ಕರ್ನಾಟಕ

3 ಲಕ್ಷ ಕದ್ದವರನ್ನು 6 ಗಂಟೆ ಅವಧಿಯಲ್ಲೇ ಹಿಡಿದ ಮೈಸೂರು ಪೊಲೀಸರು

Pinterest LinkedIn Tumblr

jail

ಮೈಸೂರು,ಜ.25: ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಅದ್ವೈತ ಹೊಂಡೈ ಕಾರು ಶೋರೂಮ್‌ನಲ್ಲಿ 3 ಲಕ್ಷ ರೂ. ಕಳವು ಮಾಡಿದ್ದ ಮೂವರನ್ನು ಕೇವಲ 6 ಗಂಟೆಯಲ್ಲಿ ಬಂಧಿಸುವಲ್ಲಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಂಡೈ ಶೋರೂಮ್ ನೌಕರರಾದ ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರದ ಪವನ್‌ಕುಮಾರ್(22), ಮದ್ದೂರು ತಾಲ್ಲೂಕಿನ ಯಡಗನಹಳ್ಳಿ ಚಿಕ್ಕರಸಿನಕೆರೆಯ ಕಬ್ಬನಹಳ್ಳಿ ಗ್ರಾಮದ ಮಧುಕುಮಾರ್(25) ಹಾಗೂ ಬಿಳಿಕೆರೆಯ ಗಾಗೇನಹಳ್ಳಿ ವಾಸಿ ಹೇಮಂತ್ ಕುಮಾರ್ ಬಂಧಿತ ಆರೋಪಿಗಳು.

ಬಂಧಿತರ ಪೈಕಿ ಮಧುಕುಮಾರ್ ಶೋರೂಮ್‌ನಲ್ಲಿ ಕ್ಯಾಶಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಸರ್ವೀಸ್ ವಿಭಾಗದ ಪವನ್‌ಕುಮಾರ್ ಕುಮಾರ್ ಜೊತೆ ಸೇರಿ ಹೇಮಂತ್‌ಕುಮಾರ್‌ನನ್ನು ಬಳಸಿಕೊಂಡು ಮಧುಕುಮಾರ್ ಮೂರು ಲಕ್ಷ ರೂ.ಗಳನ್ನು ಶುಕ್ರವಾರ ಕಳವು ಮಾಡಿದ್ದರು.

ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರವಿಶಂಕರ್ ಲಕ್ಷ್ಮೀಪುರಂ ಠಾಣೆಗೆ ಈ ಸಂಬಂಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಧುಕುಮಾರ್‌ನನ್ನು ಠಾಣೆಗೆ ಕರೆಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿದ್ದನ್ನು ತಿಳಿಸಿದ್ದಾನೆ.

ಪವನ್‌ಕುಮಾರ್ ಕಳ್ಳತನ ಯೋಜನೆ ರೂಪಿಸಿ ನಕಲಿ ಕೀ ಸಿದ್ಧಪಡಿಸಿ ಹೇಮಂತ್‌ಕುಮಾರ್ ಮೂಲಕ ಹಣ ಕಳವು ಮಾಡಲಾಗಿತ್ತು. ಕದ್ದ ಹಣವನ್ನು ಹೇಮಂತ್‌ಕುಮಾರ್ ಅಜ್ಜಿ ಮನೆಯಲ್ಲಿ ಇಡಲಾಗಿತ್ತು. ಪೊಲೀಸರು ಈ ಹಣವನ್ನು ವಶಕ್ಕೆ ಪಡೆದಿದ್ದಾರೆ. ಡಿಸಿಪಿ ಮಹದೇವಯ್ಯ ಅವರ ಮಾರ್ಗದರ್ಶನದಲ್ಲಿ ಎಸಿಪಿ ಕವಿತಾ ಹಾಗೂ ಲಕ್ಷ್ಮಿಪುರಂ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment