ಕರ್ನಾಟಕ

ಬಿಜೆಪಿ ಪ್ರತಿಭಟನೆ:ಸಿಎಂ ಮನೆ ಮುತ್ತಿಗೆ ಯತ್ನ

Pinterest LinkedIn Tumblr

CM-House

ಬೆಂಗಳೂರು, ಜ.31- ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಳಪೆ ಕಾಮಗಾರಿ, ನಕಲಿ ಬಿಲ್ ತಯಾರಿಕೆ, ಶಾಸಕ ಮುನಿರತ್ನ ನಾಯ್ಡು ಮನೆಯಲ್ಲಿ ಕಡತ ಪತ್ತೆಯನ್ನು ಖಂಡಿಸಿ ಇಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನಾ ರ್ಯಾ ಲಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಒಂಬತ್ತು ವಾರ್ಡ್‌ಗಳಲ್ಲಿ ಕಳಪೆ ಕಾಮಗಾರಿ, ಕಡತ ನಾಪತ್ತೆ, ನಕಲಿ ಬಿಲ್ ಇನ್ನಿತರ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಶಾಸಕ ಮುನಿ ರತ್ನ ನಾಯ್ಡು ಹಾಗೂ ಅಧಿಕಾರಿ ಗಳನ್ನು ಸಿಬಿಐ ತನಿಖೆಗೆ ಒಳಪಡಿಸ ಬೇಕು. ಇವರ ವಿರುದ್ಧ ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಎಸ್ಪಿ ಮಹೇಶ್ ವರ್ಗಾವಣೆಯನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ರ್ಯಾ ಲಿಯುದ್ದಕ್ಕೂ ಕಾಂಗ್ರೆಸ್ ಹಾಗೂ ಮುನಿರತ್ನನಾಯ್ಡು ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಲ್ಲದೆ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು. ಮುನಿರತ್ನ ನಾಯ್ಡು ಅವರ ಪ್ರಕರಣವನ್ನು ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಎಸ್ಪಿ ಮಹೇಶ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಪ್ರಕರಣವನ್ನೇ ಮುಚ್ಚಿ ಹಾಕುವ ಪ್ರಯತ್ನ ಮಾಡಿದೆ. ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದಾಗಿ ಹೇಳುವ ಮುಖ್ಯಮಂತ್ರಿಗಳು ಸ್ವತಃ ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.

ಆಡಳಿತಾರೂಢ ಸರ್ಕಾರದಲ್ಲಿ ಸಚಿವರು ತಮಗೆ ಸೂಕ್ತ ಖಾತೆ ನೀಡಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ. ಬಿಬಿಎಂಪಿಯಲ್ಲಿ ನಡೆಯುವ ಅಕ್ರಮ ಮುಚ್ಚಿ ಹಾಕಲು ಯತ್ನಿಸಿರುವ ಸರ್ಕಾರ ಒಂದು ಕಡೆಯಾದರೆ ಶಾಸಕರು ತಮ್ಮ ಮನೆಗೆ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಿಬಿಎಂಪಿ ಅಧಿಕಾರಿಗಳಾದ ವಿಶ್ವಾಸ್, ನಾಗರಾಜ್ ಸೇರಿದಂತೆ ಹಲವರನ್ನು ಬಂಧಿಸಿ ನಿಷ್ಪಕ್ಷಪಾತ ತನಿಖೆಗೆ ಮುಂದಾಗುವಂತೆ ಆಗ್ರಹಿಸಿದರು. ಶಾಸಕ ಮುನಿರಾಜು ಮಾತನಾಡಿ, ಆರ್.ಆರ್.ನಗರ, ಮಲ್ಲೇಶ್ವರಂ, ಗಾಂಧಿನಗರಗಳಲ್ಲಿ ಕಾಮಗಾರಿಯೇ ನಡೆಸಿಲ್ಲ. ಆದರೂ ಬಿಲ್ ನೀಡಲಾಗಿದೆ. ಇದರಿಂದ 157 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ತಿಳಿದುಬರುತ್ತದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಹಾಗೂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಶಾಸಕರಾದ ಅಶ್ವತ್ಥನಾರಾಯಣ, ವಿಜಯಕುಮಾರ್, ರಘು, ಅಶ್ವತ್ಥನಾರಾಯಣ, ಬಿಬಿಎಂಪಿ ಸದಸ್ಯರಾದ ನಂಜುಂಡಪ್ಪ, ರಾಮಚಂದ್ರಪ್ಪ, ಲಕ್ಷ್ಮೀಕಾಂತರೆಡ್ಡಿ, ಎನ್.ಆರ್.ರಮೇಶ್, ಮುನಿಸ್ವಾಮಿ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

Write A Comment