ಹಾಜರಾಗುವಂತೆ ಸೂಚನೆ ಕೊಡಲಾಗಿದೆ. ಕೆಲವು ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆಯೂ ಪ್ರಸ್ತಾಪಿಸಲು ಜೆಡಿಎಸ್ ತೀರ್ಮಾನಿಸಿದೆ. ಪ್ರಮುಖವಾಗಿ ಇಂಧನ ಇಲಾಖೆಯ ಖರೀದಿಯಲ್ಲಿ ನಡೆದಿರುವ ಅವ್ಯವಹಾರ, ಅಕ್ರಮ ಮರಳುಗಾರಿಕೆ, ಬಿಎಂಐಸಿ ಯೋಜನೆಯ ಭ್ರಷ್ಟಾಚಾರ, ಬೆಂಗಳೂರು ಕೆರೆಗಳ ಒತ್ತುವರಿ, ಲೋಕೋಪಯೋಗಿ ಇಲಾಖೆಯ ಭ್ರಷ್ಟಾಚಾರ ಸೇರಿದಂತೆ ಹಲವು ಇಲಾಖೆಗಳಲ್ಲಿ ನಡೆಯುತ್ತಿರುವ ಕರ್ಮಕಾಂಡ ಸದನದಲ್ಲಿ ಪ್ರತಿಧ್ವನಿಸಲಿದೆ.

ಸಿದ್ದು ಟಾರ್ಗೆಟ್:
ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮೃದು ಧೋರಣೆ ಹೊಂದಿದ್ದ ಜೆಡಿಎಸ್ ಈಗ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ಈ ಬಾರಿಯ ಅಧಿವೇಶನದಲ್ಲಿ ಜೆಡಿಎಸ್ ಕೆಂಗಣ್ಣಿಗೆ ಸಿದ್ದರಾಮಯ್ಯ ಗುರಿಯಾಗಿದ್ದು, ಉಭಯ ಸದನಗಳಲ್ಲಿ ಅವರನ್ನೇ ಗುರಿಯಾಗಿಟ್ಟುಕೊಂಡು ಹೋರಾಟ ನಡೆಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಪಕ್ಷದ ಕಚೇರಿ ಕೈ ತಪ್ಪಿರುವುದು ಒಂದೆಡೆಯಾದರೆ ಪಕ್ಕದಲ್ಲಿ ಶೆಡ್ ಹಾಕಿಕೊಳ್ಳಲು ತಗಾದೆ ತೆಗೆದಿರುವುದು ಜೆಡಿಎಸ್ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಕಳೆದ ವಾರ ಜೆಡಿಎಸ್ ಶೆಡ್ ತೆರವಿಗೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ತಗಾದೆ ತೆಗೆದರು. ಇದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂಬುದು ದೇವೇಗೌಡರ ಆರೋಪವಾಗಿದೆ. ಇದಕ್ಕಾಗಿ ಜಂಟಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿ ಬೀಳಲು ದೇವೇಗೌಡರು ದಾಖಲೆಗಳ ಸಮೇತ ಹೋರಾಟ ನಡೆಸಲು ಸೂಚನೆ ಕೊಟ್ಟಿದ್ದಾರೆ.

Write A Comment