ಕನ್ನಡಿಗ ಕೆ.ಎಲ್. ರಾಹುಲ್ ಈಗ ರಣಜಿ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಉತ್ತರ ಪ್ರದೇಶ ವಿರುದ್ಧ ತ್ರಿಶತಕ (337) ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ತ್ರಿಬಲ್ ಸೆಂಚುರಿ ಹೊಡೆದ ಕರ್ನಾಟಕದ ಮೊದಲ ಆಟಗಾರ, ರಣಜಿಯಲ್ಲಿ ತ್ರಿಶತಕ ಹೊಡೆದ ದೇಶದ 28ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದು ಒಟ್ಟಾರೆ ರಣಜಿಯಲ್ಲಿ ದಾಖಲಾದ 33ನೇ ತ್ರಿಶತಕವಾಗಿದೆ. 2004-05ರಲ್ಲಿ ರೋಲ್ಯಾಂಡ್ ಬ್ಯಾರಿಂಗ್ಟನ್ ಮಧ್ಯಪ್ರದೇಶ ವಿರುದ್ಧ 283 ರನ್ ಗಳಿಸಿದ್ದು ಕರ್ನಾಟಕ ಪರ ದಾಖಲಾಗಿದ್ದ ಇದುವರೆಗಿನ ದಾಖಲೆಯಾಗಿತ್ತು.
ಅದೂ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲೇ ದಾಖಲಾಗಿತ್ತು ಎನ್ನುವುದು ವಿಶೇಷ. ಒಟ್ಟಾರೆಯಾಗಿ ಉತ್ತರ ಪ್ರದೇಶದ ವಿರುದ್ಧ ಆಟಗಾರನೊಬ್ಬ ಹೊಡೆದ 2ನೇ ತ್ರಿಶತಕ ಇದಾಗಿದೆ. ಈ ಹಿಂದೆ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ಆಟಗಾರ ಕೇದಾರ್ ಜಾದವ್ 327 ರನ್ ಹೊಡೆದಿದ್ದರು.
